ಶನಿವಾರ, ಜನವರಿ 16, 2021
17 °C
ಜಲ್‌ಜೀವನ್ ಮಿಷನ್ ಅಡಿ ಕಾರ್ಯಗತ

23 ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಂಗಳೂರು: ಕೇಂದ್ರ ಪ್ರಾಯೋಜಿತ ‘ಜಲ್‌ಜೀವನ್‌ ಮಿಷನ್‌’ ಯೋಜನೆಯಡಿ ಈ ವರ್ಷ 23 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿ ಕುಡಿಯುವ ನೀರು ಒದಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ನಗರದಲ್ಲಿ ಜಲ್‌ಜೀವನ್‌ ಮಿಷನ್‌ನ ಎರಡು ದಿನಗಳ ಕಾರ್ಯಾಗಾರದ ಪ್ರಯುಕ್ತ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನದಿ ಮೂಲ ಇದ್ದು, ನಲ್ಲಿ ನೀರಿನ ಸಂಪರ್ಕ ಇರುವುದಿಲ್ಲವೊ ಅಲ್ಲಿ  ನಲ್ಲಿ ಸಂಪರ್ಕ ನೀಡಲು ಹೆಚ್ಚಿನ ಒತ್ತು ನೀಡುತ್ತೇವೆ. ಜಲಮೂಲಗಳು ವಿಫಲವಾಗಿರುವ ಕಡೆಗಳಲ್ಲಿ ಕೈ ಹಾಕುವುದಿಲ್ಲ ಎಂದು ಹೇಳಿದರು.

‘ಸ್ವಾಮಿತ್ವ’ ಯೋಜನೆಯಡಿ ತೆರಿಗೆ ವ್ಯಾಪ್ತಿಗೆ ಒಳಪಡದ ಮತ್ತು ಬಿಟ್ಟು ಹೋಗಿರುವ ಸ್ವತ್ತುಗಳ ಸರ್ವೆ ನಡೆಯುತ್ತಿದೆ. ಆರು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಸಮೀಕ್ಷೆ ಕಾರ್ಯ ಪೂರ್ಣಗೊಂಡ ಬಳಿಕ ಸಂಗ್ರಹವಾಗುವ ಆಸ್ತಿ ತೆರಿಗೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೇ ನೀಡಲಾಗುವುದು ಎಂದು ಈಶ್ವರಪ್ಪ ಹೇಳಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ₹1 ಕೋಟಿ ಅನುದಾನ ಸಿಗುತ್ತದೆ. ಯಾವುದೇ ಗ್ರಾಮ ಪಂಚಾಯಿತಿಗೂ ಅನುದಾನ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ. ಸಾಕಷ್ಟು ಕಟ್ಟಡಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ ಎಂದರು.

‘ಪಂಚತಂತ್ರ’ ಸಾಫ್ಟ್‌ವೇರ್‌ ಮೂಲಕ ನೋಂದಣಿಯಾಗಿರುವ ಕಟ್ಟಡಗಳು ತೆರಿಗೆ ವ್ಯಾಪ್ತಿಯಲ್ಲಿ ಇರುತ್ತವೆ. ಉಳಿದವು ಇರುವುದಿಲ್ಲ. ಬಿಟ್ಟು ಹೋಗಿರುವ ಕಟ್ಟಡಗಳನ್ನು ಸೇರಿಸಲಾಗುತ್ತದೆ. ತೆರಿಗೆ ಪಾವತಿ ಮಾಡದೇ ಇರುವವರಲ್ಲಿ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳೂ ಸೇರಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಪ್ರಧಾನಮಂತ್ರಿ ಗ್ರಾಮ್ ಸಡಕ್‌ ಯೋಜನೆ ಮೂಲಕ ₹2,169 ಕೋಟಿ ಮೊತ್ತದ ಕಾಮಗಾರಿ ಆರಂಭಿಸಲಾಗಿದೆ. ಎರಡು ಹಂತಗಳ ಕಾಮಗಾರಿಗೆ ಕೇಂದ್ರದಿಂದ ₹1,271 ಕೋಟಿ ಅನುದಾನ ಈಗಾಗಲೇ ಬಂದಿದೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರಿಗೆ ತರಬೇತಿ ನೀಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ 285 ತರಬೇತಿ ಕೇಂದ್ರಗಳ ಮೂಲಕ 10 ತಂಡಗಳಲ್ಲಿ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ 900 ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಮಾತನಾಡಿ, ಮುಂದಿನ ಮೂರು ವರ್ಷಗಳಲ್ಲಿ 66 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಇದಕ್ಕಾಗಿ 10.470 ಕಾಮಗಾರಿಗಳಿಗೆ ₹5,700 ಕೋಟಿ ವೆಚ್ಚವಾಗಲಿದೆ. ಪ್ರತಿ ತಿಂಗಳಿಗೆ 5 ಲಕ್ಷ ಕುಟುಂಬಗಳಿಗೆ ನಲ್ಲಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು