ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರುಬೇಕಾದರೂ ಪಕ್ಷ ಸೇರಲು ಅರ್ಜಿ ಹಾಕಬಹುದು– ಡಿಕೆಶಿ

ಪ್ರಳಯ ಆದರೂ ಬಿಜೆಪಿ ಸೇರಿದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲವೆಂದು ಸದನದಲ್ಲಿ ಹೇಳಿದ್ದೆ– ಸಿದ್ದರಾಮಯ್ಯ
Last Updated 3 ಜುಲೈ 2021, 10:30 IST
ಅಕ್ಷರ ಗಾತ್ರ

ಬೆಂಗಳೂರು: ಭಾವಿ ಮುಖ್ಯಮಂತ್ರಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಗೊಂದಲ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಎದ್ದಿದ್ದ ಭಿನ್ನಧ್ವನಿಯ ಬೆನ್ನಲ್ಲೇ, ಇದೀಗ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದ ಶಾಸಕರನ್ನು ಮರಳಿ ಕಾಂಗ್ರೆಸ್‌ ಸೇರಿಸಿಕೊಳ್ಳುವ ವಿಚಾರದಲ್ಲೂ ಚರ್ಚೆ ಮುನ್ನಲೆಗೆ ಬಂದಿದೆ.

‘ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ, ಕೆಲಸ ಮಾಡಲು ಇಚ್ಛಿಸುವ ಯಾರೇ ಆದರೂ ಪಕ್ಷ ಸೇರಲು ಅರ್ಜಿ ಹಾಕಬಹುದು. ನಾನು ಕೇವಲ 17 ಜನರನ್ನು ಉದ್ದೇಶಿಸಿ ಈ ಮಾತು ಹೇಳುತ್ತಿಲ್ಲ. ಯಾರೇ ಅರ್ಜಿ ಹಾಕಿದರೂ ಅದನ್ನು ಪರಿಶೀಲಿಸಿ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ‘ಪ್ರಳಯ ಆದರೂ 14 ಜನರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಸದನದಲ್ಲಿ ಹೇಳಿದ್ದೆ. ಈ ಬಗ್ಗೆ ಡಿ.ಕೆ. ಶಿವಕುಮಾರ್‌ ಜೊತೆ ನಾನು ಮಾತಾಡ್ತೇನೆ. ನಾನು ಹೇಳುವುದನ್ನು ಕೇಳಿ’ ಎಂದು ಗರಂ ಆದರು.

ಅರ್ಜಿ ಹಾಕಲಿ: ‘ಯಾರು ಕಾಂಗ್ರೆಸ್ ಸಿದ್ಧಾಂತ, ನಾಯಕತ್ವ ನಂಬಿ ಪಕ್ಷ ಸೇರಲು ಬಯಸುತ್ತಾರೋ ಅವರು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಗೆ ಅರ್ಜಿ ಹಾಕಲಿ. ಅವರು ಪರಿಶೀಲಿಸಿ, ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ತೆಗೆದುಕೊಳ್ಳಬಾರದು ಅಂತಾ ನಿರ್ಧರಿಸುತ್ತಾರೆ. ಮುಂದೆ ಯಾವುದೇ ಗೊಂದಲ ಉದ್ಭವಿಸಬಾರದು ಎಂದು ನಾವು ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಆನಂತರ ರಾಜ್ಯಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯಾರಿಗೆ ಇಚ್ಛೇ ಇದೆಯೋ ಅವರು ಅರ್ಜಿ ಹಾಕಲಿ, ಆಮೇಲೆ ಆ ಬಗ್ಗೆ ತೀರ್ಮಾನ ಮಾಡೋಣ’ ಎಂದು ಶಿವಕುಮಾರ್‌ ಹೇಳಿದರು.

‘ನಮ್ಮಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಅಭಿಪ್ರಾಯ ಇರುತ್ತದೆ. ಇಲ್ಲಿ ವೈಯಕ್ತಿಕ ಅಭಿಪ್ರಾಯ ಮುಖ್ಯ ಅಲ್ಲ. ಪಕ್ಷದ ಒಟ್ಟಾರೆ ಅಭಿಪ್ರಾಯ ಮುಖ್ಯ. ಪಕ್ಷ ತೊರೆದು ಮಂತ್ರಿಯಾಗಿರುವ ಯಾರೂ ಪಕ್ಷ ಸೇರುವ ಬಗ್ಗೆ ಸಂಪರ್ಕ ಮಾಡಿಲ್ಲ. ನಾನು ಕೇವಲ ಅವರನ್ನು ಉದ್ದೇಶಿಸಿ ಮಾತ್ರ ಈ ಮಾತು ಹೇಳುತ್ತಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು’ ಎಂದರು.

‘ರಾಜಕೀಯದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ನಿತ್ಯ ನಡೆಯುತ್ತಿರುತ್ತದೆ. ಇದು ಕೇವಲ ಡಿ.ಕೆ. ಶಿವಕುಮಾರ್ ಅಥವಾ ಕಾಂಗ್ರೆಸ್ ಪಕ್ಷ ಅಂತ ಅಲ್ಲ, ಎಲ್ಲ ಪಕ್ಷದಲ್ಲೂ ಇಂಥ ಉದಾಹರಣೆಗಳನ್ನು ನೋಡಿದ್ದೇವೆ. ಪ್ರತಾಪಗೌಡ ಪಾಟೀಲ ಅವರನ್ನು ನಾವು ಬಿಜೆಪಿಯಿಂದಲೇ ಕರೆ ತಂದಿದ್ದೆವು. ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವುದು, ಮರಳುವುದು ರಾಜಕೀಯದಲ್ಲಿ ಸಾಮಾನ್ಯ.

ಅಧ್ಯಕ್ಷರ ಜೊತೆ ಮಾತನಾಡುತ್ತೇನೆ: ಕಾಂಗ್ರೆಸ್ ನಿಂದ ಹೋಗಿರುವ 14 ಜನರನ್ನು ಮರಳಿ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರನ್ನು ಸೇರಿಸಿಕೊಳ್ಳುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿಲ್ಲ. ನಿಮ್ಮ (ಮಾಧ್ಯಮ) ವಿಶ್ಲೇಷಣೆ ಸರಿಯಿಲ್ಲ. ಅವರನ್ನು ಸೇರಿಸಿಕೊಳ್ತೇನೆ ಎಂದು ಹೇಳಿದ್ದಾರಾ’ ಎಂದು ಪ್ರಶ್ನಿಸಿದರು.

‘ಡಿಕೆಶಿ ಅವರು ಎಲ್ಲಿ ಹೇಳಿದ್ದಾರಪ್ಪಾ ಸ್ಪಷ್ಟವಾಗಿ. ನಮ್ಮಿಂದ 14 ಜನ ಹೋಗಿದ್ದಾರೆ. 14 ಜನ ಹೋದವರು ಬನ್ನಿ ಎಂದಿದ್ದಾರಾ. ಪಕ್ಷ ತೊರೆದು ಅವರು ಹೋಗಿರುವವರು. 14 ಜನ ಬನ್ನಿ ಎಂದು ಎಲ್ಲೂ ಕರೆದಿಲ್ಲ. ನಾನು ಬನ್ನಿ ಎಂದು ಹೇಳಲ್ಲ. ಅಧ್ಯಕ್ಷರ ಜೊತೆ ಮಾತನಾಡ್ತೇನೆ’ ಎಂದರು.

ಡಿವಿಎಸ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಕಳ್ಳನ ಮನಸ್ಸು ಹುಳ್ಳುಳ್ಳಗೆ ಅಂತಾರಲ್ಲಾ. ಕುಂಬಳಕಾಯಿ ಕಳ್ಳ ಅಂದರೆ ಬೆನ್ನು ಮುಟ್ಕೊಂಡು ನೋಡಲ್ವಾ..? ಹುಳಕು ಇದ್ರೆ ತಾನೇ ಈ ರೀತಿ ಮಾಡೋದು’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT