ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಿದ ಇಬ್ಬರು ಮಾಜಿ ಶಾಸಕರು, ಮಾಜಿ ಮೇಯರ್‌

Last Updated 7 ಮಾರ್ಚ್ 2023, 6:31 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಂತೆ, ‘ಆಪರೇಷನ್ ಹಸ್ತ’ ನಡೆಸಿದ ಕಾಂಗ್ರೆಸ್‌, ಇಬ್ಬರು ಮಾಜಿ ಶಾಸಕರು ಮತ್ತು ಒಬ್ಬ ಮಾಜಿ ಮೇಯರ್‌ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಕೊಳ್ಳೆಗಾಲ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ನಂಜುಂಡಸ್ವಾಮಿ ಮತ್ತು ವಿಜಯಪುರದ ಮಾಜಿ ಶಾಸಕ ಮನೋಹರ ಐನಾಪುರ ಅವರು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಸೇರ್ಪಡೆಯಾದರು. ಇದೇ ವೇಳೆ ಮೈಸೂರು ಮಾಜಿ ಮೇಯರ್ ಪುರುಷೋತ್ತಮ ಕೂಡಾ ‘ಕೈ’ ಹಿಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರ ಜೊತೆ ಎಲ್ಲರೂ ಕಾಂಗ್ರೆಸ್ ಸೇರಿದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮುಖಂಡರಾದ ಸಲೀಂ ಅಹ್ಮದ್‌, ಪ್ರಿಯಾಂಕ್ ಖರ್ಗೆ, ಆರ್. ಧ್ರುವನಾರಾಯಣ, ರಾಜಶೇಖರ್ ಪಾಟೀಲ ಇದ್ದರು.

‘ಇವತ್ತು ಮಾಜಿ ಶಾಸಕರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಲಿ ಶಾಸಕು ಪಕ್ಷ ಸೇರಲಿದ್ದು, ಅವರ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಂಜುಂಡಸ್ವಾಮಿ ಬಿಜೆಪಿಯಲ್ಲಿದ್ದರು. ಕೊಳ್ಳೆಗಾಲದಲ್ಲಿ ಅನೇಕ‌ ಚುನಾವಣೆ ಎದುರಿಸಿದ್ದರು. ಅವರು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಒಪ್ಪಿ ಕಾಂಗ್ರೆಸ್‌ಗೆ ಬಂದಿದ್ದಾರೆ. ಮನೋಹರ್ ಐನಾಪೂರ ಅವರು ನಾಗಠಾಣ ಕ್ಷೇತ್ರದ ಮಾಜಿ ಶಾಸಕ. ಅವರು ಮತ್ತು ಮಾಜಿ ಮೇಯರ್ ಪುರುಷೋತ್ತಮ್ ಕೂಡಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ’ ಎಂದರು.

‘ಚುನಾವಣೆ ಹೆಚ್ಚು ದೂರ ಇಲ್ಲ. ಬಿಜೆಪಿಯವರು ಚುನಾವಣೆಯನ್ನು ಈಗಲೇ ನಡೆಸಲು ತರಾತುರಿಯಲ್ಲಿ ಇದ್ದಾರೆ. ಎಷ್ಟು ದಿನ ಬೇಗ ಆಗುತ್ತೋ ಅಷ್ಟು ಲಾಭ ಎಂಬ ಮನಸ್ಥಿತಿಯಲ್ಲಿ ಅವರು ಇದ್ದಾರೆ. ತರಾತುರಿಯಲ್ಲಿ ಟೆಂಡರ್ ಕರೆದು ಹಣ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಶಿವಕುಮಾರ್‌ ಆರೋಪಿಸಿದರು.

‘ನಾವು ಯಾವಾಗ ಬೇಕಾದರೂ ಚುನಾವಣೆಗೆ ಸಿದ್ದ. ಚುನಾವಣಾ ಆಯೋಗ ಚುನಾವಣೆ ದಿನ ಘೋಷಣೆ ಮಾಡಬೇಕು. ಈ ಮೂಲಕ ಭ್ರಷ್ಟಾಚಾರ ಕೊನೆಗೊಳಿಸಬೇಕು. ನಮ್ಮ‌ ಹಿಂದಿನ ಸಮೀಕ್ಷೆಯಲ್ಲಿ ನಮಗೆ 134 ಸ್ಥಾನಗಳು ಇದ್ದವು. ಈಗಿನ ಸಮೀಕ್ಷೆಯಲ್ಲಿ ಅದು 140ಕ್ಕೆ ಏರಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT