ಭಾನುವಾರ, ಜುಲೈ 3, 2022
27 °C
ರಾಜಕೀಯ ಕಹಳೆ ಮೊಳಗಿಸಿದ ದೆಹಲಿ ಸಿ.ಎಂ l ಬದಲಾವಣೆಯ ಸಂದೇಶ ಸಾರಿದ ಸಮಾವೇಶ

ಕರ್ನಾಟಕದಲ್ಲೂ ಎಎಪಿ ಸರ್ಕಾರ ರಚನೆ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೆಹಲಿ, ಪಂಜಾಬ್‌ನಲ್ಲಿ ಅಧಿಕಾರ ನಡೆಸುತ್ತಿರುವ ಆಮ್‌ ಆದ್ಮಿ ಪಕ್ಷ (ಎಎಪಿ)ಕರ್ನಾಟಕದಲ್ಲೂ ತನ್ನ ಕಾಲೂರುವ ಯತ್ನಕ್ಕೆ ಮುಂದಡಿ ಇಟ್ಟಿದ್ದು, 2023ರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜತೆ ಒಗ್ಗೂಡಿ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದೆ.

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದ ರೈತರ ಬೃಹತ್‌ ಸಮಾವೇಶವನ್ನು ರಾಗಿಯ ರಾಶಿ ಪೂಜೆ ಮೂಲಕ ಉದ್ಘಾಟಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ’ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಕರ್ನಾಟಕದಲ್ಲಿ ಬದಲಾವಣೆ ಅಗತ್ಯ. ದೆಹಲಿ, ಪಂಜಾಬ್‌ ನಂತರ ಕರ್ನಾಟಕದಲ್ಲಿ ಸರ್ಕಾರ ರಚಿಸಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಭಾಷಣದುದ್ದಕ್ಕೂ ದೆಹಲಿಯಲ್ಲಿನ ಎಎಪಿ ಸರ್ಕಾರದ ಪಾರದರ್ಶಕ ಆಡಳಿತ ಹಾಗೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಅಮೂಲಾಗ್ರ ಬದಲಾವಣೆಗಳನ್ನು ಉದಾಹರಣೆಗಳ ಸಮೇತ ವಿವರಿಸಿದ ಅವರು, ‘ಕರ್ನಾಟಕದಲ್ಲಿ ಹಿಂದೆ ಶೇ 20ರಷ್ಟು ಕಮಿಷನ್ ಪಡೆಯುವ ಸರ್ಕಾರ ಇತ್ತು. ಈಗ ಶೇ 40ರಷ್ಟು ಕಮಿಷನ್‌ ಸರ್ಕಾರ ಇದೆ. ಆದರೆ, ದೆಹಲಿಯಲ್ಲಿ ಶೂನ್ಯ (ಶೇ 0) ಕಮಿಷನ್‌ ಪಡೆಯುವ ಸರ್ಕಾರ ಇದೆ. ನಮ್ಮದು ಅತ್ಯಂತ ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ’ ಎಂದು ಪ್ರತಿಪಾದಿಸಿದರು.

‘ನಾನು ಅತ್ಯಂತ ಪ್ರಾಮಾಣಿಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮಾಣಪತ್ರ ನೀಡಿದ್ದಾರೆ. ನನ್ನ ಮನೆ ಮೇಲೆ ಸಿಬಿಐ, ಆದಾಯ ತೆರಿಗೆ ಸೇರಿದಂತೆ ಎಲ್ಲ ಇಲಾಖೆಗಳ ಮೂಲಕ ದಾಳಿ ನಡೆಸಲಾಯಿತು. ಆದರೆ, ಅವರಿಗೆ ಏನೂ ದೊರೆಯಲಿಲ್ಲ. ಇದೇ ರೀತಿ ನಮ್ಮ ಪಕ್ಷದ 20 ಶಾಸಕರ ಮನೆ ಮೇಲೆಯೂ ದಾಳಿ ನಡೆಸಲಾಯಿತು. ಅಲ್ಲಿಯೂ ಅವರಿಗೆ ಅಕ್ರಮದ ಹಣ ದೊರೆಯಲಿಲ್ಲ. ನನಗೆ ರಾಜಕೀಯ ಮಾಡಲು ಬರುವುದಿಲ್ಲ. ಆದರೆ, ನನಗೆ ಜನಸಾಮಾನ್ಯರ ನೋವುಗಳು, ಭಾವನೆಗಳು ಅರ್ಥವಾಗುತ್ತವೆ’ ಎಂದರು.

‘ನಾವು ಪ್ರಾಮಾಣಿಕರಾಗಿದ್ದೇವೆ. ಹೀಗಾಗಿಯೇ ಹಣ ಉಳಿಸಿ ಶಿಕ್ಷಣ, ಆರೋಗ್ಯ, ವಿದ್ಯುತ್‌, ನೀರು ಉಚಿತ
ವಾಗಿ ನೀಡುತ್ತಿದ್ದೇವೆ. ಜತೆಗೆ, ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿದ್ದೇವೆ. ನಮಗೆ ಗೂಂಡಾಗಿರಿ ಮಾಡಲು ಬರುವುದಿಲ್ಲ. ಶಾಲೆಗಳನ್ನು ನಿರ್ಮಿಸುವುದು ಮಾತ್ರ ಗೊತ್ತಿದೆ. ನಿಮಗೆ ಉತ್ತಮ ಶಾಲೆ ಮತ್ತು ಆಸ್ಪತ್ರೆಗಳು, ನೀರು, ವಿದ್ಯುತ್‌ ಬೇಕಾಗಿದ್ದರೆ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸಿ’ ಎಂದರು.

‘ನನ್ನ ತಂದೆ–ತಾಯಿ ಮಾತ್ರ ಮನೆಯಲ್ಲಿದ್ದಾಗ ಕೆಲ ಗೂಂಡಾಗಳು ದಾಳಿ ನಡೆಸಿದರು. ಆದರೆ, ಈ ಗೂಂಡಾಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಯಿತು. ಗೂಂಡಾಗಳು, ಲಫಂಗರು, ಅತ್ಯಾಚಾರಿಗಳು, ಭ್ರಷ್ಟರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಯಾರಾದರೂ ಬಲತ್ಕಾರ ಮಾಡಿದರೆ ಅಂತವರನ್ನು ಮೆರವಣಿಗೆ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಉತ್ತರ ಪ್ರದೇಶ ಲಖಿಂಪುರದಲ್ಲಿ ರೈತರ ಮೇಲೆಯೇ ಜೀಪ್‌ ಹರಿಸಿದ ಪ್ರಕರಣದಲ್ಲೂ ಸರ್ಕಾರ ಮೌನವಹಿಸಿತು’ ಎಂದು ವಾಗ್ದಾಳಿ ನಡೆಸಿದರು.

ಎಎಪಿ ರೈತ ಸಂಘದ ರಾಜಕೀಯ ಮುಖವಾಣಿ: ಕೋಡಿಹಳ್ಳಿ

‘ಆಮ್‌ ಆದ್ಮಿ ಪಕ್ಷ ರೈತ ಸಂಘದ ರಾಜಕೀಯ ಮುಖವಾಣಿಯಾಗಲಿದೆ. 2023ರ ವಿಧಾನಸಭೆ ಚುನಾವಣೆಯನ್ನು ಎಎಪಿ ಜತೆ ಕೈಜೋಡಿಸಿ ಎದುರಿಸಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ‘ನಮ್ಮ ಚುನಾವಣೆ ಅಸ್ತ್ರ ಪೊರಕೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳ ಭ್ರಷ್ಟಾಚಾರವನ್ನು ಕಂಡ ಜನ ರೋಸಿಹೋಗಿದ್ದು, ರಾಜ್ಯಕ್ಕೆ ಪರ್ಯಾಯ ರಾಜಕಾರಣ ಬೇಕಾಗಿದೆ. ರೈತ ಸಂಘವು ಸ್ವತಂತ್ರವಾಗಿದ್ದುಕೊಂಡು ಕರ್ನಾಟಕದಲ್ಲಿ ಎಎಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಶ್ರಮಿಸಲಿದೆ’ ಎಂದರು.

‘ಎಲ್ಲ ರಾಜಕೀಯ ಪಕ್ಷಗಳ ಉಸಿರಾಟವೇ ಭ್ರಷ್ಟಾಚಾರವಾಗಿದೆ. ಲೂಟಿ ಮಾಡುವುದನ್ನೇ ಮೈಗೂಡಿಸಿಕೊಂಡಿವೆ. ಬಿಜೆಪಿ ಆಡಳಿತ ನಡೆಸುತ್ತಿರುವ ಯಾವುದಾದರೂ ರಾಜ್ಯ ಭ್ರಷ್ಟಾಚಾರ ಮುಕ್ತವಾಗಿವೆಯೇ? ಇಂತಹ ಒಂದಾದರೂ ಉದಾಹರಣೆಯನ್ನು ಬಿಜೆಪಿ ನೀಡಲಿ. ಕರ್ನಾಟಕದಲ್ಲಿ ಶೇ 40 ಕಮಿಷನ್‌ ಪಡೆಯುವುದೇ ಸಾಧನೆಯಾಗಿದೆ. ಇದು ಕಾಂಗ್ರೆಸ್‌ಗೂ ಅನ್ವಯ’ ಎಂದು ಕಿಡಿಕಾರಿದರು.

***

ಜನವಿರೋಧಿ ಸರ್ಕಾರ ಕೋಮುವಾದದ ವಿಷಬೀಜ ಬಿತ್ತುತ್ತಿದೆ. ದೆಹಲಿ, ಪಂಜಾಬ್‌ ನಂತರ ಕರ್ನಾಟಕದಲ್ಲಿ ಎಎಪಿ ಸರ್ಕಾರ ರಚನೆಯಾಗಬೇಕು

- ಎಚ್‌.ಆರ್‌.ಬಸವರಾಜಪ್ಪ, ರೈತ ಮುಖಂಡ.

***

ಹಸಿರುಶಾಲು ವಿಧಾನಸಭೆ ಪ್ರವೇಶಿಸಬೇಕು. ಇದಕ್ಕಾಗಿ ಹೊಸ ರಾಜಕೀಯ ಪ್ರಕ್ರಿಯೆ ನಡೆಯ ಬೇಕಾಗಿದೆ. ಜಾತಿ, ಹಣ ಬಲವನ್ನು ಮತದಾರರು ತಿರಸ್ಕರಿಸಬೇಕು.

- ಪ್ರಕಾಶ್ ಕಮ್ಮರಡಿ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ

***

ಶೇ 40ರ ಭ್ರಷ್ಟಾಚಾರದ ಫಲಾನುಭವಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ, ಜನಸಾಮಾನ್ಯರು ಸಂಕಷ್ಟದಲ್ಲಿ ನರಳುತ್ತಿದ್ದಾರೆ. ದುರಾಡಳಿತ ಮತ್ತು ಸೋರಿಕೆಯಿಂದ ಅನುದಾನ ಕೊರತೆಯಾಗುತ್ತಿದೆ. ನಗರಗಳ ಬದಲು ಹಳ್ಳಿಗಳನ್ನು ಮೊದಲು ಸ್ಮಾರ್ಟ್‌ ಮಾಡಿ.

- ಭಾಸ್ಕರ್‌ ರಾವ್‌, ಎಎಪಿ ಮುಖಂಡ

***

ಜನಸಾಮಾನ್ಯರು ಸಹ ಚುನಾವಣೆ ಸ್ಪರ್ಧಿಸಿ ಜನಪರ ಕೆಲಸ ಮಾಡಬಹುದು ಎನ್ನುವುದನ್ನು ಆಮ್‌ ಆದ್ಮಿ ಪಕ್ಷ ತೋರಿಸಿದೆ. ದೆಹಲಿಯಲ್ಲಿ ಜನರು ನೀಡಿದ ತೆರಿಗೆ ಹಣವನ್ನೇ ವಾಪಸ್‌ ನೀಡಲಾಗುತ್ತಿದೆ.

- ಪೃಥ್ವಿರೆಡ್ಡಿ, ಎಎಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು