ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಜಿಲ್ಲೆಗೆ 50 ವೆಂಟಿಲೇಟರ್‌ ಶೀಘ್ರ ಪೂರೈಕೆ

ಏಪ್ರಿಲ್‌ 15ರಿಂದ ಸೋಂಕು ಪ್ರಕರಣಗಳ ದಿಢೀರ್ ಹೆಚ್ಚಳ
Last Updated 2 ಮೇ 2021, 10:42 IST
ಅಕ್ಷರ ಗಾತ್ರ

ಬಳ್ಳಾರಿ: ’ಜಿಲ್ಲೆಗೆ 50 ವೆಂಟಿಲೇಟರ್‌ ಸೌಕರ್ಯವನ್ನು ಆರೋಗ್ಯ ಇಲಾಖೆಯು ಶೀಘ್ರ ಒದಗಿಸಲಿದೆ’ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದರು.

‘ಸೋಂಕಿತರಿಗೆ ವೆಂಟಿಲೇಟರ್‌ ಕೊರತೆ ಇರುವ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರಲಾಗಿದ್ದು, ಅವರು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಒದಗಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸದ್ಯ ನಗರದ ಜಿಲ್ಲಾಸ್ಪತ್ರೆ, ಟ್ರಾಮ ಕೇರ್‌ ಸೆಂಟರ್‌ ಹಾಗೂ ತೋರಣಗಲ್‌ನ ಜಿಂದಾಲ್‌ ಸಂಜೀವಿನಿ ಆಸ್ಪತ್ರೆ ಸಂಪೂರ್ಣ ಕೋವಿಡ್‌ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಜಿಂದಾಲ್‌ ಆಸ್ಪತ್ರೆಯಲ್ಲಿ ಎರಡು ದಿನದಿಂದ ಐಸಿಯು ಸೇವೆಯು ದೊರಕುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ 23 ಐಸಿಯು ಬೆಡ್‌ ಸೌಕರ್ಯವನ್ನು ಕಲ್ಪಿಸಲಾಗುವುದು’ ಎಂದರು.

‘ಜಿಂದಾಲ್‌ನಲ್ಲೇ ಆಕ್ಸಿಜನ್‌ ಉತ್ಪಾದನೆಯಾಗುವುದರಿಂದ, ಲಭ್ಯತೆಯೂ ಸದಾಕಾಲ ಇರುವುದರಿಂದ ಅಲ್ಲಿಗೆ ಸಮೀಪವೇ 1 ಸಾವಿರ ಹಾಸಿಗೆ ಸೌಕರ್ಯದ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಿದೆ. ಮೇ 9ರವರೆಗೆ 220 ಆಕ್ಸಿಜನ್ ಬೆಡ್‌ಗಳು ಲಭ್ಯವಿರುತ್ತವೆ’ ಎಂದರು.

‘ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಆಕ್ಸಿಜನ್‌ ಬೆಡ್‌ಗಳು ಲಭ್ಯವಿವೆ. ಕಮಲಾಪುರದ ಪರಿಶಿಷ್ಟ ವಿದ್ಯಾರ್ಥಿನಿಲಯದಲ್ಲಿ 60 ಬೆಡ್‌ ಸೌಕರ್ಯದ ಕೇರ್ ಸೆಂಟರ್‌ ಇದೆ.ಅಲ್ಲಿ ಆಕ್ಸಿಜನ್‌ ಸೌಕರ್ಯವನ್ನು ಕೊಡಬೇಕಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೇ ಸೋಂಕಿತರು ದಾಖಲಾದಾಗ ಅವರನ್ನು ಎಲ್ಲಿಗೆ ರವಾನಿಸಬೇಕು ಎಂದು ನಿರ್ಧರಿಸಲು ಕೊಂಚ ಸಮಯ ಬೇಕಾಗುತ್ತದೆಯೇ ಹೊರತು, ಎಲ್ಲಿಯೂ ಆಕ್ಸಿಜನ್‌ ಬೆಡ್‌ಗಳ ಕೊರತೆ ಇಲ್ಲ’ ಎಂದು ಹೇಳಿದರು.

‘ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಜಂಬೋ ಸಿಲಿಂಡರ್‌ ಮೂಲಕ ಆಕ್ಸಿಜನ್‌ ಪೂರೈಕೆಯಾಗುತ್ತಿದ್ದು, ಪ್ರತಿ ಜಂಬೋ ಸಿಲಿಂಡರ್‌ ಮೂಲಕ ಏಕಕಾಲಕ್ಕೆ 24 ಸಿಲಿಂಡರ್‌ ಕಾರ್ಯನಿರ್ವಹಿಸುತ್ತವೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸ್ಥಾಪಿಸಲು ಕೆಲವು ಖಾಸಗಿ ಆಸ್ಪತ್ರೆಗಳು ಕೋರಿಕೆ ಸಲ್ಲಿಸಿವೆ. ಆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಈಗಾಗಲೇ ಕೇರ್‌ ಸೆಂಟರ್‌ಗಳಾಗಿರುವ ನಗರದ ಶಾವಿ, ಅರುಣೋದಯ, ವಾಯ್ಸ್‌, ನವೋದಯ ಆಸ್ಪತ್ರೆಯ ಮೇಲುಸ್ತುವಾರಿಗಾಗಿ ತಲಾ ಒಬ್ಬ ನೋಡಲ್‌ ಅಧಿಕಾರಿಯನ್ನು ನಿಯೋಜಿಸಲಾಗಿದ. ಬೆಡ್‌ಗಳ ಕೃತಕ ಕೊರತೆ ಏರ್ಪಡದಂತೆ, ಅಧಿಕ ಶುಲ್ಕ ವಸೂಲು ಮಾಡದಂತೆ ಅಧಿಕಾರಿಗಳು ಕಣ್ಗಾವಲು ಇಡಲಿದ್ದಾರೆ’ ಎಂದರು.

ಖಾಸಗಿ ಪ್ರಯೋಗಾಲಯದ ಅವಲಂಬನೆ
‘ಕೋವಿಡ್‌ ತಪಾಸಣೆಗೆ ಒಳಗಾಗುವ ಎಲ್ಲರ ವರದಿಗಳನ್ನು ನಿಗದಿತ ಕಾಲದಲ್ಲಿ ಪಡೆಯಲು ಸಾಧ್ಯವಾಗದೇ ಇದ್ದುದರಿಂದ ಸುಮಾರು 3 ಸಾವಿರ ಮಂದಿಯ ವರದಿಯನ್ನು ಬೆಂಗಳೂರಿನ ಖಾಸಗಿ ಪ್ರಯೋಗಾಲಯದಿಂದ ಪಡೆಯಬೇಕಾಯಿತು’ ಎಂದು ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ತಿಳಿಸಿದರು.

‘ವಿಮ್ಸ್‌ ಪ್ರಯೋಗಾಲಯದಲ್ಲಿ ಪ್ರತಿ ದಿನವೂ ಸರಾಸರಿ 1.600 ಮಂದಿಯ ಕೋವಿಡ್‌ ತಪಾಸಣೆಯ ವರದಿ ಸಿದ್ಧಪಡಿಸಲು ಸಾಧ್ಯ. ಹೆಚ್ಚಿನ ಮಂದಿಯ ತಪಾಸಣೆ ನಡೆಸಿದಾಗ ವರದಿಗಾಗಿ ರಾಯಚೂರು, ಕೊಪ್ಪಳ ಪ್ರಯೋಗಾಲಯಗಳನ್ನು ಅವಲಂಬಿಸಬೇಕಾಗುತ್ತದೆ. ಆ ಜಿಲ್ಲೆಗಳಲ್ಲೂ ಸೋಂಕು ಹೆಚ್ಚಾಗಿದ್ದರಿಂದ ನಮ್ಮ ಜಿಲ್ಲೆಯ ಸೋಂಕಿತರ ಕುರಿತ ವರದಿ ಬರುವುದು ತಡವಾಗಿತ್ತು. ಹೀಗಾಗಿ ಖಾಸಗಿ ಪ್ರಯೋಗಾಲಯವನ್ನು ಅವಲಂಬಿಸಬೇಕಾಯಿತು’ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ
ನಗರದ ಜಿಲ್ಲಾಸ್ಪತ್ರೆಯಲ್ಲೂ ಕೋವಿಡ್‌ ತಪಾಸಣೆ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದ್ದು, ಐಸಿಎಂಆರ್‌ ಅನುಮೋದನೆ ಶನಿವಾರವಷ್ಟೇ ದೊರಕಿದೆ. ಸುಮಾರು 20 ತಂತ್ರಜ್ಞರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಬುಧವಾರದಿಂದ ಪ್ರಯೋಗಾಲಯ ಆರಂಭವಾಗುವ ಸಾಧ್ಯತೆ ಇದೆ. ಅಲ್ಲಿ 600 ಮಂದಿಯ ತಪಾಸಣೆ ನಡೆಸಲು ಸಾಧ್ಯ’ ಎಂದು ಹೇಳಿದರು.

‘ಇನ್ನೂ ಎರಡು ಪ್ರಯೋಗಾಲಯ ಯಂತ್ರಗಳ ಖರೀದಿ ಪ್ರಕ್ರಿಯೆಯೂ ನಡೆಯಲಿದೆ. ಅವು ಬಂದರೆ ತಲಾ 600ರಂತೆ ದಿನವೂ 1200 ಮಂದಿಯ ತಪಾಸಣೆ ನಡೆಸಬಹುದು. ಆಗಸ್ಟ್‌ 15ರ ಹೊತ್ತಿಗೆ ಸುಮಾರು 3 ಸಾವಿರ ತಪಾಸಣೆ ವರದಿಗಳನ್ನು ಸಿದ್ಧಪಡಿಸುವಷ್ಟು ಸಾಮರ್ಥ್ಯ ಜಿಲ್ಲೆಗೆ ದೊರಕಲಿದೆ’ ಎಂದರು. ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್‌.ನಂದಿನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್.ಜನಾರ್ದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT