ಮಂಗಳವಾರ, ಏಪ್ರಿಲ್ 13, 2021
28 °C
9 ಅಧಿಕಾರಿಗಳ ಮನೆ, ಕಚೇರಿಗೆ ದಾಳಿ

ಎಸಿಬಿ ದಾಳಿ: ಯೋಜನಾ ನಿರ್ದೇಶಕ 19 ನಿವೇಶನಗಳ ಒಡೆಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಇಲಾಖೆಗಳ 9 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ 11 ಜಿಲ್ಲೆಯ 28 ಕಡೆ ಮಂಗಳವಾರ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಪಾರ ಪ್ರಮಾಣದ ಆಸ್ತಿಯನ್ನು ಪತ್ತೆ ಮಾಡಿದೆ.

ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಎಫ್‌ಟಿ) ಇನ್‌ಸ್ಪೆಕ್ಟರ್‌ ವಿಕ್ಟರ್ ಸೈಮನ್‌ ಅವರು ನ್ಯಾಷನಲ್ ಗೇಮ್ಸ್ ವಿಲೇಜ್‌ನಲ್ಲಿ ಒಂದು ಫ್ಲ್ಯಾಟ್, ಮೈಸೂರಿನಲ್ಲಿ 129 ಚದರ ಅಡಿಯಲ್ಲಿ ಐಷಾರಾಮಿ ಬಂಗಲೆ, ಮೈಸೂರಿನಲ್ಲಿ 2 ನಿವೇಶನ, 10 ಎಕರೆ ಕೃಷಿ ಜಮೀನು, ₹1 ಕೋಟಿ ಬೆಲೆಯ ಬಾಂಡ್‌ ಪೇಪರ್‌ ಹೊಂದಿದ್ದಾರೆ. ಜತೆಗೆ, ಬ್ಯಾಂಕ್ ಲಾಕರ್‌ಗಳಲ್ಲಿ 500 ಗ್ರಾಂ ಚಿನ್ನಾಭರಣ, ವಾಸದ ಮನೆಯಲ್ಲಿ 7.26 ಲಕ್ಷ ನಗದು, 22.36 ಲೀಟರ್ ದುಬಾರಿ ಮದ್ಯದ ಬಾಟಲಿ, ₹21.61ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಹಲವು ಬಾರಿ ವಿದೇಶ ಪ್ರವಾಸ ಮಾಡಿರುವ ದಾಖಲೆಗಳು ದೊರೆತಿವೆ. ಆದಾಯಕ್ಕಿಂತ ಶೇ 257ರಷ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಎಸಿಬಿ ವಿವರಿಸಿದೆ.

ಬಿಬಿಎಂಪಿ ಯಶವಂತಪುರ ವಲಯದ ಕಿರಿಯ ಎಂಜಿನಿಯರ್‌ ಕೆ.ಸುಬ್ರಹ್ಮಣ್ಯಂ ಅವರು ಸಹಕಾರ ನಗರದಲ್ಲಿ ಮನೆ, ವೈಟ್‌ಫೀಲ್ಡ್‌ನಲ್ಲಿ 33 ಕೊಠಡಿಗಳ ಪಿ.ಜಿ ಕಟ್ಟಡ, ಬೆಂಗಳೂರಿನ ವಿವಿಧೆಡೆ 4 ನಿವೇಶನಗಳನ್ನು ಹೊಂದಿದ್ದಾರೆ. ಇನ್ನೋವಾ ಕಾರು, ಪಿಯೆಟ್ ಪುಂಟೋ, ಐ10 ಕಾರು, 531 ಗ್ರಾಂ ಚಿನ್ನ, 8 ಕೆ.ಜಿ ಬೆಳ್ಳಿ ಆಭರಣ, ವಿವಿಧ ಬ್ಯಾಂಕ್‌ಗಳಲ್ಲಿ ₹1 ಕೋಟಿ ಠೇವಣಿ, ₹31.90 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ವಿದೇಶ ಪ್ರವಾಸದ ದಾಖಲೆಗಳು ಪತ್ತೆಯಾಗಿವೆ. ಅವರ ಬಳಿ ಆದಾಯಕ್ಕಿಂತ ಶೇ 364ರಷ್ಟು ಹೆಚ್ಚುವರಿ ಆಸ್ತಿ ಇದೆ ಎಂದು ತಿಳಿಸಿದೆ.

ಲೆಕ್ಕಾಧಿಕಾರಿಗೆ 9 ನಿವೇಶನ: ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರು ಯಾದಗಿರಿಯಲ್ಲಿ 1 ಮನೆ, ಒಂದು ಕಾರು, 676 ಗ್ರಾಂ ಚಿನ್ನ, 1 ಕೆ.ಜಿ 362 ಗ್ರಾಂ ಬೆಳ್ಳಿ ವಸ್ತು, ₹1.71 ಲಕ್ಷ ನಗದು, ಮುಂಡರಗಿಯಲ್ಲಿ ನಿವೇಶನ, ಯಾದಗರಿಯಲ್ಲಿ 7 ನಿವೇಶನ, ಕೊಯುಲೂರಾದಲ್ಲಿ ನಿವೇಶನ, ಶಾರದಾಗಿರಿಯಲ್ಲಿ ನಿವೇಶನ, 3 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ ₹31.75 ಲಕ್ಷ ಠೇವಣಿ ಇಟ್ಟಿದ್ದಾರೆ. ಶೇ 223 ಅಸಮತೋಲನ ಆಸ್ತಿ ಹೊಂದಿದ್ದಾರೆ.

ಹಾವೇರಿ ಜಿಲ್ಲೆಯ ಫ್ಯಾಕ್ಟರೀಸ್ ಮತ್ತು ಬಾಯ್ಲರ್ ವಿಭಾಗದ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರು ಬೆಂಗಳೂರಿನ ಸಂಜಯನಗರದಲ್ಲಿ ಒಂದು ಮನೆ, 400 ಗ್ರಾಂ ಚಿನ್ನ, 69 ಗ್ರಾಂ ಬೆಳ್ಳಿ, ₹25 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ. ಆದಾಯಕ್ಕಿಂತ ಶೇ 118ರಷ್ಟು ಹೆಚ್ಚು ಆಸ್ತಿ ಇದೆ.

19 ನಿವೇಶನಗಳ ಒಡೆಯ: ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರು 2 ಮನೆ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿಯಲ್ಲಿ 19 ನಿವೇಶನ, 24 ಎಕರೆ ಕೃಷಿ ಜಮೀನು, ಒಂದು ಪೌಲ್ಟ್ರಿ ಫಾರಂ ಹೊಂದಿದ್ದಾರೆ. ಆದಾಯಕ್ಕಿಂಯ ಶೇ 295ರಷ್ಟು ಹೆಚ್ಚು ಆಸ್ತಿ ಇದೆ ಎಂದು ಎಸಿಬಿ ಅಂದಾಜಿಸಿದೆ.

ಬೆಳಗಾವಿ ಉಪ ಮುಖ್ಯ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್‌ ಹನಮಂತ ಶಿವಪ್ಪ ಚಿಕ್ಕಣ್ಣನವರ ಬೆಳಗಾವಿಯಲ್ಲಿ ಮನೆ, 2 ಫ್ಲಾಟ್, 1 ಪೆಂಟಾ ಹೌಸ್, 4 ವಾಣಿಜ್ಯ ಮಳಿಗೆ ಹೊಂದಿದ್ದಾರೆ. ಈ ಮಳಿಗೆಗಳಲ್ಲಿ ₹71.75 ಲಕ್ಷ ಮೌಲ್ಯದ ವಸ್ತುಗಳು, 816 ಗ್ರಾಂ ಚಿನ್ನ,  6 ಕೆ.ಜಿ ಬೆಳ್ಳಿ ವಸ್ತುಗಳು, ₹1.88 ಲಕ್ಷ ನಗದು ಪತ್ತೆಯಾಗಿದೆ.

ಮೈಸೂರಿನ ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ವಡ್ಡರ್ ಅವರು ಪುತ್ತೂರಿನಲ್ಲಿ 1 ಮನೆ, 206 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ, ₹1.35 ಲಕ್ಷ ನಗದು, 15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ. ಶೇ 88.33ರಷ್ಟು ಅಸಮತೋಲನ ಆಸ್ತಿ ಹೊಂದಿದ್ದಾರೆ.

ಮೈಸೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಅವರು ಮಂಡ್ಯದಲ್ಲಿ ಮನೆ, ಪತ್ನಿ ಹೆಸರಿನಲ್ಲಿ ಕೆರಗೋಡಿನಲ್ಲಿ ಮನೆ, 2 ನಿವೇಶನ, 34 ಗುಂಟೆ ಕೃಷಿ ಜಮೀನು, ಹೋಂಡಾ ಸಿಟಿ ಕಾರು, 5 ಲಕ್ಷ ಮೌಲ್ಯದ
ವಿಮಾ ಪಾಲಿಸಿ, ₹13.50 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ. ಆದಾಯಕ್ಕಿಂತ ಶೇ 149ರಷ್ಟು ಹೆಚ್ಚು ಆಸ್ತಿ ಇದೆ ಎಂದು ಎಸಿಬಿ ಅಂದಾಜಿಸಿದೆ.

ಮನೆಯಲ್ಲಿ ಸರ್ಕಾರಿ ಕಡತ, ನಗದು
ಮೈಸೂರು ಚೆಸ್ಕಾಂ ಸೂಪರಿಂಟೆಂಡಿಂಗ್ ಎಂಜಿನಿಯರ್ ಮುನಿಗೋಪಾಲರಾಜ್ ಮನೆಯಲ್ಲಿ 50ಕ್ಕೂ ಹೆಚ್ಚು ಕಡತಗಳು ಮತ್ತು ಅದರೊಟ್ಟಿಗಿದ್ದ ₹2.45 ಲಕ್ಷ ನಗದು ದೊರೆತಿದೆ. ಅವರು ಮೈಸೂರಿನ ಗೋಕುಲಂನಲ್ಲಿ 1 ಮನೆ, ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫ್ಲಾಟ್, ಮೈಸೂರಿನ ವಿವಿಧೆಡೆ 6 ನಿವೇಶನ, ಕೆಂಗೇರಿಯಲ್ಲಿ 1 ಫ್ಲ್ಯಾಟ್, ವಿವಿಧೆಡೆ 6 ಎಕರೆ ಕೃಷಿ ಜಮೀನು, 3 ಕಾರು, 717 ಗ್ರಾಂ ಚಿನ್ನ, 16 ಕೆ.ಜಿ ಬೆಳ್ಳಿ ವಸ್ತು, ₹20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಹೊಂದಿದ್ದಾರೆ ಎಂದು ಎಸಿಬಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು