ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳದಲ್ಲಿ ತೇಲಿ ಹೋದ ವೃದ್ಧನ ರಕ್ಷಿಸಿದ ಪೊಲೀಸ್ ಸಿಬ್ಬಂದಿ

Last Updated 17 ಆಗಸ್ಟ್ 2020, 10:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಣ್ಣೆ ಹಳ್ಳದಲ್ಲಿ ತೇಲಿ ಹೋಗುತ್ತಿದ್ದ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ 72 ವರ್ಷದ ಇಮಾಮ್'ಸಾಬ್ ಕರೀಂಸಾಬ್ ಬೆಳಗಲಿ ಎಂಬುವವರನ್ನು ಸಿಎಆರ್ ಪೊಲೀಸ್ ಸಿಬ್ಬಂದಿ ಪ್ರದೀಪ ಅಣ್ಣಿಗೇರಿ ಅವರು ಸೋಮವಾರ ರಕ್ಷಣೆ ಮಾಡಿದ್ದಾರೆ.

ಬೆಳಿಗ್ಗೆ ಹೊಲಕ್ಕೆ ಬಂದಿದ್ದ ಇಮಾಮ್'ಸಾಬ್ ಮನೆಗೆ ವಾಪಸ್ಸಾಗುವಾಗುವ ವೇಳೆ ಯರಗುಪ್ಪಿ ಹಾಗೂ ಯರಿನಾರಾಯಣಪುರ ಗ್ರಾಮಗಳ ಮಧ್ಯದಲ್ಲಿನ ಬೆಣ್ಣೆಹಳ್ಳಕ್ಕೆ ಕಟ್ಟಿಗೆ ತರಲೆಂದು ಹೋಗಿದ್ದರು. ದಂಡೆಯಲ್ಲಿ ನಿಂತು ಕಟ್ಟಿಗೆ ಆಯುವಾಗ ಕಾಲುಜಾರಿ ಹಳ್ಳದಲ್ಲಿ ಬಿದ್ದಿದ್ದಾರೆ. ನೀರಿನಲ್ಲಿ ತೇಲಿ ಹೋಗುತ್ತಿದ್ದ ಅವರನ್ನು ಯರಗುಪ್ಪಿ ಗ್ರಾಮದ ಇಬ್ಬರು ಹುಡುಗರು ನೋಡಿದ್ದು, ರಕ್ಷಣೆ ಮಾಡಲಾಗದೆ ಅಸಹಾಯಕರಾಗಿ ನಿಂತಿದ್ದರು. ಅದೇ ಮಾರ್ಗವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕರ್ತವ್ಯಕ್ಕಾಗಿ ಬರುತ್ತಿದ್ದ ಪೊಲೀಸ್ ಸಿಬ್ಬಂದಿ ಪ್ರದೀಪ ಅಣ್ಣಿಗೇರಿ ಅವರನ್ನು ತಡೆದ ಹುಡುಗರು ವಿಷಯ ತಿಳಿಸಿದ್ದಾರೆ. ಕೂಡಲೇ ಪ್ರದೀಪ ಯರಗುಪ್ಪಿಯ ಗ್ರಾಮಸ್ಥರಿಗೆ ಕರೆ ಮಾಡಿ ಹಗ್ಗ ತರಸಿಕೊಂಡು, ತಾವು ಸಹ ನೀರಿಗಿಳಿದು ಇಮಾಮ್'ಸಾಬ್ ಅವರನ್ನು ರಕ್ಷಣೆ ಮಾಡಿದ್ದಾರೆ.

'ದಡದಿಂದ ಸುಮಾರು 100 ಮೀ. ದೂರವಿರುವ ಹಳ್ಳದಲ್ಲಿ ಇಮಾಮ್'ಸಾಬ್ ತೇಲಿ ಹೋಗುತ್ತಿದ್ದರು. ಕುತ್ತಿಗೆವರೆಗೂ ಮುಳುಗಿದ್ದ ಅವರು, ಅಲ್ಲಿಯೇ ಇದ್ದ ಚಿಕ್ಕ ಜಾಲಿ ಗಿಡವೊಂದರ ಆಶ್ರಯ ಪಡೆದುಕೊಂಡು ನಿಂತಿದ್ದರು. ಅವರು ತೇಲಿ ಹೋಗಿ ಸುಮಾರು ಅರ್ಧಗಂಟೆ ಆಗಿರಬಹುದು‌. ಮಳೆ ಕಡಿಮೆಯಿರುವುದರಿಂದ ಹಳ್ಳದ ರಭಸ ಸ್ವಲ್ಪ ನಿಧಾನವಾಗಿತ್ತು. ಗ್ರಾಮಸ್ಥರು ತಂದ ಹಗ್ಗವನ್ನು ಅವರಿಗೆ ನೀಡಿ, ಧೈರ್ಯ ತುಂಬಿದೆ. ನಂತರ ನಾನು ಸಹ ನೀರಿಗೆ ಇಳಿದು ಅವರನ್ನು ನಿಧಾನವಾಗಿ ದಡಕ್ಕೆ ಕರೆತಂದೆ' ಪ್ರದೀಪ ಅಣ್ಣಿಗೇರಿ 'ಪ್ರಜಾವಾಣಿ'ಗೆ ತಿಳಿಸಿದರು.

'ಪ್ರದೀಪ ಅವರ ಸಮಯ ಪ್ರಜ್ಞೆ ಹಾಗೂ ಸಾಹಸ ಮೆಚ್ಚುವಂತಹದ್ದು. ತುಂಬಿ ಹರಿಯುವ ಹಳ್ಳದಲ್ಲಿ ತಾವೇ ಸ್ವತಃ ಇಳಿದು ಇಮಾಮ್'ಸಾಬ್ ಅವರನ್ನು ರಕ್ಷಣೆ ಮಾಡಿದ್ದಾರೆ. ಅವರು ನಮ್ಮೂರ ಹುಡುಗ ಎನ್ನಲು ಹೆಮ್ಮೆಯಾಗುತ್ತದೆ' ಎಂದು ಯರಗುಪ್ಪಿ ಗ್ರಾಮದ ಎ.ಎಸ್. ಶಿವಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT