ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಕ್ಕೆ ಅವಕಾಶ ನೀಡದಿದ್ದರೆ ಹೇಗೆ?: ಸಚಿವ ಜಗದೀಶ ಶೆಟ್ಟರ್ ಪ್ರಶ್ನೆ

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪ್ರಶ್ನೆ
Last Updated 7 ಫೆಬ್ರುವರಿ 2021, 10:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಅನುಕೂಲಕ್ಕಾಗಿ ಕೃಷಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತಂದು ಒಂದು ಪ್ರಯೋಗ ಮಾಡುತ್ತಿದ್ದಾರೆ. ಅದಕ್ಕೊಂದು ಅವಕಾಶ ನೀಡುವ ಕೆಲಸವನ್ನು ಹೋರಾಟಗಾರರು ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪ್ರತಿಪಾದಿಸಿದರು.

ನಗರದ ಬೆಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌, ಗೇಟ್‌ ನಿರ್ಮಾಣ ಹಾಗೂ ಶಾಲಾ ಮೈದಾನದಲ್ಲಿ ಪೇವರ್ಸ್ ಅವಳಡಿಕೆಗೆ ಭಾನುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಲು ವಿರೋಧ ಪಕ್ಷಗಳಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ರೈತರನ್ನು ಪ್ರಚೋದಿಸಿ ಹೋರಾಟಕ್ಕೆ ನಿಲ್ಲಿಸುವ ಕೆಲಸವನ್ನು ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಸೇರಿಕೊಂಡು ಮಾಡುತ್ತಿವೆ. ರಾಜಕೀಯ ಪ್ರಚೋದನೆಯಿಂದ ಇದೆಲ್ಲ ನಡೆಯುತ್ತಿದೆ’ ಎಂದು ದೂರಿದರು.

‘ರೈತರು ಇಂಥದ್ದಕ್ಕೆಲ್ಲ ಲಕ್ಷ್ಯ ಕೊಡಬಾರದು. ಅವರು ಪ್ರಧಾನಿ ಅವರ ಮೇಲೆ ನಂಬಿಕೆ ಇಟ್ಟುಕೊಂಡು ತಿದ್ದುಪಡಿ ಮಾಡಲಾದ ಕಾಯ್ದೆಗಳ ಜಾರಿಗೆ ಒಂದೆರಡು ವರ್ಷ ಅವಕಾಶ ನೀಡಬೇಕು. ಅದರಿಂದ ಅನುಕೂಲವಾಗದಿದ್ದರೆ ಸರ್ಕಾರವೇ ಕಾಯ್ದೆಗಳನ್ನು ಹಿಂಪಡೆಯುವುದು. ಒಂದು ಅವಕಾಶವನ್ನೇ ನೀಡದಿದ್ದರೇ ಹೇಗೆ?, ಪ್ರಯೋಗ ಮಾಡಲೂ ಸಿದ್ಧಕ್ಕೆ ಅವಕಾಶ ನೀಡದೇ ಇರುವುದರಲ್ಲಿ ಅರ್ಥವೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.

₹31.50 ಲಕ್ಷ ಅನುದಾನದಲ್ಲಿ ಕಾಮಗಾರಿ:

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಮಗದ ಸಾಮಾಜಿಕ ಹೊಣೆಗಾರಿಕೆಯ ನಿಧಿ(ಸಿಎಸ್‌ಆರ್‌) ₹31.50 ಲಕ್ಷ ಅನುದಾನದಲ್ಲಿ ಬೆಂಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್‌, ಗೇಟ್‌ ಹಾಗೂ ಮೈದಾನದಲ್ಲಿ ಪೇವರ್ಸ್ ಅವಳಡಿಕೆಗೆ ಭಾನುವಾರ ಚಾಲನೆ ನೀಡಲಾಯಿತು. ನಿರ್ಮಿತಿ ಕೇಂದ್ರಕ್ಕೆ ಈ ಕಾಮಗಾರಿಯ ಹೊಣೆ ನೀಡಲಾಗಿದೆ.

ಕಾಮಗಾರಿಗೆ ಚಾಲನೆ ನೀಡಿದ ವೇಳೆ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಮಾಜಿ ಸದಸ್ಯ ಬೀರಪ್ಪ ಖಾಂಡೇಕರ್, ಬೆಂಗೇರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಹೊಸಮನಿ, ಮುಖ್ಯ ಶಿಕ್ಷಕಿ ಎನ್‌.ಬಿ.ಬೆಣ್ಣೂರಮಠ, ರಾಜು ಕಾಳೆ, ರವಿ ಮಳಗಿ, ಶೇಕೂ ಹೊಂಡದಕಾಶಿ, ಘೂಳಪ್ಪ ಪಟಾಕಿ, ಅಮ್ಜದ್‌ಖಾನ್ ಪಠಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT