ಶುಕ್ರವಾರ, ಸೆಪ್ಟೆಂಬರ್ 17, 2021
22 °C

₹ 600 ಕೋಟಿ ಆಸ್ತಿ ಕಬಳಿಕೆ: ಭೂಗಳ್ಳರ ಜಾಲ ಭೇದಿಸಿದ ಸಿಐಡಿ

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನಕಲಿ ಕಕ್ಷಿದಾರ–ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸುತ್ತಿದ್ದ ಭೂಗಳ್ಳರ ಭಾರಿ ಜಾಲವನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ.

‘ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ’ ಬಗ್ಗೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಲಘು ಪ್ರಕರಣಗಳ ನ್ಯಾಯಾಲಯದ (ಎಸ್‌ಸಿಸಿಎಚ್) ರಿಜಿಸ್ಟ್ರಾರ್ ಆರ್. ಧನಲಕ್ಷ್ಮಿ, ಹಲಸೂರು ಗೇಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ 2020ರ ಡಿಸೆಂಬರ್ 7ರಂದು ಎಫ್‌ಐಆರ್ ದಾಖಲಾಗಿತ್ತು. ಇದರ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ನಕಲಿ ದಾಖಲೆ ಸೃಷ್ಟಿಸಿ ರಾಜಿ ಡಿಕ್ರಿ ಪಡೆದಿದ್ದ ಸುಮಾರು 116 ನಕಲಿ ಮೊಕದ್ದಮೆಗಳನ್ನು ಪತ್ತೆ ಹಚ್ಚಿದ್ದಾರೆ.

‘ಬೆಂಗಳೂರು ಹಾಗೂ ಹೊರವಲಯದ ಜಾಗಕ್ಕೆ ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ ಇದೆ. ಕೆಲ ಜಾಗಗಳನ್ನು ವಾರಸುದಾರರು ಬಳಸಿಕೊಳ್ಳುತ್ತಿಲ್ಲ. ಅಂಥ ಜಾಗಗಳನ್ನು ಗುರುತಿಸಿ ಕಬಳಿಸುತ್ತಿದ್ದ ಜಾಲದ ಬಗ್ಗೆ ದಾಖಲೆ ಸಮೇತ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸದ್ಯಕ್ಕೆ 116 ನಕಲಿ ಮೊಕದ್ದಮೆಗಳಲ್ಲಿ ಸುಮಾರು ₹ 600 ಕೋಟಿ ಮೌಲ್ಯದ ಆಸ್ತಿಯನ್ನು ಭೂಗಳ್ಳರು ತಮ್ಮದಾಗಿಸಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಷಾ ಹರಿಲಾಲ್ ಭಿಕಾಬಾಯಿ ಅಂಡ್ ಕಂಪನಿ ಪ್ರಕರಣದಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೆಲವರು ನಕಲಿ ಮೊಕದ್ದಮೆ ದಾಖಲಿಸಿ ರಾಜಿ ಡಿಕ್ರಿ ಪಡೆಯುತ್ತಿದ್ದ ಸಂಗತಿಯನ್ನು ಪತ್ತೆ ಹಚ್ಚಿತ್ತು. ಎಫ್‌ಐಆರ್ ದಾಖಲಿಸಿ ಸಿಐಡಿ ಅಧಿಕಾರಿಗಳಿಂದ ವಿಶೇಷ ತನಿಖೆ ನಡೆಸುವಂತೆಯೂ ನಿರ್ದೇಶನ ನೀಡಿತ್ತು’ ಎಂದೂ ಮೂಲಗಳು ತಿಳಿಸಿವೆ.

ನಾಲ್ವರು ವಕೀಲರ ಬಂಧನ: ‘ಭೂಗಳ್ಳರ ಜೊತೆ ಕೈ ಜೋಡಿಸಿದ್ದ ನಾಲ್ವರು ವಕೀಲರನ್ನು ಈಗಾಗಲೇ ಬಂಧಿಸಲಾಗಿದೆ. ತನಿಖೆ ಗೌಪ್ಯತೆ ದೃಷ್ಟಿಯಿಂದ ಬಂಧಿತರ ಹೆಸರು ಬಹಿರಂಗಪಡಿಸಲಾಗದು. ಬಂಧಿತರ ವಿಚಾರಣೆಯಿಂದ ಮಹತ್ವದ ಮಾಹಿತಿಗಳು ಲಭ್ಯವಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನೂ ಪತ್ತೆ ಮಾಡಲಾಗಿದೆ’.

‘ಖಾಲಿ ಜಾಗಗಳನ್ನು ಗುರುತಿಸುತ್ತಿದ್ದ ಪ್ರಮುಖ ಆರೋಪಿ, ಅವುಗಳ ಪಟ್ಟಿ ಸಿದ್ಧಪಡಿಸಿ ವಕೀಲರಿಗೆ ವಿಷಯ ತಿಳಿಸುತ್ತಿದ್ದ. ಆಸ್ತಿಯ ನೈಜ ಮಾಲೀಕರ ಹೆಸರು ಮುಚ್ಚಿಟ್ಟು, ಅವರ ಹೆಸರಿನ ಜಾಗದಲ್ಲೇ ನಕಲಿ ಕಕ್ಷಿದಾರ ಹಾಗೂ ಪ್ರತಿವಾದಿಗಳನ್ನು ವಕೀಲರು ಸೃಷ್ಟಿಸುತ್ತಿದ್ದರು. ಅದಕ್ಕೆ ಸಂಬಂಧಪಟ್ಟಂತೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತಿದ್ದರು. ಪ್ರಕರಣ ದಾಖಲಾದ ಸಂಗತಿ ನೈಜ ಮಾಲೀಕರಿಗೆ ಗೊತ್ತೇ ಆಗುತ್ತಿರಲ್ಲ.’

‘ನಕಲಿ ದಾಖಲೆಗಳೇ ಅಸಲಿ ಎಂದು ವಾದಿಸಿ ನ್ಯಾಯಾಲಯದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದರು. ಅದೇ ಡಿಕ್ರಿ ಬಳಸಿಯೇ ಭೂಗಳ್ಳರು, ಸಂಧಾನದ ಮೂಲಕ ಜಾಗವನ್ನು ಕಬಳಿಸುತ್ತಿದ್ದರು. ನಂತರ, ಅದೇ ಜಾಗವನ್ನು ಬೇರೆಯವರಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರೆಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

‘ಕಂಪನಿ ಜಾಗ ಕಬಳಿಸಲು ಹೊರಟಿದ್ದ ಭೂಗಳ್ಳರು’

ಯಶವಂತಪುರ ಬಳಿಯ ಗೋಕುಲ 1ನೇ ಹಂತದ ಆಂಜನೇಯ ದೇವಸ್ಥಾನ ಬಳಿ ಇರುವ ಷಾ ಹರಿಲಾಲ್ ಭಿಕಾಭಾಯಿ ಅಂಡ್ ಕಂಪನಿಗೆ ಸೇರಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗ ಕಬಳಿಸಲು ಭೂಗಳ್ಳರು ಯತ್ನಿಸಿದ್ದರು. ಇದೇ ಪ್ರಕರಣವನ್ನು ಉಲ್ಲೇಖಿಸಿ ರಿಜಿಸ್ಟ್ರಾರ್ ಧನಲಕ್ಷ್ಮಿ  ದೂರು ನೀಡಿದ್ದರು.

ಅಪರಾಧ ಸಂಚು (ಐಪಿಸಿ 34 ಮತ್ತು ಐಪಿಸಿ 120ಬಿ), ವಂಚನೆ (ಐಪಿಸಿ 420), ಸಹಿ ನಕಲು (ಐಪಿಸಿ 465), ನಕಲಿ ದಾಖಲೆ ದೃಷ್ಟಿ (ಐಪಿಸಿ 468), ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಆರೋಪದಡಿ ಮೈಸೂರಿನ ಬಿ. ಮಣಿ (28), ಅರುಣ್ ಹಾಗೂ ಸೆಂದಿಲ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

‘ಬೇರೆಯವರ ಜತೆ ಶಾಮೀಲಾದ ಮೂವರು ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ, ಅವುಗಳನ್ನೇ ಅಸಲಿ ಎಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಮೋಸದಿಂದ ರಾಜಿ ಡಿಕ್ರಿ ಪಡೆದಿದ್ದಾರೆ. ಆಸ್ತಿಯ ನೈಜ ಮಾಲೀಕರಾದ ಷಾ ಹರಿಲಾಲ್ ಭಿಕಾಬಾಯಿ ಅಂಡ್ ಕಂಪನಿ ಅವರನ್ನು ಕಕ್ಷಿದಾರರನ್ನಾಗಿ ಮಾಡದೇ ವಿಷಯ ಮುಚ್ಚಿಟ್ಟು ವಂಚಿಸಿದ್ದಾರೆ. ಇದೇ ರೀತಿಯಲ್ಲೇ, ನಕಲಿ ಮೊಕದ್ದಮೆ ದಾಖಲಿಸಿ ರಾಜಿ ಡಿಕ್ರಿ ಪಡೆದಿರುವ ಪ್ರಕರಣಗಳು ಹೆಚ್ಚಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದೂ ಅವರು ಕೋರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು