ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕ ಹುದ್ದೆ: ಪಿ.ಜಿ ಪಾಸಾಗುವ ಮೊದಲೇ ಕೆ–ಸೆಟ್ ಪಾಸಾಗಿದ್ದರೂ ಅವಕಾಶ

ತಕ್ಷಣ ಎಚ್ಚೆತ್ತುಕೊಂಡ ಕೆಇಎ
Last Updated 22 ಅಕ್ಟೋಬರ್ 2021, 5:23 IST
ಅಕ್ಷರ ಗಾತ್ರ

ಬೆಂಗಳೂರು: ಸ್ನಾತಕೋತ್ತರ ಪದವಿ (ಪಿ.ಜಿ) ಪಾಸಾಗುವ ಮೊದಲೇ ಕೆ–ಸೆಟ್‌ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) ಪಾಸಾಗಿದ್ದರೆ, ಅಂಥವರು ಸದ್ಯ ಅರ್ಜಿ ಆಹ್ವಾನಿಸಿರುವ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಆನ್‌ಲೈನ್‌ ಅರ್ಜಿಯಲ್ಲಿ ಮಾರ್ಪಾಡು ಮಾಡಿದೆ.

ಅರ್ಜಿ ಸಲ್ಲಿಸಲು ಸಾಧ್ಯವಾಗದ ಬಗ್ಗೆ ‘ಪ್ರಜಾವಾಣಿ’ಯ ಶುಕ್ರವಾರದ (ಅ. 22) ಸಂಚಿಕೆಯಲ್ಲಿ ವರದಿ ಪ್ರಕಟವಾಗಿದೆ. ಆ ಬೆನ್ನಲ್ಲೆ, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, ಈ ಸಮಸ್ಯೆಯನ್ನು ಪರಿಹರಿಸಿರುವ ಬಗ್ಗೆ ಖಚಿತಪಡಿಸಿದ್ದಾರೆ.

‘ಸ್ನಾತಕೋತ್ತರ ಓದುತ್ತಿರುವಾಗಲೇ ಕೆ–ಸೆಟ್‌ ಬರೆಯಲು ಅವಕಾಶವಿದೆ ಎಂಬ ಬಗ್ಗೆ ಅರ್ಜಿಯನ್ನು ವಿನ್ಯಾಸಗೊಳಿಸುವ ಸಂದರ್ಭದಲ್ಲಿ ಗಮನಕ್ಕೆ ಬಂದಿರಲಿಲ್ಲ. ಮೊದಲು ಪದವಿ, ಸ್ನಾತಕೋತ್ತರ ಪದವಿ, ನಂತರ ಪಿಎಚ್‌.ಡಿ ಬಳಿಕ ಅರ್ಹತಾ ಪರೀಕ್ಷೆಗಳಾದ ಕೆ–ಸೆಟ್‌, ನೆಟ್‌ ಎಂದುಕೊಂಡಿದ್ದೆವು. ಅಲ್ಲದೆ, ಯಾವುದೇ ವಂಚನೆಗೆ ಅವಕಾಶ ಆಗಬಾರದು ಎಂಬ ಕಾರಣಕ್ಕೆ ಇಡೀ ಅರ್ಜಿಯನ್ನು ವಿನ್ಯಾಸಗೊಳಿಸಿದ್ದೆವು’ ಎಂದು ಅವರು ತಿಳಿಸಿದರು.

‘ಈ ಹಿಂದೆ ನಡೆದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿ ವೇಳೆ ಅರ್ಹತಾ ಪರೀಕ್ಷೆ ಪಾಸಾದ ಬಗ್ಗೆ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದು ಗಮನಕ್ಕೆ ಬಂದಿತ್ತು. ಈ ಬಾರಿ ಆ ರೀತಿ ಆಗಬಾರದು ಎಂಬ ಕಾರಣಕ್ಕೆ ಅರ್ಜಿ ನಮೂನೆಯನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಲಾಗಿದೆ. ಆದರೆ, ಪಿಜಿ ಓದುತ್ತಿರುವಾಗಲೇ ಕೆ–ಸೆಟ್‌ ಬರೆಯಲು ಅವಕಾಶ ಇರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಅರ್ಜಿ ನಮೂನೆಯನ್ನು ಬದಲಿಸಿ ಎಲ್ಲ ಗೊಂದಲಗಳನ್ನು ಸರಿಪಡಿಸಿದ್ದೇವೆ. ಈ ಬಗ್ಗೆ, ನಮ್ಮ (ಕೆಇಎ) ವೆಬ್‌ಸೈಟ್‌ನಲ್ಲೂ ಮಾಹಿತಿ ನೀಡಿದ್ದೇವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು‘ ಎಂದೂ ರಮ್ಯಾ ವಿವರಿಸಿದರು.

ಎಲ್ಲ ಹುದ್ದೆಗಳಿಗೆ ಅರ್ಜಿ: ‘ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು 371 (ಜೆ) ಮೀಸಲಾತಿ ಅಡಿ ಮೀಸಲಿಟ್ಟ ಹುದ್ದೆಗಳ ಜೊತೆಗೆ ಎಲ್ಲ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು ಹುದ್ದೆಗಳಲ್ಲಿ 158 ಹುದ್ದೆಗಳನ್ನು 371(ಜೆ) ಅಡಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ‘ಹೈಕ (ಎಚ್‌ಕೆ) ಪ್ರದೇಶದ ಅಡಿಯಲ್ಲಿ ಮೀಸಲಾತಿ ಕೋರುತ್ತಿದ್ದೀರಾ’ ಎಂದು ಮತ್ತು ‘ಎಚ್‍ಕೆ ಆದ್ಯತೆ’ ಎಂದು ಅರ್ಜಿಯಲ್ಲಿ ನಮೂದಿಸಿದರೆ ಮತ್ತು ಒಂದೊಮ್ಮೆ ಎರಡೂ ವೃಂದಗಳಲ್ಲಿ (ಎಚ್‌ಕೆ ಮೀಸಲಾತಿ ಮತ್ತು ಇತರ ವೃಂದದಡಿ) ಆಯ್ಕೆಯಾದವರೆ ‘ಆದ್ಯತೆ’ ಎಂದು ನಮೂದಿಸಿದ ಪ್ರಕಾರ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT