ಬೆಂಗಳೂರು: ಸಚಿವ ಆನಂದ್ ಸಿಂಗ್ ಕುಟುಂಬ ಒಡೆತನದ ಎರಡು ಗಣಿಗಳೂ ಸೇರಿದಂತೆ ಮೂರು ಗಣಿಗಳಿಂದ ಕಬ್ಬಿಣದ ಅದಿರು ಕಳ್ಳಸಾಗಣೆ ಮಾಡಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಆರೋಪ ಎದುರಿಸುತ್ತಿರುವ ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಎಂಇಎಲ್)
₹ 5.21 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ದಂತೆ ಲೋಕಾಯುಕ್ತರು ಸಲ್ಲಿಸಿದ್ದ ತನಿಖಾ ವರದಿ ಆಧರಿಸಿ ಮಿನರಲ್ ಎಂಟರ್‌ಪ್ರೈಸಸ್ ವಿರುದ್ಧ ಲೋಕಾಯುಕ್ತದ ವಿಶೇಷ ತನಿಖಾ ದಳ (ಎಸ್‌ಐಟಿ) ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿತ್ತು. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿತ್ತು. ಇ.ಡಿ ಕೋರಿಕೆಯಂತೆ ₹ 5.21 ಕೋಟಿ ಮೌಲ್ಯದ ಆರು ಸ್ಥಿರಾಸ್ತಿಗಳನ್ನು ಮುಟ್ಟುಗೋಲು
ಹಾಕಿಕೊಳ್ಳಲಾಗಿದೆ.
ಎಂಇಎಲ್ ಬೃಹತ್ ಪ್ರಮಾಣದ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಗಳಿಗೆ ರಫ್ತು ಮಾಡಿತ್ತು. ಈ ಅದಿರನ್ನು ಬಿ.ಪಿ. ಆನಂದ್ ಕುಮಾರ್ (ಸಚಿವ ಆನಂದ್ ಸಿಂಗ್), ಅವರ ಚಿಕ್ಕಪ್ಪಂದಿರಾದ ಪಾಂಡುರಂಗ ಸಿಂಗ್ ಮತ್ತು ಗೋಪಾಲ್ ಸಿಂಗ್ ಒಡೆತನದ ಎಸ್.ಬಿ. ಮಿನರಲ್ಸ್‌ಗೆ ಸೇರಿದ ಎರಡು ಗಣಿ ಗುತ್ತಿಗೆ ಪ್ರದೇಶಗಳು ಹಾಗೂ ಶಾಂತಾಲಕ್ಷ್ಮಿ ಮತ್ತು ಜೆ. ಮಿಥಿಲೇಶ್ವರ್ ಒಡೆತನದ ಭಾರತ್ ಮೈನ್ಸ್ ಆ್ಯಂಡ್ ಮಿನರಲ್ಸ್‌ನ ಒಂದು ಗಣಿ ಗುತ್ತಿಗೆ ಪ್ರದೇಶದಿಂದ ಅದಿರನ್ನು ಕಳ್ಳಸಾಗಣೆ ಮಾಡಿರುವುದು ಪತ್ತೆಯಾಗಿತ್ತು. ಭಾರತ್ ಮೈನ್ಸ್ ಆ್ಯಂಡ್ ಮಿನರಲ್ಸ್‌ನಲ್ಲಿ ಬಿಎಂಎಂ ಇಸ್ಪಾಟ್ ಲಿಮಿಟೆಡ್ ಮತ್ತು ದಿನೇಶ್ ಕುಮಾರ್ ಸಿಂಘಿ ಕೂಡ ಪಾಲುದಾರರಾಗಿದ್ದಾರೆ.
‘ಆರೋಪಿಗಳು ಅಕ್ರಮ ಗಣಿಗಾರಿಕೆ ನಡೆಸಿ, ನಿಯಮಾನುಸಾರ ಪರವಾನಗಿ ಪಡೆಯದೇ ಅದಿರು ಕಳ್ಳಸಾಗಣೆ ಮಾಡಿ, ಮಾರಾಟ ಮಾಡಿದ್ದರು. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದರು. ಆ ಮೂಲಕ ವೈಯಕ್ತಿಕವಾಗಿ ಲಾಭ ಮಾಡಿಕೊಂಡಿದ್ದರು’ ಎಂದು ಇ.ಡಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.