ಸೋಮವಾರ, ಮೇ 16, 2022
24 °C
11 ಜಿಲ್ಲೆಗಳಲ್ಲಿ ಮಳೆ, ಪ್ರವಾಹ * ಕಂದಾಯ ಇಲಾಖೆಯ ಪ್ರಾಥಮಿಕ ಅಂದಾಜು

ನಷ್ಟದ ಪ್ರಮಾಣ ₹ 4,000 ಕೋಟಿಯಲ್ಲ; ₹ 485.65 ಕೋಟಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

rain

ಬೆಂಗಳೂರು: ರಾಜ್ಯದ 11 ಜಿಲ್ಲೆಗಳಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಅಬ್ಬರದ ಮಳೆ, ಪ್ರವಾಹದಿಂದ ಬೆಳೆ, ಮೂಲಸೌಲಭ್ಯಕ್ಕೆ ಉಂಟಾಗಿರುವ ನಷ್ಟದ ಪ್ರಮಾಣ ₹ 4 ಸಾವಿರ ಕೋಟಿಯಷ್ಟು ಎಂದು ಪ್ರಧಾನಿ ಎದುರು ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಕಂದಾಯ ಇಲಾಖೆಯ ಪ್ರಾಥಮಿಕ ಅಂದಾಜಿನ ಪ್ರಕಾರ ಆಗಿರುವ ನಷ್ಟ ₹ 485.65 ಕೋಟಿ!

ರಾಜ್ಯದ ಪ್ರವಾಹ ಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಆಗಸ್ಟ್‌ 10ರಂದು ವಿಡಿಯೊ ಸಂವಾದ ನಡೆದಿತ್ತು. ಆ ಸಂದರ್ಭದಲ್ಲಿ ಮಾಹಿತಿ ನೀಡುವಾಗ ಕಂದಾಯ ಸಚಿವ ಆರ್. ಅಶೋಕ ಅವರು ₹ 4 ಸಾವಿರ ಕೋಟಿ ನಷ್ಟ ಉಂಟಾಗಿದೆ. ಅಷ್ಟೂ ಮೊತ್ತವನ್ನು ಮುಂಗಡವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

‘ಪ್ರಜಾವಾಣಿ’ಗೆ ಲಭ್ಯವಾದ ಅಧಿಕೃತ ದಾಖಲೆಯಲ್ಲಿರುವ ವಿವರಗಳ ಪ್ರಕಾರ ಈ ಮೊತ್ತ ಅಷ್ಟು ಬೃಹತ್ ಪ್ರಮಾಣದಲ್ಲಿ ಇಲ್ಲ ಎಂಬುದು ಖಚಿತವಾಗಿದೆ.

ಪ್ರಧಾನಿಗೆ ಮಾಹಿತಿ ನೀಡುವ ವೇಳೆಗೆ 56 ತಾಲ್ಲೂಕುಗಳ 885 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದವು. 40,180 ಹೆಕ್ಟೇರ್‌ ಕೃಷಿ ಭೂಮಿ ಮತ್ತು 37,221 ಹೆಕ್ಟೇರ್‌ ತೋಟಗಾರಿಕಾ ಬೆಳೆ ನಷ್ಟ ಆಗಿತ್ತು. 67 ಮನೆಗಳು ಸಂಪೂರ್ಣವಾಗಿ ಹಾಗೂ 2,732 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಪ್ರವಾಹಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಕಂದಾಯ ವಿಪತ್ತು ನಿರ್ವಹಣಾ ಘಟಕ ಕ್ರೋಡೀಕರಿಸಿ ನಷ್ಟದ (₹485 ಕೋಟಿ) ಪ್ರಾಥಮಿಕ ಅಂದಾಜು ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿತ್ತು.

ಆದರೆ, ಪ್ರಧಾನಿ ಜೊತೆ ಸಂವಾದ ವೇಳೆ ₹ 4ಸಾವಿರ ಕೋಟಿ ನಷ್ಟವಾಗಿದೆ ಎಂದು ಸಚಿವರು ಹೇಳಿರುವುದು ಅಧಿಕಾರಿ ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ, ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ನಷ್ಟದ ಬಗ್ಗೆ ಮತ್ತೊಮ್ಮೆ ಅಂದಾಜು ಪಟ್ಟಿ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡ ಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌, ‘ಪ್ರಾಥಮಿಕ ನಷ್ಟದ ಅಂದಾಜು ಮಾಹಿತಿ ಮಾತ್ರ ಸಂಗ್ರಹಿಸಿದ್ದೇವೆ. ಪ್ರವಾಹಪೀಡಿತ ಜಿಲ್ಲೆಗಳಿಂದ ಬಂದ ಹೆಚ್ಚಿನ ಬೇಡಿಕೆ ಪರಿ ಗಣಿಸಿ ನಷ್ಟದ ಬಗ್ಗೆ ಪ್ರಧಾನಿಗೆ ಸಚಿವರು ಮಾಹಿತಿ ನೀಡಿರಬಹುದು. ಆ ಬಗ್ಗೆ ಹೆಚ್ಚು ಗೊತ್ತಿಲ್ಲ’ ಎಂದರು.

ಕೊಯ್ನಾದಿಂದ ನೀರು– ನಿಗಾ: ‘ಕೃಷ್ಣಾ ನದಿಯ ಜಲಾನಯನ ಪ್ರದೇಶವಾದ ಮಹಾರಾಷ್ಟ್ರದ ಮಹಾಬಲೇಶ್ವರ, ಸಾಂಗ್ಲಿ ಭಾಗದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ, ಕೊಯ್ನಾ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಎರಡೂ ಸರ್ಕಾರಗಳ (ಕರ್ನಾಟಕ–ಮಹಾರಾಷ್ಟ್ರ) ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ಪರಿಸ್ಥಿತಿ ಮೇಲೆ ನಿಗಾ ವಹಿಸಿದೆ’ ಎಂದು ತಿಳಿಸಿದರು.

‘ಮಹಾರಾಷ್ಟ್ರದ ಕೊಯ್ನಾ ಜಲಾಶ ಯದಿಂದ ನೀರು ಹೊರ ಬಿಡುವ ಸಾಧ್ಯತೆ ಇದೆ. ಈ ಬಗ್ಗೆ ನಿಗಾ ಇಟ್ಟಿದ್ದೇವೆ. ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ’ ಎಂದು ಹೇಳಿದರು.

***

ಮುಂಗಾರು ಮಳೆ ಅವಧಿ ಮುಗಿದ ಬಳಿಕ ಜಿಲ್ಲೆಗಳಿಂದ ಮಾಹಿತಿ ಪಡೆದು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡುವಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು

- ಅಂಜುಮ್ ಪರ್ವೇಜ್, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ

ಅಬ್ಬರಿಸಿದರೂ ಅತಿವೃಷ್ಟಿಯಾಗಿಲ್ಲ!

‘ಈ ಬಾರಿ ಮಳೆ ಅಬ್ಬರಿಸಿ ಸುರಿದರೂ ಅತಿವೃಷ್ಟಿ ಆಗಿಲ್ಲ. ಆಗಸ್ಟ್‌ 1ರಿಂದ 14ವರೆಗಿನ ಅವಧಿಯಲ್ಲಿ 76 ತಾಲ್ಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಉಳಿದಂತೆ, 51 ತಾಲ್ಲೂಕುಗಳಲ್ಲಿ ಹೆಚ್ಚು, 53 ತಾಲ್ಲೂಕುಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಭಾರಿ ಪ್ರಮಾಣದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿಲ್ಲ. ಹೀಗಾಗಿ, ನಷ್ಟದ ಪ್ರಮಾಣ ಕಡಿಮೆ’ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು