ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ದರ್ಶನ್ ಬಾಡಿಗಾರ್ಡ್‌ನಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ : ಎನ್‌ಸಿಆರ್ ದಾಖಲು

ಜನ್ಮದಿನ ಕಾರ್ಯಕ್ರಮ ಚಿತ್ರೀಕರಣಕ್ಕೆ ಹೋಗಿದ್ದಾಗ ಘಟನೆ: ಎನ್‌ಸಿಆರ್ ದಾಖಲು
Last Updated 18 ಫೆಬ್ರವರಿ 2023, 17:41 IST
ಅಕ್ಷರ ಗಾತ್ರ

ಬೆಂಗಳೂರು: ‘ನಟ ದರ್ಶನ್ ಅವರ ಬಾಡಿಗಾರ್ಡ್‌ ಹಾಗೂ ಇತರರು ನಮ್ಮ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ‘ವಿ2 ನ್ಯೂಸ್’ ಯೂಟ್ಯೂಬ್ ಚಾನೆಲ್‌ ಕ್ಯಾಮೆರಾಮನ್ ಕೆ.ಪಿ. ದಯಾನಂದ್ ರಾಜರಾಜೇಶ್ವರಿನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ’ದೂರಿನಲ್ಲಿ ಸಾಕಷ್ಟು ಗೊಂದಲಗಳಿವೆ. ಸೂಕ್ತ ಪುರಾವೆಗಳು ಲಭ್ಯವಿಲ್ಲ. ಹೀಗಾಗಿ, ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ಮಾತ್ರ ದಾಖಲಿಸಿಕೊಳ್ಳಲಾಗಿದೆ. ಇದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ದೂರಿನ ವಿವರ: ‘ವಿ2 ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದರ್ಶನ್ ಹುಟ್ಟುಹಬ್ಬವಿದ್ದಿದ್ದರಿಂದ, ಮನೆ ಬಳಿ ಚಿತ್ರೀಕರಣ ಮಾಡಬೇಕಿತ್ತು. ಸಹೋದ್ಯೋಗಿ ಮಧುಸೂದನ್ ಜೊತೆ ಫೆ. 16ರಂದು ಸಂಜೆ 6.15ರ ಸುಮಾರಿಗೆ ರಾಜರಾಜೇಶ್ವರಿನಗರದಲ್ಲಿರುವ ದರ್ಶನ್ ಮನೆ ಬಳಿ ಹೋಗಿದ್ದೆ’ ಎಂದು ದಯಾನಂದ್ ದೂರಿನಲ್ಲಿ ಹೇಳಿದ್ದಾರೆ.

‘ಮನೆ ಬಳಿ ಅಭಿಮಾನಿಗಳು ಸೇರಿದ್ದರು. ಆದರೆ, ದರ್ಶನ್ ಅವರಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಮನೆ ಎದುರೇ ಎರಡು ನಿಮಿಷ ಚಿತ್ರೀಕರಣ ಮಾಡಿದ್ದೆ. ನಂತರದ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದ ಬಾಡಿಗಾರ್ಡ್‌ ಹಾಗೂ ಇತರರು ಹಲ್ಲೆ ಮಾಡಿದರು. ಕ್ಯಾಮೆರಾ ಹಾಗೂ ಮೊಬೈಲ್ ಕಿತ್ತುಕೊಂಡರು. ರಕ್ಷಣೆಗೆ ಬಂದ ಮಧುಸೂದನ್ ಅವರನ್ನೂ ಥಳಿಸಿದರು. ನಂತರ, ಅಲ್ಲಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇವೆ. ದರ್ಶನ್ ಮನೆ ಬಳಿಯೇ ನಮ್ಮ ಬೈಕ್ ಇದ್ದು, ಅದನ್ನು ವಾಪಸು ತರಲು ಭಯವಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಹಲ್ಲೆ ಮಾಡಿದ್ದ ಬಾಡಿಗಾರ್ಡ್‌ ಸಫಾರಿ ಧರಿಸಿದ್ದ. ನಾಲ್ವರು ದರ್ಶನ್ ಫೋಟೊ ಇದ್ದ ಟೀ–ಶರ್ಟ್ ಧರಿಸಿದ್ದರು. ಹಲ್ಲೆ ನಂತರ ನಮಗೆ, ನಮ್ಮ ಕುಟುಂಬದವರಿಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡಿ’ ಎಂದೂ ಕೋರಿದ್ದಾರೆ.

‘6 ಗಂಟೆ ಸತಾಯಿಸಿದ ಪೊಲೀಸರು’

‘ಚಿಕಿತ್ಸೆ ಪಡೆದು ರಾಜರಾಜೇಶ್ವರಿನಗರ ಠಾಣೆಗೆ ಹೋಗಿದ್ದೆವು. ದೂರು ಪಡೆಯಲು ಹಿಂದೇಟು ಹಾಕಿದ್ದ ಪೊಲೀಸರು, 6 ಗಂಟೆ ಠಾಣೆಯಲ್ಲೇ ಕೂರಿಸಿ ಸತಾಯಿಸಿದರು’ ಎಂದು ದಯಾನಂದ್ ದೂರಿದರು.

‘ನಿಮ್ಮ ಬಳಿ ಪುರಾವೆಯಿಲ್ಲ. ಹೊಡೆದವರು ಯಾರು ಎಂಬುದು ಗೊತ್ತಿಲ್ಲ. ಯಾರನ್ನು ಆರೋಪಿ ಮಾಡುವುದು? ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳಿದರು. ಹೆಚ್ಚು ಒತ್ತಾಯಿಸಿದ ಬಳಿಕ, ಕಾಟಾಚಾರಕ್ಕೆಂದು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಇದರ ಹಿಂದೆ ಯಾರ ಪ್ರಭಾವವಿದೆ ಎಂಬುದು ಗೊತ್ತಿಲ್ಲ’ ಎಂದು ಅವರು ಹೇಳಿದರು.

ಎಫ್‌ಐಆರ್ ಬದಲು ಎನ್‌ಸಿಆರ್ ಮಾತ್ರ ದಾಖಲಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT