ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಪಥ: ಆದಾಯಕ್ಕಿಂತ ಆತಂಕವೇ ಹೆಚ್ಚು

ಬೆಂಗಳೂರು, ಮೈಸೂರಿಗೆ ಬೆಣ್ಣೆ; ಉಳಿದ ನಗರಗಳಿಗೆ ಸುಣ್ಣ l ವಿವಿಧ ಉದ್ಯಮಗಳಿಗೆ ಹೊಡೆತ ಬೀಳುವ ಆತಂಕ
Last Updated 18 ಸೆಪ್ಟೆಂಬರ್ 2022, 19:39 IST
ಅಕ್ಷರ ಗಾತ್ರ

ಮೈಸೂರು:ಬೆಂಗಳೂರು– ಮೈಸೂರು ನಡುವಿನ ಪ್ರಯಾಣದ ಅವಧಿ ತಗ್ಗುತ್ತದೆ ಎಂಬ ಒಂದು ಅಂಶವನ್ನು ಹೊರತುಪಡಿಸಿದರೆ ದಶಪಥ ಹೆದ್ದಾರಿಯುದ್ದಕ್ಕೂ ಪ್ರವಾಸೋದ್ಯಮ, ಹೊಟೆಲ್‌ ಉದ್ಯಮ ಸೇರಿದಂತೆ ವಿವಿಧ ವಲಯಗಳಿಗೆ ಹೊಡೆತ ಬೀಳುವ ಆತಂಕ ದಟ್ಟವಾಗಿದೆ.

ರಸ್ತೆಗಳು ಸಂಪರ್ಕ ಕಲ್ಪಿಸುವ ಜೊತೆಗೆ ಆ ಪ್ರದೇಶದ ಪ್ರಗತಿಗೂ ಪೂರಕವಾಗಿರಬೇಕೆಂಬ ಆಶಯ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ವಿಷಯದಲ್ಲಿ ಸ್ವಲ್ಪ ಮಾತ್ರ ಅನ್ವಯವಾಗುತ್ತದೆ.ಹೆದ್ದಾರಿ ಯೋಜನೆ ಬೆಂಗಳೂರಿ ನಿಂದ ಮೈಸೂರಿಗೆ ಕಡಿಮೆ ಅವಧಿಯಲ್ಲಿ ಸಂಪರ್ಕ ಕಲ್ಪಿಸುವ ಉದ್ದೇಶವನ್ನಷ್ಟೆ ಹೊಂದಿದೆ. ಪಥ ಪೂರ್ಣಗೊಂಡರೆ 90 ನಿಮಿಷದಲ್ಲಿ ತಲುಪಬಹುದು ಎನ್ನಲಾಗುತ್ತಿದೆ.

ನೇರವಾಗಿ ಬೆಂಗಳೂರು ಅಥವಾ ಮೈಸೂರು ತಲುಪುವವರಿಗಷ್ಟೇ ಈ ಹೆದ್ದಾರಿ ಅನುಕೂಲವಾಗಲಿದೆ. ಹೆದ್ದಾರಿ ಮಧ್ಯದ ನಗರ–ಪಟ್ಟಣಗಳು ನಡುಗಡ್ಡೆ ಗಳಾಗಬಹುದಷ್ಟೇ. ಪ್ರಯಾಣಿಕರು ಹೋಟೆಲ್‌ಗೆ ಅಥವಾ ಖರೀದಿಗೆ ನಿಲ್ಲಲು ಅವಕಾಶವಿಲ್ಲದಿರುವುದರಿಂದ ವಹಿವಾಟಿಗೆ ಹೊಡೆತ ಬೀಳುತ್ತದೆ ಎಂಬುದು ಹೋಟೆಲ್‌ಉದ್ಯಮಿಗಳು, ವಿವಿಧ ವರ್ತಕರ ಆತಂಕವಾಗಿದೆ.

‘ಪಥ’ ನಂಬಿದ್ದವರಿಗೆ ನಷ್ಟ: 52 ಕಿ.ಮೀ. ಉದ್ದ ಬೈಪಾಸ್ ನಿರ್ಮಾಣವಾ ಗುವುದರಿಂದ ಪ್ರಯಾಣಿಕರು ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಶ್ರೀರಂಗಪಟ್ಟಣದ ಒಳಗೆ ಪ್ರವೇಶಿಸದೆ ಹೊರವಲಯದ ಮೂಲಕ ಹಾದು ಹೋಗಲಿದ್ದಾರೆ. ಮದ್ದೂರಿಗೆ ಪ್ರವೇಶವಿದ್ದರೂ ಫ್ಲೈ ಓವರ್ ಮೇಲೆಯೇ ಪ್ರಯಾಣ ಮುಂದಯವರಿಯಲಿದೆ. ‘ಪಥ’ವನ್ನೇ ನಂಬಿದ್ದ ಸಾಂಪ್ರದಾಯಿಕ ಆರ್ಥಿಕ ಚಟುವಟಿಕೆಗಳಿಗೆ ಇದರಿಂದ ಬಲವಾದ ಹೊಡೆತ ಬೀಳಲಿದೆ.

ಸಂಚಾರಕ್ಕೆ ಮುಕ್ತವಾಗಿರುವ ಬಿಡದಿ, ರಾಮನಗರ, ಚನ್ನಪಟ್ಟಣ ಬೈಪಾಸ್‌ಗಳ ಸ್ಥಿತಿ ಗಮನಿಸಿದರೆ, ಆ ನಗರಗಳ ಒಳಗಿನ ಹಳೆಯ ಹೆದ್ದಾರಿ ಬಿಕೋ ಎನ್ನುತ್ತಿದೆ. ತಟ್ಟೆ ಇಡ್ಲಿಗೆ ಹೆಸರುವಾಸಿಯಾಗಿರುವಬಿಡದಿ ಹೆದ್ದಾರಿ ಬದಿ 30ಕ್ಕೂ ಹೆಚ್ಚು ಇಡ್ಲಿ ಹೋಟೆಲ್‌ಗಳಿದ್ದು, ಅವುಗಳ ವಹಿವಾಟು ಕುಸಿದಿದೆ. ಅನೇಕ ಹೋಟೆಲ್‌ಗಳು ಮುಚ್ಚುವ ಹಂತದಲ್ಲಿವೆ. ರಾಮನಗರ- ಚನ್ನಪಟ್ಟಣದ ಹೆದ್ದಾರಿ ಬದಿಯ ಹೋಟೆಲ್‌ಗಳಿಗೂ ಬಿಸಿ ತಟ್ಟುತ್ತಿದೆ. ಚನ್ನಪಟ್ಟಣದ ಮುದಗೆರೆ ಬಳಿ ವೈಶಾಲಿ, ಶಿವಳ್ಳಿ, ಕದಂಬ ಹೋಟೆಲ್‌ಗಳಿಗೆ ವ್ಯವಹಾರ ಕುಸಿಯುವ ಆತಂಕವಿದೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಹೋಟೆಲ್ಮಾಲೀಕರಲ್ಲೂ ಇದೇ ರೀತಿಯ ಆತಂಕ ತುಂಬಿದೆ.

ಬೈಪಾಸ್ ರಸ್ತೆ ಮುಕ್ತವಾದ ಬಳಿಕ ರಾಮನಗರದ ಜಾನಪದ ಲೋಕದ ಆದಾಯಅರ್ಧದಷ್ಟು ಕುಸಿದಿದೆ.ಸಿಬ್ಬಂದಿಯ ಸಂಬಳಕ್ಕೂ ತೊಂದರೆಯಾಗಿದೆ. ಹೆದ್ದಾರಿ ಪ್ರಯಾ ಣಿಕರು–ಪ್ರವಾಸಿಗರ ಭೇಟಿಯೇ ಜಾನಪದ ಲೋಕದ ಮುಖ್ಯ ಆದಾಯವಾಗಿತ್ತು.

ಗೊಂಬೆ ಮಾರಾಟಕ್ಕೆ ಹೊಡೆತ

ಆಟಿಕೆ ಗೊಂಬೆಗಳಿಗೆ ಹೆಸರುವಾಸಿ‌ಯಾಗಿರುವ ಚನ್ನಪಟ್ಟಣವೂ ಹೆದ್ದಾರಿಯ ಪ್ರಯಾಣಿಕರನ್ನೇ ನೆಚ್ಚಿಕೊಂಡಿದೆ. ಚನ್ನಪಟ್ಟಣದಿಂದ ಮದ್ದೂರುವರೆಗೆ ಹಳೆಯ ಹೆದ್ದಾರಿ ಬದಿಯಲ್ಲಿ ನೂರಾರು ಆಟಿಕೆ ಅಂಗಡಿಗಳಿವೆ. ಬೈಪಾಸ್ ರಸ್ತೆ ನಿರ್ಮಾಣದ ನಂತರ ಗೊಂಬೆಗಳ ಮಾರಾಟಕ್ಕೆ ಹೊಡೆತ ಬೀಳುತ್ತಿದೆ.

ಚನ್ನಪಟ್ಟಣದ ಬೈರಾಪಟ್ಟಣದಿಂದ ಮದ್ದೂರು ತಾಲ್ಲೂಕಿನವರೆಗೂ ಹಳೆ ಹೆದ್ದಾರಿಯೇ ಚಾಲ್ತಿಯಲ್ಲಿದ್ದರೂ ಎಕ್ಸ್‌ಪ್ರೆಸ್‌ ವೇ ಕಾರಣ ಪ್ರಯಾಣಿಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಕೆಳಗಿಳಿಯಲು ಆಗದು. ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಸುವವರಷ್ಟೇ ಬೇಕಾದ ಕಡೆ ಹೋಟೆಲ್ ತಿಂಡಿ–ತಿನಿಸು ಸವಿಯಲು ಸಾಧ್ಯ. ಹೀಗಾಗಿ ಗೊಂಬೆ ಮತ್ತು ಹೋಟೆಲ್ ಉದ್ಯ‌ಮ ಎರಡಕ್ಕೂ ಗ್ರಾಹಕರ ಸಂಖ್ಯೆ ಕುಸಿಯುವ, ಒಟ್ಟು ಪ್ರವಾಸೋದ್ಯಮದ ಮೇಲೂ ಮಾರಕ ಪರಿಣಾಮ ಬೀರುವ ಕಳವಳ ಮೂಡಿದೆ.

ಶ್ರೀರಂಗಪಟ್ಟಣ ಹೊರವಲಯದಲ್ಲಿ ಹೆದ್ದಾರಿ ಸಾಗುವುದರಿಂದ ಐತಿಹಾಸಿಕ ಪಟ್ಟಣದ ಸಂಪರ್ಕವೂ ತಪ್ಪಲಿದೆ. ಮಾರ್ಗದ ನಡುವಿನ ಊರುಗಳ ಸಂಪರ್ಕ ರಸ್ತೆಗಳಿಗೂ ಅಡ್ಡಿಯಾಗಲಿದೆ. ಕೃಷಿ ಉತ್ಪನ್ನಗಳ ಸಾಗಣೆಗೆ ಸರ್ವಿಸ್ ರಸ್ತೆಯನ್ನೇ ಬಳಸಬೇಕಾಗುತ್ತದೆ.

ಮದ್ದೂರಿನಲ್ಲಿ ವಾಹನಗಳು ಮೇಲ್ಸೇತುವೆಯಲ್ಲಿ ಸಾಗುವುದರಿಂದ ಮದ್ದೂರು ವಡೆಯ ರುಚಿಯೂ ಪ್ರಯಾಣಿಕರಿಗೆ ಸಿಗಲಾರದು. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಕೃಷಿಯಾಧಾರಿತ ಉದ್ಯಮಕ್ಕೂ ಪೆಟ್ಟು ಬೀಳಲಿದೆ. ಹೆದ್ದಾರಿ ಬದಿ ತಾಜಾ ತರಕಾರಿ, ಕಬ್ಬಿನ ರಸ, ಮಂಡ್ಯದ ಬೆಲ್ಲ, ಮದ್ದೂರು ಎಳನೀರು, ಗಂಜಾಂ ಸಪೋಟ, ಮಲ್ಲಿಗೆ ಹೂ ಮಾರಿ ಜೀವನ ಸಾಗಿಸುತ್ತಿದ್ದವರ ಬದುಕು ದುರ್ಭರವಾಗಲಿದೆ.

ಎಕನಾಮಿಕ್‌ ಕಾರಿಡಾರ್‌: ರಿಯಲ್‌ ಎಸ್ಟೇಟ್‌ಗೆ ಶುಕ್ರದೆಸೆ

ಈ ಹೆದ್ದಾರಿಯ ಸರ್ವಿಸ್ ರಸ್ತೆ ಸಮೀಪದಲ್ಲಿ ಹೊಸದಾಗಿ ಹೋಟೆಲ್‌ಗಳ ಆರಂಭಕ್ಕೆ ಹಾಗೂ ಬಡಾವಣೆಗಳ ನಿರ್ಮಾಣಕ್ಕೆ ಉದ್ಯಮಿಗಳು ಯೋಜಿಸುವ ಸಾಧ್ಯತೆ ಇದೆ ಎನ್ನುತ್ತದೆ ರಿಯಲ್ ಎಸ್ಟೇಟ್ ವಲಯ.

ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಬಳಿ 30 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಕೆಫೆಟೇರಿಯಾಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜಿಸಿದೆ. ಜೊತೆಗೆ ಇತರ ಮೂರು ಕಡೆಗಳಲ್ಲೂ ಕೆಫೆಟೇರಿಯಾ ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದರಿಂದ, ಆ ಭಾಗದಲ್ಲಿ ರಿಯಲ್‌ ಎಸ್ಟೇಟ್ ಬೆಳೆಯುವ ಮತ್ತು ಸರ್ವಿಸ್ ರಸ್ತೆಗೆ ಹೊಂದಿಕೊಂಡಂತೆ ಹೊಸದಾಗಿ ನಗರೀಕರಣದ ಚಟುವಟಿಕೆಗಳು ಹೆಚ್ಚುವ ಸಾಧ್ಯತೆ ಇವೆ.

ಬೆಂಗಳೂರು–ಮೈಸೂರಿನ ಅಂತರ ಕಡಿಮೆ ಆಗುವುದರಿಂದ ಬೆಂಗಳೂರು ಹೊರತುಪಡಿಸಿ ಕೈಗಾರಿಕೆಗೆ ಯೋಜಿಸುತ್ತಿರುವವರು ಮೈಸೂರಿನತ್ತ ಬರಲು ಒಲವು ತೋರುವ ಸಾಧ್ಯತೆ ಇದೆ. ಇದರಿಂದ ಈ ಹೆದ್ದಾರಿಯು ‘ಎಕನಾಮಿಕ್‌ ಕಾರಿಡಾರ್’ ಆಗಿ ರೂಪಗೊಳ್ಳುವ ಮತ್ತು ಉದ್ಯೋಗದ ಅವಕಾಶ ಸೃಷ್ಟಿಸುವ ಸಾಧ್ಯತೆಯೂ ಕಂಡುಬರುತ್ತಿದೆ. ರಿಯಲ್‌ ಎಸ್ಟೇಟ್ ಜೊತೆಗೆ ಕೈಗಾರಿಕೆ ಬೆಳವಣಿಗೆಗೂ ಅನುಕೂಲವಾಗಲಿದೆ ಎನ್ನುತ್ತಾರೆ ಉದ್ಯಮಿಗಳು.

ಬೆಂಗಳೂರು ಹೊರವಲಯದ ಕುಂಬಳಗೋಡು, ಮೈಸೂರು ಹೊರವಲಯದ ಸಿದ್ದಲಿಂಗಪುರ, ಕಳಸ್ತವಾಡಿ, ನಾಗನಹಳ್ಳಿ ಭಾಗದಲ್ಲಿ ನಿವೇಶನಗಳಿಗೆ ಬೇಡಿಕೆ ಹೆಚ್ಚಿದೆ. ಮಂಡ್ಯದಲ್ಲಿ ಬೈಪಾಸ್‌ಗೆ ಹೊಂದಿಕೊಂಡಂತೆಯೇ ಅಮರಾವತಿ ಹೋಟೆಲ್‌ ಸಮೀಪದಲ್ಲಿ ಈಗಾಗಲೇ ಹೊಸದಾಗಿ ಬಡಾವಣೆ ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ. ‘ಮೈಸೂರಿನಲ್ಲಿ ಹೊಸದಾಗಿ ಕೈಗಾರಿಕೆಗಳ ಆರಂಭಕ್ಕೆ ಹೆದ್ದಾರಿಯು ಕೆಂಪುಹಾಸು ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎನ್ನುತ್ತಾರೆ ಉದ್ಯಮಿ ಎಸ್.ಕೆ.ಜೈನ್.

***

ಮೈಸೂರು–ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಶ್ರೀಮಂತರಿಗಷ್ಟೇ ಅನುಕೂಲವಾಗಲಿದೆ. ಬಡವರಿಗೆ, ನಮ್ಮಂತಹ ಸಣ್ಣ ಅಂಗಡಿಗಳವರಿಗೆ ಅನನುಕೂಲವೇ ಜಾಸ್ತಿ. ಹಳೆಯ ಹೆದ್ದಾರಿಯಲ್ಲಿ ಜನ ಸಂಚಾರ ಕಡಿಮೆಯಾಗಲಿದೆ

-ವಿಜೇಂದ್ರ, ಚಹಾ ಅಂಗಡಿ ಮಾಲೀಕ, ನಗುವನಹಳ್ಳಿ ಗೇಟ್

***

ನನ್ನ ಟೀ ಪಾರ್ಲರ್ 24X7 ತೆರೆದಿರುತ್ತಿತ್ತು. ರಾಜ್ಯ, ಹೊರರಾಜ್ಯಗಳ ಗ್ರಾಹಕರಿದ್ದರು. ಜಸ್ಟ್ ಡಯಲ್‌ನಲ್ಲಿ ಅಂಗಡಿ ಮಾಹಿತಿ ಇತ್ತು‌. ದಶಪಥ ಕಾಮಗಾರಿ ನಂತರಅಂಗಡಿ ಮುಚ್ಚಿದ್ದು ಜೀವನ ಅತಂತ್ರವಾಗಿದೆ.

-ಎಸ್.ಕೆ.ನಂದೀಶ್, ಸಿದ್ದಯ್ಯನಕೊಪ್ಪಲು ಗೇಟ್, ಮಂಡ್ಯ ತಾಲ್ಲೂಕು

***

ಹೆದ್ದಾರಿಯಿಂದ ಎರಡೂ ನಗರಗಳ ಕೈಗಾರಿಕೆಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸರಕು ಸಾಗಣೆ ವೆಚ್ಚವೂ ತಗ್ಗಲಿದೆ. ಮಳೆಯಾದಾಗ ತೊಂದರೆಯಾಗದಂತೆ ನೋಡಿಕೊಳ್ಳಬೇಕು

-ಸುರೇಶ್‌ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್‌, ಮೈಸೂರು

***

ಹೆದ್ದಾರಿ ಅಕ್ಕಪಕ್ಕ ರಿಯಲ್ ಎಸ್ಟೇಟ್ ಚಿಗುರಬಹುದು. ಆದರೆ, ಮಂಡ್ಯ–ಮೈಸೂರು ಭಾಗದಲ್ಲಿ ಭೂ ಹಿಡುವಳಿಯೇ ಕಡಿಮೆ ಇರುವುದರಿಂದ ಅದೂ ಕಷ್ಟ. ಜೊತೆಗೆ ಎಲ್ಲವೂ ಹಸಿರು ಬೆಲ್ಟ್ ಪ್ರದೇಶವಾಗಿದ್ದು ರಿಯಲ್ ಎಸ್ಟೇಟ್ ಬೆಳೆಯದು

-ಎಂ.ಬಿ.ನಾಗಣ್ಣಗೌಡ, ಮಂಡ್ಯ

***

ಪ್ರಯಾಣಿಕರು, ಪ್ರವಾಸಿಗರು ಮಂಡ್ಯದಲ್ಲಿ ನಿಂತು ಹೋಗುತ್ತಿದ್ದರು. ಈಗ ಹೆದ್ದಾರಿಗೆ ಮಂಡ್ಯ ಸಂಪರ್ಕವೇ ಇಲ್ಲದ್ದರಿಂದ ಹೋಟೆಲ್ ಉದ್ಯಮಕ್ಕೆ ತೀವ್ರ ಪೆಟ್ಟು ಬೀಳಲಿದೆ

-ರಮೇಶ್, ಹೋಟೆಲ್ ಮಾಲೀಕ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT