Bengaluru Tech Summit | ಯಶಸ್ಸಿನ ಹಾದಿ ತೆರೆದಿಟ್ಟ ಸಾಧಕಿಯರು

ಬೆಂಗಳೂರು: ಸಹನಾಶೀಲತೆ, ಬದ್ಧತೆ, ಸಮನ್ವಯತೆ ಮಹಿಳಾ ಉದ್ಯಮಿಗಳ ಯಶಸ್ಸಿನ ಗುಟ್ಟು ಎಂದು ಇನ್‌ಮೊಬಿ ಸಂಸ್ಥೆಯ ನೀತಿನಿರೂಪಣಾಧಿಕಾರಿ ಸುಬಿ ಚತುರ್ವೇದಿ ಹೇಳಿದರು.
ಬೆಂಗಳೂರು ಟೆಕ್ ಸಮ್ಮಿಟ್‌ನ ‘ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಜಗತ್ತನ್ನು ಬದಲಿಸುತ್ತಿರುವ ನಾಯಕಿಯರು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉದ್ಯಮ ಕ್ಷೇತ್ರದಲ್ಲಿ ಮಹಿಳೆ ಯಶಸ್ಸು ಕಾಣಲು ಹಲವು ಅಂಶಗಳು ಕಾರಣವಾಗಿರುತ್ತವೆ. ಹಿಂದೆ ಮಹಿಳಾ ಸಾಕ್ಷರತೆ ಕಡಿಮೆ ಇತ್ತು. ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗಿದ್ದರು. ಇಂದು ಮಹಿಳಾ ಸಾಕ್ಷರತೆಯೂ ಹೆಚ್ಚಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಪ್ರವೇಶ ಮಾಡಿದ್ದಾರೆ. ಉದ್ಯಮ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ತೋರುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮಹಿಳೆ ಅಥವಾ ಪುರುಷರು ಉದ್ಯಮ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಕೌಶಲ ಅತಿಮುಖ್ಯ. ನಿರಂತರ ಬದಲಾವಣೆಗೆ ಒಳಪಡುವ ಇಂತಹ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಕಾಣುತ್ತಿದ್ದೇವೆ. ಆ್ಯಪ್‌ಗಳಲ್ಲೇ ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಇಂತಹ ಯಶಸ್ಸಿನಲ್ಲಿ ಮಹಿಳೆಯರ ಪಾಲು ದೊಡ್ಡದಿದೆ ಎಂದರು.
ತಮ್ಮ ಯಶಸ್ಸಿನ ಪಯಣದ ಅನುಭವಗಳನ್ನು ಹಂಚಿಕೊಂಡ ಉದ್ಯಮಿಗಳಾದ ಮೈಥಿಲಿ ರಮೇಶ್, ಗೀತಾ ರಾಮಮೂರ್ತಿ, ಶ್ರೀವಿದ್ಯಾ ಶ್ರೀನಿವಾಸನ್, ಮಹಿಳೆಯರು ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಸದಾ ಮುಂದಿರುತ್ತಾರೆ. ಯಶಸ್ಸಿಗೆ ಪುರುಷರು ಹಾಗೂ ಕುಟುಂಬದ ಸದಸ್ಯರ ಸಹಕಾರವೂ ಮುಖ್ಯ ಎಂದರು. ಹಿರಿಯ ವಾರ್ತಾ ವಾಚಕಿ ಬೆವರ್ಲಿ ವೈಟ್ ಉಪಸ್ಥಿತರಿದ್ದರು.
*
ಇಂದು ಹೆಚ್ಚಿನ ಯುವತಿಯರು ಸಾಧನೆಗಾಗಿ ಮದುವೆಯನ್ನೇ ಮುಂದೂಡುತ್ತಿದ್ದಾರೆ. ನಾನು 24ನೇ ವಯಸ್ಸಿಗೆ ಮದುವೆಯಾದೆ. ಕುಟುಂಬದ ಸಹಕಾರದಿಂದಲೇ ಯಶಸ್ಸು ಕಂಡೆ.
–ಮೈಥಿಲಿ ರಮೇಶ್, ಸಹ ಸಂಸ್ಥಾಪಕಿ, ನೆಕ್ಸ್ಟ್ ವೆಲ್ತ್ ಎಂಟರ್‌ಪ್ರೈಸಸ್
*
ಯುವಪೀಳಿಗೆ ಉದ್ಯೋಗಕ್ಕಾಗಿ ಕಾಯದೇ ಸ್ವಯಂ ಉದ್ಯೋಗದತ್ತ ಗಮನಹರಿಸಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು.
–ಶ್ರೀವಿದ್ಯಾ ಶ್ರೀನಿವಾಸನ್, ಸಹ ಸಂಸ್ಥಾಪಕಿ, ಅಮಾಗಿ ಟೆಕ್ನಾಲಜೀಸ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.