ಶುಕ್ರವಾರ, ಮೇ 20, 2022
23 °C
ಬೆಂಗಳೂರು ತಂತ್ರಜ್ಞಾನ ಶೃಂಗ

ಕ್ಯಾನ್ಸರ್‌ ರೋಗ ಪತ್ತೆಗೆ ಡಿಜಿಟಲ್‌ ಇಮೇಜಿಂಗ್‌ ವರದಾನ: ಗ್ರೇಗ್‌ ಥಾಮ್ಸನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಧುನಿಕ ತಂತ್ರಜ್ಞಾನದ ಡಿಜಿಟಲ್‌ ಇಮೇಜಿಂಗ್‌, ಜೀನ್‌ ಥೆರಪಿ ಇತ್ಯಾದಿಯಿಂದಾಗಿ ಕ್ಯಾನ್ಸರ್‌ ರೋಗ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅಮೆರಿಕದ ಮೆಮೋರಿಯಲ್‌ ಸೋಲನ್‌ ಕೆಟೆರಿಂಗ್‌ ಕ್ಯಾನ್ಸರ್‌ ಸೆಂಟರ್‌ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗ್ರೇಗ್‌ ಥಾಮ್ಸನ್‌ ಪ್ರತಿಪಾದಿಸಿದರು. 

24ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ‘ದಿ ಬೆಕಾನ್‌ ಆಫ್‌ ಇನ್ನೋವೇಷನ್‌ ಇನ್‌ ಕ್ಯಾನ್ಸರ್‌ ಟ್ರೀಟ್‌ಮೆಂಟ್‌ʼ ವಿಚಾರಗೋಷ್ಠಿಯಲ್ಲಿ ಥಾಮ್ಸನ್‌ ತಮ್ಮ ಅನಿಸಿಕೆಗಳನ್ನು ತೆರೆದಿಟ್ಟ ಅವರು, ಹೊಸ ಅನ್ವೇಷಣೆಗಳಿಂದಾಗಿ ದೇಶ-ವಿದೇಶಗಳಲ್ಲಿರುವ ತಜ್ಞರು ಏಕಕಾಲದಲ್ಲಿ ವ್ಯಕ್ತಿಯ ಜೀವಕೋಶಗಳ ರಚನೆಯ ವಿಶ್ಲೇಷಣೆ ನಡೆಸಿ, ಅದು ಕ್ಯಾನ್ಸರ್‌ ಕೋಶವೋ ಅಲ್ಲವೋ ಎಂಬುದನ್ನು ಪತ್ತೆ ಹೆಚ್ಚಲು ಸಾಧ್ಯವಾಗಿದೆ ಎಂದರು.

‘ಡಿಜಿಟಲ್‌ ಇಮೇಜಿಂಗ್‌ ತಂತ್ರಜ್ಞಾನದಲ್ಲಿ ಡಿಜಿಟಲ್‌ ಪೆಥಾಲಜಿ ಸಲ್ಯೂಷನ್ಸ್‌  ಒಂದು ಸಣ್ಣ ಉದಾಹರಣೆಯಷ್ಟೆ. ಡಿಜಿಟಲ್‌ ಇಮೇಜಿಂಗ್‌ ತಂತ್ರಜ್ಞಾನದಿಂದಾಗಿ  ಪ್ರಾರಂಭದ ಹಂತದಲ್ಲಿಯೇ ಕ್ಯಾನ್ಸರ್‌ ಕೋಶಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ಮನುಷ್ಯನ ಆರ್‌ಎನ್‌ಎ, ಡಿಎನ್‌ಎ ರಚನೆಯ ಸೂಕ್ಷ್ಮ ಅಧ್ಯಯನ ನಡೆಸಲು ಹಾಗೂ ಜೀವಕೋಶಗಳ ಕಾರ್ಯವೈಖರಿಯ ಸೂಕ್ಷ್ಮತೆ ಅರಿಯಲು ಇದರಿಂದ ಅನುಕೂಲವಾಗಿದೆ. ಡಿಜಿಟಲ್‌ ಇಮೇಜ್‌ ಆಧರಿಸಿ ದತ್ತಾಂಶಗಳ ಟಿಪ್ಪಣಿ ಮಾಡುವುದು, ಸಂಗ್ರಹಿಸುವುದು, ಹಂಚಿಕೊಳ್ಳುವುದು ಮತ್ತು ನೆಟ್‌ವರ್ಕ್‌ ಕಾರ್ಯಗಳಿಗೆ ಬಳಸಿಕೊಂಡು ಅತಿ ಕಡಿಮೆ ಅವಧಿಯಲ್ಲಿ ತಜ್ಞರಿಂದ ಖಚಿತ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತಿದೆ. ಇದರಿಂದ ಕ್ಯಾನ್ಸರ್‌ ರೋಗಿಗಳ ಹಣ, ಸಮಯ ಉಳಿತಾಯವಾಗುವುದರ ಜತೆಗೆ,  ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗಲಿದೆʼ ಎಂದು ಥಾಮ್ಸನ್‌ ವಿವರಿಸಿದರು.

ಪಿಪಿಪಿ ಮಾದರಿಯಲ್ಲಿ ನೆರವು: ಬೆಂಗಳೂರು ಜಾಗತಿಕ ಟೆಕ್‌ ನಗರಿಗಳಲ್ಲಿ ಒಂದಾಗಿದ್ದು, ಇಲ್ಲಿರುವ ನುರಿತ ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ತಂತ್ರಜ್ಞರ ನೆರವಿನಿಂದ‌ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್‌ ವಿಧಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಇಂತಹ ಕ್ರಮಗಳಿಂದ ವಿಶ್ವದಾದ್ಯಂತ ‘ಕನೆಕ್ಟೆಡ್ ಹೆಲ್ತ್ಕೇರ್‌ ಸಿಸ್ಟಮ್‌’ ಅಭಿವೃದ್ಧಿಪಡಿಸಿ, ಲಕ್ಷಾಂತರ ರೋಗಿಗಳಿಗೆ ಜೀವದಾನ ನೀಡಬಹುದಾಗಿದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧ, ಇಂಜೆಕ್ಷನ್‌ ಇತ್ಯಾದಿಗಳ ಕುರಿತ ಸಂಶೋಧಾನತ್ಮಕ ಬೌದ್ಧಿಕ ಹಕ್ಕುಗಳು, ಉತ್ಪಾದನಾ ಪರವಾನಗಿ ಕುರಿತು ಪರಸ್ಪರ ಸಹಕಾರ ಅಗತ್ಯವಿದ್ದು, ಪಿಪಿಪಿ ಮಾದರಿಯಲ್ಲಿ ಭಾರತದ ಆಸ್ಪತ್ರೆ ಹಾಗೂ ಬಯೋಟೆಕ್‌ ಕಂಪನಿಗಳಿಗೆ ನೆರವು ನೀಡಲು ತಮ್ಮ ಸಂಸ್ಥೆ ಸಿದ್ಧವಿದೆ ಎಂದು ಥಾಮ್ಸನ್‌ ಹೇಳಿದರು. ಕ್ಯಾನ್ಸರ್‌ ರೋಗ ಚಿಕಿತ್ಸೆಯಲ್ಲಿ ಮೂಲಭೂತ ಸಂಶೋಧನೆ (ಫಂಡಮೆಂಟಲ್‌ ರಿಸರ್ಚ್‌) ಬಹಳ ಅಗತ್ಯವಾಗಿದ್ದು, ನಮ್ಮ ಸಂಸ್ಥೆಯು ಬರುವ ಲಾಭದಲ್ಲಿ ಹೆಚ್ಚಿನ ಮೊತ್ತವನ್ನು ಕ್ಲಿನಿಕಲ್‌ ಟ್ರಯಲ್ ಗಳಿಗಿಂತಲೂ ಅಧಿಕವಾಗಿ ಮೂಲ ಸಂಶೋಧನೆಗೆ ವಿನಿಯೋಗಿಸುತ್ತಿದೆ ಎಂದೂ ಅವರು ಹೇಳಿದರು.

ಸಾಮಾನ್ಯವಾಗಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧ ಅಥವಾ ಇಂಜೆಕ್ಷನ್‌ಗಳು ಸಂಬಂಧಿತ ಪ್ರಾಧಿಕಾರಿಗಳಿಂದ ಒಪ್ಪಿಗೆ ಪಡೆದು ಹೊರಬರಬೇಕೆಂದರೆ ಸರಿಸುಮಾರು 14 ವರ್ಷಗಳ ಸಮಯ ಹಿಡಿಯುತ್ತದೆ. ಸ್ಯಾಂಪಲ್‌ಗಳನ್ನು  ಬಳಸಿಕೊಂಡು ಡೇಟಾ ಅನಾಲಿಸಿಸ್‌ ಮೂಲಕ ಈ ವಿಳಂಬ ತಗ್ಗಿಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಸಂವಾದ ಗೋಷ್ಠಿಯನ್ನು ಬಯೋಕಾನ್‌ ಮತ್ತು ಬಯೋಕಾನ್‌ ಬಯಾಲಾಜಿಕ್ಸ್‌ ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾದ ಡಾ. ಕಿರಣ್‌ ಮಜುಂದಾರ್‌ ಷಾ ನಡೆಸಿಕೊಟ್ಟರು.

ಇದನ್ನೂ ಓದಿ... ಡಿಜಿಟಲ್ ಲೋಕವನ್ನೂ ವ್ಯಾಪಿಸಿದ ಆಟೋಮೇಷನ್: ಗಣೇಶ್ ತ್ಯಾಗರಾಜನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು