ಸೋಮವಾರ, ಆಗಸ್ಟ್ 2, 2021
22 °C

ಲಸಿಕೆ ಬಗ್ಗೆ ಗ್ರಾಮೀಣ ಜನರಿಗೆ ಅರಿವು ಮೂಡಿಸುವುದೇ ಸವಾಲಾಗಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ/ಬೀದರ್: ಲಸಿಕೆಗಳ ಬಗ್ಗೆ ಜನರ ಅಪನಂಬಿಕೆ ಇಂದು ನಿನ್ನೆಯದಲ್ಲ. ಇಂಥ ಅಭಿಯಾನಗಳಿಗೆ ಆರಂಭದ ದಿನಗಳಲ್ಲಿ ಜನರು ಹಿಂಜರಿಕೆ ತೋರುವುದು ಸಾಮಾನ್ಯ. ಹಿಂದೆಲ್ಲ ಧಾರ್ಮಿಕ ಕಾರಣ, ಮೌಢ್ಯ ಅಥವಾ ಭಯದಿಂದ ಜನರು ಹಿಂಜರಿಯುತ್ತಿದ್ದರೆ, ಈಗ ತಪ್ಪು ಮಾಹಿತಿಗಳು ಜನರನ್ನು ಹಿಂಜರಿಯುವಂತೆ ಮಾಡುತ್ತಿವೆ.

20 ವರ್ಷದ ಹಿಂದೆ ಜನರಿಗೆ ಲಸಿಕೆ ಹಾಕಿಸುವುದಿರಲಿ, ಅವರನ್ನು ಸಂಪರ್ಕಿಸಿ ಅರಿವು ಮೂಡಿಸುವುದೇ ಸವಾಲಾಗಿತ್ತು. ಪೋಲಿಯೊ, ಕ್ಷಯ ಮತ್ತು ದಡಾರ ಹರಡುವಿಕೆ ನಿಯಂತ್ರಿಸಲು ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಲಸಿಕೆ ಹಾಕಬೇಕಿತ್ತು.

‘1985ರ ಅವಧಿಯಲ್ಲಿ ‘ಬರ್ಡ್‌’ ಎಂಬ ಸ್ವಯಂ–ಸೇವಾ ಸಂಸ್ಥೆಯು ಬೀದರ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಸಂಸ್ಥೆಯ ಪ್ರತಿನಿಧಿಗಳು ಜಿಲ್ಲೆಯಾದ್ಯಂತ ಸಂಚರಿಸಿ ತಳ ಸಮುದಾಯದ ಮತ್ತು ಮೌಢ್ಯಾಚರಣೆ ಮಾಡುವ ಸಮುದಾಯದವರನ್ನು ಭೇಟಿಯಾಗುತ್ತಿದ್ದರು. ಆರೋಗ್ಯ ರಕ್ಷಣೆಗೆ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವೆಂದು ಜಾಗೃತಿ ಮೂಡಿಸುತ್ತಿದ್ದರು. ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿ ಆಯಾ ಗ್ರಾಮಗಳಿಗೆ ತೆರಳಿ, ಜನರಿಗೆ ಲಸಿಕೆ ಹಾಕುತ್ತಿದ್ದರು’ ಎಂದು ಬೀದರ್‌ನ ಆರೋಗ್ಯ ಮೇಲ್ವಿಚಾರಕ ಮಲ್ಲಿಕಾರ್ಜುನ ಸದಾಶಿವ ಹೇಳಿದರು.

‘25 ವರ್ಷಗಳ ಹಿಂದೆ ಆರೋಗ್ಯ ಸಹಾಯಕನಾಗಿದ್ದ ನಾನು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, ಅವರಿಗೆ ತಿಳಿ ಹೇಳುತ್ತಿದ್ದೆ. ಗ್ರಾಮಸ್ಥರು ಕೇಳುತ್ತಿದ್ದ ಆತಂಕ ಮತ್ತು ಭೀತಿಯ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿ, ಲಸಿಕೆ ಹಾಕಿಸಬೇಕಾಗುತ್ತಿತ್ತು‌’ ಎಂದು ಅವರು ಸ್ಮರಿಸಿದರು.

‘15 ವರ್ಷಗಳ ಹಿಂದೆ ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಪದ್ಧತಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿರಲಿಲ್ಲ. ವೈದ್ಯರ ಮಾರ್ಗದರ್ಶನದಲ್ಲಿ ಗ್ರಾಮಗಳಿಗೆ ತೆರಳಿ ಕುಟುಂಬ ಸದಸ್ಯರ ಸಮೀಕ್ಷೆ ನಡೆಸಿ, ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುತ್ತಿದ್ದೆವು. ತಿಂಗಳ ಮೊದಲ ಅಥವಾ ಕೊನೆಯ ವಾರ ನಿಗದಿಪಡಿಸಿಕೊಂಡು ಹೋಗುತ್ತಿದ್ದೆವು’ ಎಂದು ಕಲಬುರ್ಗಿ ಜಿಲ್ಲೆಯ ಸೇಡಂನ ಆರೋಗ್ಯ ಸಹಾಯಕಿ ಶಶಿಕಲಾ ಹೇಳಿದರು.

‘ಪೋಲಿಯೊ ಲಸಿಕೆ ಸಕಾಲಕ್ಕೆ ಹಾಕಿಸಿಕೊಳ್ಳದಿದ್ದರೆ, ಅಂಗವೈಕಲ್ಯ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿ ಹೇಳುವುದರ ಜೊತೆಗೆ ಆರೋಗ್ಯ ರಕ್ಷಿಸಿಕೊಳ್ಳುವ ಕುರಿತು ತಿಳಿ ಹೇಳಬೇಕಿತ್ತು. ನಂತರ ಪೋಷಕರು ಮಕ್ಕಳಿಗೆ ನಿರಾತಂಕವಾಗಿ ಲಸಿಕೆ ಹಾಕಿಸುತ್ತಿದ್ದರು’ ಎಂದರು.

ವರ್ಷಗಳು ಕಳೆದಂತೆ ಆಯಾ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಶಿಬಿರಗಳನ್ನು ಆಯೋಜಿಸಿ, ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆದು ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಿತು. ಶಾಲಾ ಶಿಕ್ಷಕರು ಮತ್ತು ಮಕ್ಕಳು ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಹಲವು ಕಾರ್ಯಕ್ರಮಗಳು ನಡೆದವು.

ಪೂರಕ ಮಾಹಿತಿ: ರಾಹುಲ ಬೆಳಗಲಿ, ಚಂದ್ರಕಾಂತ ಮಸಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು