ಭಾನುವಾರ, ಜೂನ್ 26, 2022
26 °C
ಜಿಲ್ಲಾಧಿಕಾರಿ ಪರವಾಗಿ ಲಂಚಕ್ಕೆ ಬೇಡಿಕೆ: ಆರೋಪ

₹5 ಲಕ್ಷ ಲಂಚ ಪಡೆಯುತ್ತಿದ್ದ ಡಿಸಿ ಕಚೇರಿ ವ್ಯವಸ್ಥಾಪಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣವೊಂದರಲ್ಲಿ ಅರ್ಜಿದಾರರ ಪರ ಆದೇಶ ನೀಡುವುದಕ್ಕಾಗಿ ₹ 5 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಮಹೇಶ್‌ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‌ ಕುಮಾರ್‌ ಅಲಿಯಾಸ್‌ ಚಂದ್ರು ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ಬಂಧಿಸಿದೆ.

ಆನೇಕಲ್‌ ತಾಲ್ಲೂಕಿನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿರುವ ನಗರದ ಬೇಗೂರು ನಿವಾಸಿ ಅಜಂ ಪಾಷಾ ಎಂಬುವವರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲೇ ಲಂಚದ ಸಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದರು. ಉಪ ತಹಶೀಲ್ದಾರ್‌ ದರ್ಜೆಯ ಅಧಿಕಾರಿಯಾಗಿರುವ ಮಹೇಶ್‌, ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರ ಹುದ್ದೆಯಲ್ಲಿದ್ದಾರೆ. ಆರೋಪಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌ ಪರವಾಗಿ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಪಡೆದುಕೊಂಡಿರುವ ಆರೋಪವಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ದೂರುದಾರರು 2014ರಲ್ಲಿ ಕೂಡ್ಲು ಗ್ರಾಮದ ಸರ್ವೆ ನಂಬರ್‌ 190/5ರಲ್ಲಿ 38 ಗುಂಟೆ ಜಮೀನನ್ನು ನಾಗೇಶ್ ಎಂಬುವವರಿಂದ ಖರೀದಿಸಿದ್ದರು. ಅದರ ವಿರುದ್ಧ ವೆಂಕಟಸ್ವಾಮಿ ರೆಡ್ಡಿ ಎಂಬುವವರು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆ ಪ್ರಕರಣದಲ್ಲಿ ಅಜಂ ಪಾಷಾ ಪರ ಉಪ ವಿಭಾಗಾಧಿಕಾರಿ ನ್ಯಾಯಾಲಯ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ವೆಂಕಟಸ್ವಾಮಿ ರೆಡ್ಡಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. 2022ರ ಮಾರ್ಚ್‌ 30ರಂದು ಜಿಲ್ಲಾಧಿಕಾರಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದರು.

‘ನನ್ನ ಜಮೀನಿಗೆ ಸಂಬಂಧಿಸಿದ ಪ್ರಕರಣದ ಆದೇಶ ಪ್ರಕಟಿಸುವಂತೆ ಮನವಿ ಮಾಡಲು ಮೇ 18ರಂದು ಜಿಲ್ಲಾಧಿಕಾರಿಯವರನ್ನು ಭೇಟಿಮಾಡಿದ್ದೆ. ಅವರ ಸೂಚನೆಯಂತೆ ಮಹೇಶ್‌ ಅವರನ್ನು ಭೇಟಿಮಾಡಿದೆ. ಅವರು ನನ್ನ ಪರವಾಗಿ ಆದೇಶ ನೀಡಲು ಮೊದಲು ₹ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ₹ 8 ಲಕ್ಷ ಕೇಳಿದರು. ಚೌಕಾಸಿ ಮಾಡಿದಾಗ ₹ 5 ಲಕ್ಷ ನೀಡಿದರೆ ನನ್ನ ಪರ ಆದೇಶ ನೀಡುವುದಾಗಿ ತಿಳಿಸಿದ್ದಾರೆ’ ಎಂದು ಅಜಂ ಪಾಷಾ ಎಸಿಬಿ ಬೆಂಗಳೂರು ನಗರ ಘಟಕಕ್ಕೆ ಶುಕ್ರವಾರ ದೂರು ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಹಾಗೂ ಮಹೇಶ್‌ ಜತೆಗಿನ ಸಂಭಾಷಣೆಯ ವಿವರವನ್ನು ಮೊಬೈಲ್‌ನಲ್ಲಿ ರೆಕಾರ್ಡಿಂಗ್‌ ಮಾಡಿಕೊಂಡಿದ್ದ ದೂರುದಾರರು ಆ ವಿವರಗಳನ್ನೂ ದೂರಿನೊಂದಿಗೆ ತನಿಖಾ ಸಂಸ್ಥೆಗೆ ನೀಡಿದ್ದರು.

ದೂರುದಾರರು ಶನಿವಾರ ಲಂಚದ ಹಣದೊಂದಿಗೆ ಮಹೇಶ್‌ ಅವರನ್ನು ಭೇಟಿಮಾಡಿದರು. ಅವರು ಪಕ್ಕದಲ್ಲಿದ್ದ ಚೇತನ್‌ ಕುಮಾರ್‌ಗೆ ನೀಡುವಂತೆ ಸೂಚಿಸಿದರು. ಅದರಂತೆ ಚೇತನ್‌ ಹಣ ಪಡೆದುಕೊಂಡರು. ತಕ್ಷಣ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಇಬ್ಬರನ್ನೂ ಲಂಚದ ಹಣದ ಸಮೇತ ಬಂಧಿಸಿದರು ಎಂದು ಎಸಿಬಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು