ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹಿತವೇ: ಮಾರಕವೇ– ಜಿಜ್ಞಾಸೆ

ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗದ ಎಪಿಎಂಸಿ ಮಸೂದೆ
Last Updated 27 ಸೆಪ್ಟೆಂಬರ್ 2020, 20:49 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ತಿದ್ದುಪಡಿ) ಮಸೂದೆ (ಎಪಿಎಂಸಿ) ರೈತರ ಪಾಲಿನ ‘ಮರಣ ಶಾಸನ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ವ್ಯಾಖ್ಯಾನಿಸಿದರೆ, ರೈತರಿಗೆ ಸ್ವಾತಂತ್ರ್ಯ ನೀಡುವ ಮತ್ತು ಅವರ ಆದಾಯ ಹೆಚ್ಚಿಸುವ ಮಸೂದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಶನಿವಾರ ರಾತ್ರಿ ಮಂಡಿಸಿದ ಮಸೂದೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆ ಮಸೂದೆಗೆ ಒಪ್ಪಿಗೆ ಪಡೆದರೆ, ವಿಧಾನ ಪರಿಷತ್ತಿನಲ್ಲಿ ಮಸೂದೆ ಮಂಡನೆಯಾಗಲಿಲ್ಲ.

‘ಕೇಂದ್ರ ಸರ್ಕಾರದ ಒತ್ತಾಯದ ಮೇರೆಗೆ ಈ ಮಸೂದೆಗೆ ತಿದ್ದುಪಡಿ ಮಾಡಲಾಗಿದೆ. ಮೈತ್ರಿ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಒತ್ತಡ ಹೇರಿದ್ದರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಒತ್ತಡಗಳಿಗೆ ಮಣಿದು ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಒತ್ತಡ ಹೇರಿದೆ. ಕೃಷಿ ಮಾರುಕಟ್ಟೆ ವಿಷಯ ರಾಜ್ಯಕ್ಕೆ ಸಂಬಂಧಿಸಿದ್ದು. ಇದರಲ್ಲಿ ಕೇಂದ್ರ ಮೂಗು ತೂರಿಸುವಂತಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಖಾಸಗಿ ಕಂಪನಿಗಳು ಆರಂಭದಲ್ಲಿ ಕೆಲವು ವರ್ಷ ರೈತರ ಬೆಳೆಗಳಿಗೆ ಉತ್ತಮ ಬೆಲೆಯನ್ನು ನೀಡಬಹುದು. ಇದರಿಂದ ರೈತರು ಎಪಿಎಂಸಿ ಬಿಟ್ಟು, ಖಾಸಗಿಯವರನ್ನು ಅವಲಂಬಿಸುತ್ತಾರೆ. ಪರಿಣಾಮ ಎಪಿಎಂಸಿಗಳು ಮುಚ್ಚಿ ಹೋಗುತ್ತವೆ. ಖಾಸಗಿಯವರು ಸ್ವಂತ ಮಾರುಕಟ್ಟೆಗಳನ್ನು ತೆರೆದು ರೈತರ ಜುಟ್ಟನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ’ ಎಂದು ಎಚ್ಚರಿಸಿದರು.

‘ಕಾಂಗ್ರೆಸ್‌ ಪಕ್ಷವೇ 2019ರ ಲೋಕಸಭಾ ಚುನಾವಣೆ ಘೋಷಣಾ ಪತ್ರದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವುದಾಗಿ ಘೋಷಿಸಿತ್ತು. ಈಗ ವಿರೋಧ ಮಾಡುತ್ತಿರುವುದು ಏಕೆ’ ಎಂದು ಸಚಿವ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

‘ನಾವು ಹೇಳಿದ್ದೆಲ್ಲ ಮಾಡಬೇಕೆಂದೇನಿಲ್ಲ. ನೀವು ಮಾಡಬಾರದಿತ್ತು. ನೀವು ಘೋಷಣಾ ಪತ್ರದಲ್ಲಿ ಹೇಳಿದ್ದೆಲ್ಲ ಮಾಡಿದ್ದೀರಾ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಎಪಿಎಂಸಿಗಳಲ್ಲಿ ಇರುವ ಲೋಪಗಳನ್ನು ಸರಿಪಡಿಸಬೇಕೆ ಹೊರತು, ಅವುಗಳ ಅಸ್ತಿತ್ವವನ್ನೇ ನಾಶ ಮಾಡುವ ಕಾನೂನು ರೂಪಿಸಬಾರದು. ಈ ಮಸೂದೆ ರೈತರನ್ನು ಸಂಕಷ್ಟಕ್ಕೆ ದೂಡುತ್ತದೆ. ಮಾತ್ರವಲ್ಲ, ಇದರಿಂದ 30,000 ಹಮಾಲಿಗಳು ಬೀದಿಗೆ ಬರುತ್ತಾರೆ. ಇವರ ಜೀವನ
ಭದ್ರತೆಗೆ ಖಾತರಿ ಏನಿದೆ’ ಎಂದು ಪ್ರಶ್ನಿಸಿದರು.

ಮಸೂದೆಗೆ ತಿದ್ದುಪಡಿ ಸಮರ್ಥಿಸಿಕೊಂಡ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ‘ಈ ಮಸೂದೆಯಿಂದ ರೈತರಿಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ರೈತ ತಾನು ಬೆಳೆದ ಬೆಳೆಗೆ ಎಲ್ಲಿ ಉತ್ತಮ ಬೆಲೆ ಸಿಗುತ್ತದೆಯೋ ಅಲ್ಲಿ ಮಾರಬಹುದು. ದಲ್ಲಾಳಿಗಳ ಕಪಿಮುಷ್ಠಿಯಿಂದ ಬಿಡುಗಡೆಯಾಗುತ್ತಾನೆ. ಇದೊಂದು ಸುಧಾರಣಾವಾದಿ ಮಸೂದೆ’ ಎಂದು ಹೇಳಿದರು.

ಚರ್ಚೆ

ಬಿಹಾರದಲ್ಲಿ 2006ರಲ್ಲಿ ಎಪಿಎಂಸಿಗಳನ್ನು ರದ್ದು ಮಾಡಲಾಯಿತು. ಅಲ್ಲಿ ರೈತರ ಸ್ಥಿತಿ ಉತ್ತಮವಾಗಲಿಲ್ಲ. ಕೆಸರಾದ ರೈತರ ಕೈಗಳನ್ನು ಕತ್ತರಿಸಬೇಡಿ - ಶರತ್‌ ಬಚ್ಚೇಗೌಡ, ಪಕ್ಷೇತರ ಶಾಸಕ

ವಿಶ್ವವೇ ಮಾರುಕಟ್ಟೆ ಆಗಿರುವಾಗ, ನಮ್ಮ ರೈತರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗೆ ತಲುಪಲು ಮುಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ - ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ

164 ಎಪಿಎಂಸಿಗಳಿಗೆ ಹೋಗಿದ್ದೆ. ಬೆಲೆ ಸಿಗುತ್ತಿಲ್ಲ, ಅನ್ಯಾಯವಾಗುತ್ತಿದೆ ಎಂಬುದಾಗಿ ರೈತರು ದೂರಿದರು. ಅದಕ್ಕೆ ಮಸೂದೆ ಪರಿಹಾರ ನೀಡುತ್ತದೆ - ಎಸ್‌.ಟಿ.ಸೋಮಶೇಖರ್, ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT