ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.17ರಿಂದ ಬೆಂಗಳೂರು ತಂತ್ರಜ್ಞಾನ ಶೃಂಗ

Last Updated 13 ನವೆಂಬರ್ 2021, 12:17 IST
ಅಕ್ಷರ ಗಾತ್ರ

ಬೆಂಗಳೂರು: ನವೆಂಬರ್ 17ರಿಂದ 19ರವರೆಗೆ ಬೆಂಗಳೂರು ತಂತ್ರಜ್ಞಾನ ಶೃಂಗ ನಡೆಯಲಿದೆ. 30 ರಾಷ್ಟ್ರಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು 24ನೇ ಬೆಂಗಳೂರು ತಂತ್ರಜ್ಞಾನ ಶೃಂಗ. ‘ಭವಿಷ್ಯಕ್ಕೆ ಚಾಲನೆ’ ಎಂಬ ಪರಿಕಲ್ಪನೆ ಅಡಿಯಲ್ಲಿ ನಡೆಯುವ ಸಮ್ಮೇಳನವನ್ನು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ನ.17ರಂದು ಉದ್ಘಾಟಿಸುವರು. 300ಕ್ಕೂ ಹೆಚ್ಚು ಮಂದಿ ವಿಷಯ ತಜ್ಞರು ಸಮ್ಮೇಳನದಲ್ಲಿ ಮಾತನಾಡುವರು’ ಎಂದರು.

ಈ ಬಾರಿಯೂ ವರ್ಚ್ಯುಯಲ್ ರೂಪದಲ್ಲಿ ಸಮ್ಮೇಳನ ನಡೆಯಲಿದೆ. ಇಸ್ರೇಲ್‌ ಪ್ರಧಾನಿ ನಫ್ತಾಲಿ ಬೆನೆಟ್‌, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೇರಿದಂತೆ ವಿದೇಶಗಳ ಹಲವು ನಾಯಕರು ಭಾಗವಹಿಸುವರು. 5,000ಕ್ಕೂ ಹೆಚ್ಚು ನವೋದ್ಯಮಗಳು ಸಭೆಯಲ್ಲಿ ಭಾಗವಹಿಸಲಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 20,000ಕ್ಕೂ ಹೆಚ್ಚು ವ್ಯಾಪಾರ ವಹಿವಾಟುದಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಟ್ಟು ಐದು ಲಕ್ಷ ಮಂದಿ ಸಮ್ಮೇಳನವನ್ನು ಸಂದರ್ಶಿಸಬಹುದು ಎಂಬುದಾಗಿ ಅಂದಾಜು ಮಾಡಲಾಗಿದೆ ಎಂದು ವಿವರಿಸಿದರು.

ಸಮ್ಮೇಳನದ ಭಾಗವಾಗಿ ಭಾರತ– ಅಮೆರಿಕ ನಡುವೆ ತಂತ್ರಜ್ಞಾನ ಸಮಾಲೋಚನೆ ನಡೆಯಲಿದೆ. ಇಸ್ರೇಲ್‌, ಜಪಾನ್‌, ಸ್ವೀಡನ್‌, ಜರ್ಮನಿ, ಕೆನಡಾ, ನೆದರ್ಲೆಂಡ್‌, ತೈವಾನ್‌ ಮತ್ತಿತರ ರಾಷ್ಟ್ರಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗುವುದು ಎಂದರು.

ಕಿಂಡ್ರಿಲ್, ಇನ್ಫೋಸಿಸ್, ಬಯೋಕಾನ್, ರಝೋರ್ ಪೇ, ರಾಬರ್ಟ್‌ ಬಾಷ್, ಟೆಲ್ ಸ್ಟ್ರಾ, ಎನ್ಆರ್ ಡಬ್ಲ್ಯು ಗ್ಲೋಬಲ್ ಬ್ಯುಸಿನೆಸ್, ಲಾರೀಸ್ ಬಯೋ, ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ, ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಆಸ್ಟ್ರೇಲಿಯಾ ಸರ್ಕಾರ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿವೆ ಎಂದು ಹೇಳಿದರು.

ರಾಜ್ಯ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಕರ್ನಾಟಕ ಡಿಜಿಟಲ್‌ ಆರ್ಥಿಕತೆ ವಿಷನ್‌ ಗ್ರೂಪ್‌ ಅಧ್ಯಕ್ಷ ಬಿ.ವಿ. ನಾಯ್ಡು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌, ಉದ್ಯಮಿಗಳಾದ ಜಿತೇಂದ್ರ ಛಡ್ಡಾ, ಗಣೇಶ್ ಕೃಷ್ಣನ್‌, ಬೀರೇನ್‌ ಘೋಷ್‌, ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT