ಶನಿವಾರ, ಅಕ್ಟೋಬರ್ 16, 2021
22 °C
‘ವಿಶೇಷ ನಿಯಮ’ ರೂಪಿಸದ ರಾಜ್ಯ ಸರ್ಕಾರ; 18 ಅಧಿಕಾರಿಗಳಿಗೆ ಸಂಕಷ್ಟ

ಕೆಪಿಎಸ್‌ಸಿ: ಹುದ್ದೆ ಕೊಟ್ಟರೂ ‘ಸೌಲಭ್ಯ’ ಇಲ್ಲ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಯ ಮೂಲ ಆಯ್ಕೆ ಪಟ್ಟಿಯಿಂದ ವಂಚಿತರಾಗಿದ್ದ 18 ಅಭ್ಯರ್ಥಿಗಳಿಗೆ 13 ವರ್ಷಗಳ ಬಳಿಕ ರಾಜ್ಯ ಸರ್ಕಾರ ಹುದ್ದೆ ನೀಡಿದ್ದರೂ ‘ಸೇವಾ ಸೌಲಭ್ಯ’ ಕೊಟ್ಟಿಲ್ಲ!

ಹೈಕೋರ್ಟ್‌ನಲ್ಲಿದ್ದ ಈ ಸಾಲಿನ ನೇಮಕಾತಿ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆಯ ಅಡಕತ್ತರಿಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಹುದ್ದೆ ನೀಡಿತ್ತು. ಹೀಗೆ ನೇಮಕಗೊಂಡವರ ಪೈಕಿ, ವಿವಿಧ ಇಲಾಖೆಗಳಲ್ಲಿ ಎ, ಬಿ, ಸಿ ವೃಂದಗಳಲ್ಲಿ ಈಗಾಗಲೇ 15 ರಿಂದ 26 ವರ್ಷ ಕರ್ತವ್ಯ ಸಲ್ಲಿಸಿದ 10 ಅಧಿಕಾರಿಗಳೂ ಇದ್ದಾರೆ.

‘ಪತ್ರಾಂಕಿತ’ ಹುದ್ದೆ ಎಂಬ ಕಾರಣಕ್ಕೆ ಹಳೆ ಹುದ್ದೆ ತ್ಯಜಿಸಿ 2019ರ ಏಪ್ರಿಲ್‌ನಲ್ಲಿ ಹೊಸ ಹುದ್ದೆಗೆ ಸೇರಿಕೊಂಡ ಈ ಅಧಿಕಾರಿಗಳನ್ನೂ ‘ಹೊಸ ಅಭ್ಯರ್ಥಿಗಳು’ ಎಂದು ಸರ್ಕಾರ ಪರಿಗಣಿಸಿದೆ.

ಹೀಗಾಗಿ, ಈ ಹಿಂದಿನ ಹುದ್ದೆಯಲ್ಲಿಯೇ ಅವರೆಲ್ಲರೂ ಪ್ರೊಬೇಷನರಿ ಅವಧಿ (2 ವರ್ಷದ ಪರೀಕ್ಷಾರ್ಥ ಸೇವಾ ಅವಧಿ) ಮುಗಿಸಿದ್ದರೂ, ಮತ್ತೊಮ್ಮೆ ಪ್ರೊಬೇಷನರಿ ಅವಧಿ ಪೂರೈಸಿದ್ದಾರೆ. ಅಷ್ಟೇ ಅಲ್ಲ, ಈ ಅಧಿಕಾರಿಗಳು ಈಗಾಗಲೇ ಸಲ್ಲಿಸಿದ್ದ ಸೇವೆಯನ್ನು ಸರ್ಕಾರ ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಪರಿಣಾಮ, ಸೇವಾ ಜ್ಯೇಷ್ಠತೆ, ಬಡ್ತಿ ಭಾಗ್ಯ, ವೇತನ ಸೌಲಭ್ಯದಿಂದ ಅವರೆಲ್ಲರೂ ವಂಚಿತರಾಗಿದ್ದಾರೆ.

ಆದರೆ, ಕೆಪಿಎಸ್‌ಸಿ ಪ್ರಕಟಿಸಿದ್ದ ಮೂಲ ಪಟ್ಟಿಯಲ್ಲಿ ಆಯ್ಕೆಯಾಗಿ, ಅಂತಿಮ ಪರಿಷ್ಕೃತ ಪಟ್ಟಿಯಲ್ಲಿರುವಂತೆ ಹಳೆ ಇಲಾಖೆಯಿಂದ ಹೊಸ ಇಲಾಖೆಗೆ ಹುದ್ದೆ ಬದಲಾಗಿ ವರದಿ ಮಾಡಿಕೊಂಡ ಅಧಿಕಾರಿಗಳಿಗೆ ಸರ್ಕಾರ ‘ವಿಶೇಷ ನಿಯಮ’ಗಳನ್ನು ರೂಪಿಸಿ ಸೌಲಭ್ಯಗಳನ್ನು ಕಲ್ಪಿಸಿದೆ. ಸ್ಥಾನಪಲ್ಲಟಗೊಂಡ ಈ ಅಧಿಕಾರಿಗಳಿಗೆ ಸಂಬಂಧಿಸಿದಂತೆ, ಇದೇ ಮಾರ್ಚ್‌ 23ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಪರೀಕ್ಷಾರ್ಥ ಸೇವಾ ಅವಧಿಯಿಂದ ವಿನಾಯಿತಿ ನೀಡಿತ್ತು. ಅಲ್ಲದೆ, ಸೇವಾ ಜ್ಯೇಷ್ಠತೆ, ವೇತನ ನಿಗದಿಪಡಿಸಲು ಕೂಡಾ ಆಡಳಿತ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

ಆ ಮೂಲಕ, ಕೆಪಿಎಸ್‌ಸಿಯ ಒಂದೇ ಪಟ್ಟಿಯಲ್ಲಿ (ಅಂತಿಮ ಪರಿಷ್ಕೃತ) ವಿವಿಧ ಹುದ್ದೆಗಳಿಗೆ ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ಸೇವಾ ಸೌಲಭ್ಯಗಳನ್ನು ನೀಡುವ ವಿಚಾರದಲ್ಲಿ ತಾರತಮ್ಯ ಮಾಡಿದೆ ಎಂಬ ಆರೋಪ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗಿದೆ.

‘1998ರ ಸಾಲಿನ ಕೆಎಎಸ್‌ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು 2006ರಲ್ಲಿ ಕೆಪಿಎಸ್‌ಸಿ ಮೊದಲು ಪ್ರಕಟಿಸಿತ್ತು. ಬಳಿಕ ಮೂರು ಬಾರಿ ಪರಿಷ್ಕರಿಸಿದೆ. ಪ್ರತಿ ಬಾರಿ ಪರಿಷ್ಕರಿಸಿದಾಗಲೂ ಅಧಿಕಾರಿಗಳ ಹುದ್ದೆಗಳಲ್ಲಿ ಸ್ಥಾನಪಲ್ಲಟ ಆಗಿದೆ. ಕೆಪಿಎಸ್‌ಸಿ ತಪ್ಪಿನಿಂದಾಗಿ ಮೂಲಪಟ್ಟಿಯಿಂದ ನಾವು ವಂಚಿತರಾಗಿದ್ದೆವು. ಸುದೀರ್ಘ ಕಾನೂನು ಹೋರಾಟದ ಬಳಿಕ ಹುದ್ದೆ ಗಿಟ್ಟಿಸಿಕೊಂಡಿದ್ದೆವು. ಜ. 30ರಂದು ಕೆಪಿಎಸ್‌ಸಿ ಪ್ರಕಟಿಸಿದ್ದ ಅಂತಿಮ ಪರಿಷ್ಕೃತ ಆಯ್ಕೆ ಪಟ್ಟಿಯಂತೆ‌ ನೇಮಕಾತಿ ಆದೇಶ ಪಡೆದ, ಸರ್ಕಾರಿ ಸೇವೆಯಲ್ಲಿದ್ದ 10 ಅಧಿಕಾರಿಗಳನ್ನೂ ಸೇರಿಸಿ ಎಲ್ಲರನ್ನೂ ಹೊಸಬರಂತೆ ನೇಮಿಸಿಕೊಳ್ಳಲಾಗಿದೆ. ಆದರೆ, ಪಿಂಚಣಿ, ಸೇವಾ ಜ್ಯೇಷ್ಠತೆ, ವೇತನ ನಿಗದಿಗೆ ಸಂಬಂಧಿಸಿದಂತೆ ಯಾವುದೇ ನಿಯಮವನ್ನು ಸರ್ಕಾರ ರೂಪಿಸಿಲ್ಲ’ ಎಂದು ಅಧಿಕಾರಿಗಳು ಬೇಸರ ತೋಡಿಕೊಂಡಿದ್ದಾರೆ.

ಮುಗಿಯದ ನೇಮಕಾತಿ ಗೊಂದಲ
1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗೆ ಆಯ್ಕೆಯಾದ ಕೆಲವರು ನಿವೃತ್ತರಾದರೂ, ನೇಮಕಾತಿ ಗೊಂದಲ ಮಾತ್ರ ಮುಗಿದಿಲ್ಲ. ಪರಿಷ್ಕೃತ ಪಟ್ಟಿಯಲ್ಲಿ ಹುದ್ದೆ ಬದಲಾದ ಹಲವರು ಕೆಎಟಿಯಿಂದ ತಡೆಯಾಜ್ಞೆ ಪಡೆದು ಹಳೆ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಹಳೆ ಹುದ್ದೆ ತ್ಯಜಿಸಿ ಹೊಸ ಹುದ್ದೆಗೆ ಬಂದವರು, ಹಳೆ ಹುದ್ದೆಯ ಸೇವಾ ಅವಧಿಯನ್ನು ಸರ್ಕಾರ ಪರಿಗಣಿಸದಿರುವ ಬಗ್ಗೆ ನಿರಾಶೆ ಹೊಂದಿದ್ದಾರೆ.

ಸೇವಾ ಜ್ಯೇಷ್ಠತೆ, ವೇತನ ಸೌಲಭ್ಯ ನೀಡುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಹೀಗಾಗಿ, ಹಳೆ ಹುದ್ದೆಗೇ ಮರಳುವುದೇ, ಹೊಸ ಹುದ್ದೆಯಲ್ಲೇ ಇರಬೇಕೇ ಎಂಬ ಗೊಂದಲದಲ್ಲಿದ್ದಾರೆ ಹಲವು ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು