ಸೋಮವಾರ, ಸೆಪ್ಟೆಂಬರ್ 27, 2021
28 °C

ಚುನಾವಣೆ ಬಳಿಕ ಲಿಂಗಾಯತ ಧರ್ಮದ ಹೋರಾಟ: ಶಾಸಕ ಎಂ.ಬಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ಬಳಿಕ ಜತೆಗೂಡಿ ಸಾಮೂಹಿಕ ನಾಯಕತ್ವದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತ್ಯೇಕ ಧರ್ಮದ ಹೋರಾಟವನ್ನು ಈಗ ಕೈಗೆತ್ತಿಕೊಂಡರೆ ಅದಕ್ಕೆ ರಾಜಕೀಯ ಬಣ್ಣ ನೀಡಿ, ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಚುನಾವಣೆಯ ಬಳಿಕ ಹೋರಾಟ ಪುನರಾರಂಭಿಸಲಾಗುವುದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದೆ. ಪ್ರತ್ಯೇಕ ಹೋರಾಟದ ಕುರಿತು ನಾನು ಎಲ್ಲಿಯೂ ಮಾತನಾಡಿಲ್ಲ’ ಎಂದು ತಮ್ಮ ಹಿಂದಿನ ಪತ್ರಿಕಾ ಹೇಳಿಕೆಯ ವಿಡಿಯೊ ತುಣುಕು ಪ್ರದರ್ಶಿಸಿದರು.

ತಾವು ಹೋರಾಟದ ನಾಯಕತ್ವ ವಹಿಸುವುದಿಲ್ಲ. ಪಂಚ ಪೀಠಾಧೀಶರು, ವಿರಕ್ತ ಮಠಗಳು, ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಯಲಿದೆ. ವೀರಶೈವರೂ ಸೇರಿದಂತೆ 99 ಉಪ ಪಂಗಡಗಳನ್ನೂ ಸೇರಿಸಿ ಲಿಂಗಾಯತ ಧರ್ಮದ ಮಾನ್ಯತೆ ನೀಡುವಂತೆ ಹಿಂದೆ ಹೋರಾಟ ಆರಂಭಿಸಲಾಗಿತ್ತು. ಅದೇ ಬೇಡಿಕೆಯ ಆಧಾರದಲ್ಲಿ ಹೋರಾಟ ಮುಂದುವರಿಯಲಿದೆ ಎಂದರು.

‘ಎಲ್ಲರೂ ಒಗ್ಗೂಡಿ ಚರ್ಚಿಸಿ, ನಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು ಮುಂದಕ್ಕೆ ಸಾಗುತ್ತೇವೆ ಎಂದು ಹೇಳಿದ್ದೆ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ನಾವು ಒಗ್ಗೂಡಿದರೆ ಯಾರಿಗೆ ಮತ್ತು ಏಕೆ ಸಮಸ್ಯೆ ಆಗುತ್ತದೆ ಎಂಬುದು ತಿಳದಿಲ್ಲ. ನಮ್ಮ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ಒಗ್ಗೂಡಲು ಎಷ್ಟು ಸಮಯ ಬೇಕಾಗಬಹುದು ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

ಹಿಂದೆ ವೀರಶೈವ ಮಹಾಸಭಾದವರೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದರೆ, ಮನವಿಯಲ್ಲಿದ್ದ ತಾಂತ್ರಿಕ ತೊಡಕಿನಿಂದ ಅದು ಈಡೇರಿರಲಿಲ್ಲ. ಬಳಿಕ ತಾವು ಹೋರಾಟ ಕೈಗೆತ್ತಿಕೊಂಡಿದ್ದು. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರಿ, ಅಲ್ಪಸಂಖ್ಯಾತ ಸ್ಥಾನಮಾನ ದೊರಕಿದ್ದರೆ ಈಗ ಹಿಂದುಳಿದ ವರ್ಗಗಳ 2–ಎ ಮೀಸಲಾತಿ ಕೇಳುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಎಂದರು.

ಪಕ್ಷಕ್ಕೆ ಸಂಬಂಧವಿಲ್ಲ: ಲಿಂಗಾಯತ ಧರ್ಮದ ಹೋರಾಟಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ. ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು