ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಏರಿಸಿದ ಬಿಟ್‌ಕಾಯಿನ್‌: ಬಿಜೆಪಿ– ಕಾಂಗ್ರೆಸ್‌ ನಡುವೆ ಜಟಾಪಟಿ

ಒಗ್ಗಟ್ಟು ತೋರಿದ ಸಚಿವತ್ರಯರು l ದಾಖಲೆ ಕೊಡುವಂತೆ ಕಾಂಗ್ರೆಸ್‌ಗೆ ಸವಾಲು
Last Updated 15 ನವೆಂಬರ್ 2021, 22:10 IST
ಅಕ್ಷರ ಗಾತ್ರ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಭಾಗಿಯಾಗಿರುವ ‘ಬಿಟ್‌ಕಾಯಿನ್‌ ಹ್ಯಾಕಿಂಗ್‌’ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ–ಕಾಂಗ್ರೆಸ್‌ ಮಧ್ಯದ ಜಟಾಪಟಿ ಸೋಮವಾರ ತಾರಕಕ್ಕೇರಿದೆ.

ಈ ಪ್ರಕರಣದಲ್ಲಿ ರಾಜಕೀಯ ನಂಟಿನ ಕುರಿತು ದಾಖಲೆ ಬಹಿರಂಗಪಡಿಸುವಂತೆ ಬಿಜೆಪಿ ಸೋಮವಾರ ಸವಾಲು ಹಾಕಿದ್ದರೆ, ಅಧಿಕಾರದಲ್ಲಿದ್ದವರು ಆ ಛಾತಿ ಪ್ರದರ್ಶಿಸಬೇಕು ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

ಶ್ರೀಕೃಷ್ಣ ಪೊಲೀಸ್‌ ವಶದಲ್ಲಿರುವಾಗಲೇ ಹ್ಯಾಕಿಂಗ್‌ ಮೂಲಕ ಸಾವಿರಾರು ಕೋಟಿ ರೂಪಾಯಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಹಲವು ದಿನಗಳಿಂದಲೂ ಸದ್ದು ಮಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಶನಿವಾರ ಪತ್ರಿಕಾ ಹೇಳಿಕೆ ನೀಡಿದ್ದ ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌, ಆರೋಪ ಅಲ್ಲಗಳೆದಿದ್ದರು. ಅದೇ ದಿನ ಪತ್ರಿಕಾಗೋಷ್ಠಿ ನಡೆಸಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಪೊಲೀಸರ ಹೇಳಿಕೆಯನ್ನು ಪುನರುಚ್ಚರಿಸಿದ್ದರು.

ವಿಧಾನಸೌಧದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರಾದ ಆರ್‌.ಅಶೋಕ, ವಿ.ಸೋಮಣ್ಣ ಮತ್ತು ಕೆ.ಗೋಪಾಲಯ್ಯ, ಬಿಟ್‌ಕಾಯಿನ್‌ ಹ್ಯಾಕಿಂಗ್‌ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಆರೋಪಗಳನ್ನು ಅಲ್ಲಗಳೆದರು. ಬಿಜೆಪಿ ನಾಯಕರು ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸುವಂತೆ ಸವಾಲೆಸೆದರು.

‘ಚುನಾವಣಾ ರಾಜಕೀಯದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿ ಹರಡುವುದರಲ್ಲೇ ಮಗ್ನವಾಗಿವೆ’ ಎಂದರು.

‘ಮುಂದಿನ ವಿಧಾನಸಭಾ ಚುನಾವಣೆಯನ್ನು ಗರಿಯಾಗಿಟ್ಟುಕೊಂಡು ‘ಬಿಟ್‌ಕಾಯಿನ್‌ ಹಗರಣ’ ಎಂಬ ಹೊಸ ಸುಳ್ಳನ್ನು ಹೊಸೆದಿದೆ’ ಎಂದು ಅಶೋಕ ಆರೋಪಿಸಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಯಾವ ದಾಖಲೆಗಳೂ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಖಾಲಿ ಬುಟ್ಟಿ ತೋರಿಸುತ್ತಾ ಹಾವು ಇದೆ, ಹಾವು ಇದೆ ಎಂದು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಬಳಿ ನಿಜವಾಗಿ ದಾಖಲೆ ಇದ್ದರೆ ಬಹಿರಂಗಪಡಿಸಲಿ. ಬಿಜೆಪಿಯ ಯಾವ ನಾಯಕರು ಬಿಟ್‌ ಕಾಯಿನ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಹೇಳಲಿ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಅಂತಃಕಲಹ ಕಾರಣ: 2016ರಲ್ಲೇ ಬಿಟ್‌ಕಾಯಿನ್‌ ಹ್ಯಾಕಿಂಗ್‌ ನಡೆದಿದೆ. ಬಿಜೆಪಿ ಸರ್ಕಾರ ಅದರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದೆ. ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕಿರುವ ಮೊಹಮ್ಮದ್ ನಲಪಾಡ್‌ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪವಿದೆ. ಯುವ ಕಾಂಗ್ರೆಸ್‌ನ ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಮತ್ತು ನಲಪಾಡ್‌ ನಡುವಿನ ಅಂತಃಕಲಹವೇ ಈಗ ಪ್ರಕರಣ ಚರ್ಚೆಗೆ ಬರಲು ಕಾರಣ ಎಂದು ಅಶೋಕ ಹೇಳಿದರು.

2016ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲೇ ಯು.ಬಿ. ಸಿಟಿಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಹ್ಯಾಕರ್‌ ಶ್ರೀಕೃಷ್ಣ ಆರೋಪಿಯಾಗಿದ್ದ. ಆಗ ಆತನನ್ನು ಬಂಧಿಸಿರಲಿಲ್ಲ. ಬಂಧನ ಆಗಿದ್ದರೆ ಆಗಲೇ ಹ್ಯಾಕಿಂಗ್‌ ಪ್ರಕರಣಗಳೂ ಬಯಲಿಗೆ ಬರುತ್ತಿದ್ದವು. ಮೂರು ತಿಂಗಳವರೆಗೂ ಆ ಪ್ರಕರಣದಲ್ಲಿ ಶ್ರೀಕಿಯನ್ನು ಏಕೆ ಬಂಧಿಸಿರಲಿಲ್ಲ? ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್‌ ಮೊದಲು ಉತ್ತರಿಸಲಿ ಎಂದರು.

ಹ್ಯಾಕಿಂಗ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಪೊಲೀಸರಿಂದ ಯಾವ ಲೋಪವೂ ಆಗಿಲ್ಲ. ಪ್ರಕರಣ ಅಂತರರಾಷ್ಟ್ರೀಯ ಮಟ್ಟಕ್ಕೆ ವ್ಯಾಪಿಸಿರುವುದು ತಿಳಿಯುತ್ತಿದ್ದಂತೆಯೇ ಸಿಬಿಐನ ಇಂಟರ್‌ಪೋಲ್‌ ಘಟಕಕ್ಕೆ ಮಾಹಿತಿ ನೀಡಲಾಗಿತ್ತು. ಜಾರಿ ನಿರ್ದೇಶನಾಲಯಕ್ಕೂ ದಾಖಲೆ ಒದಗಿಸಲಾಗಿತ್ತು. ಕಾಂಗ್ರೆಸ್‌ ರಾಜಕೀಯ ಕಾರಣಕ್ಕಾಗಿ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದೆ ಎಂದು ದೂರಿದರು.

ಸುಪ್ರೀಂಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂಬ ಕಾಂಗ್ರೆಸ್‌ ಆಗ್ರಹ ಕುರಿತು ಕೇಳಿದಾಗ, ‘ತನಿಖೆ ಹೇಗೆ ನಡೆಯಬೇಕು? ಯಾರು ತನಿಖೆ ನಡೆಸಬೇಕು? ಎಂಬುದನ್ನು ಹೇಳಲು ಅವರು ಯಾರು’ ಎಂದು ಅಶೋಕ ಉತ್ತರಿಸಿದರು.

‘ಇಲ್ಲದ ವಿವಾದ ಜೀವಂತವಿಡಲು ಯತ್ನ’

ಬಿಟ್‌ಕಾಯಿನ್‌ ಹೆಸರಿನಲ್ಲಿ ನಡೆಯದೇ ಇರುವ ಪ್ರಕರಣವನ್ನು ಮುಂದಿಟ್ಟುಕೊಂಡು ವಿವಾದ ಜೀವಂತವಾಗಿಡಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಟ್‌ಕಾಯಿನ್‌ ಹ್ಯಾಕಿಂಗ್‌ ಹಗರಣ ನಡೆದೇ ಇಲ್ಲ. ಪದೇ ಪದೇ ಅದನ್ನೇ ಪ್ರಸ್ತಾಪಿಸಿ, ರಾಜಕೀಯ ಮಾಡಲು ಮುಂದಾಗಿದೆ’ ಎಂದರು.

‘ಬಿಟ್‌ಕಾಯಿನ್‌ ಕುರಿತು ಏನೇ ಪ್ರಶ್ನೆಗಳಿದ್ದರೂ ಕಾಂಗ್ರೆಸ್‌ನವರಿಗೇ ಕೇಳಬೇಕು. ಅವರ ಬಳಿ ದಾಖಲೆಗಳಿದ್ದರೆ ಜಾರಿ ನಿರ್ದೇಶನಾಲಯ ಅಥವಾ ಇತರ ತನಿಖಾ ಸಂಸ್ಥೆಗಳಿಗೆ ನೀಡಲಿ. ಈ ಬಗ್ಗೆ ಗಂಭೀರವಾದ ತನಿಖೆಗೆ ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ’ ಎಂದರು.

ಶ್ರೀಕಿಗೆ ರಕ್ಷಣೆ ಕೊಡಿ: ಸಿದ್ದರಾಮಯ್ಯ

ಬಿಟ್‌ಕಾಯಿನ್‌ ಹಗರಣದ ಸೂತ್ರಧಾರ ಎನ್ನಲಾದ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಪ್ರಾಣಾಪಾಯದ ಸಾಧ್ಯತೆ ಇದ್ದು, ತಕ್ಷಣವೇ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಸೋಮವಾರ ಸರಣಿ ಟ್ವೀಟ್‌ ಮಾಡಿದ್ದು, ‘ಬಿಟ್‌ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ ‘ಬಿಳಿಕಾಲರ್ ಅಪರಾಧ’. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್‌ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದ ಶ್ರೀಕಿಯ ಪ್ರಾಣಕ್ಕೆ ಅಪಾಯದ ಸಾಧ್ಯತೆ ಇದೆ’ ಎಂದು ಸಂಶಯ ವ್ಯಕ್ತಪಡಿಸಿರುವ ಅವರು, ರಕ್ಷಣೆ ಕೊಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.

ಜಗತ್ತಿನ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಶಾಮೀಲಾಗಿರುವ ಅನುಮಾನವಿದೆ. ಈ ಹಗರಣ ಸ್ಫೋಟಗೊಂಡ ನಂತರ ಸಣ್ಣ ಪ್ರಮಾಣದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ಶ್ರೀಕೃಷ್ಣನ ಬಂಧನ ನಡೆದಿದೆ. ಅಷ್ಟೇ ನಾಟಕೀಯವಾಗಿ ಜಾಮೀನಿನ ಮೇಲೆ ಬಿಡುಗಡೆಯೂ ಆಗಿದೆ. ಇದು ಪೊಲೀಸರ ನಡವಳಿಕೆಗಳ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ ಎಂದಿದ್ದಾರೆ. ಶ್ರೀಕಿ ಮಾದಕವಸ್ತು ಸೇವನೆ ಚಟ ಹೊಂದಿದ್ದ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ತಿಳಿಸಿದ್ದರು. ಈಗಲೂ ಆತ ಮಾದಕವಸ್ತು ವ್ಯಸನಿಯೆ? ಪೊಲೀಸರು ಈ ಬಾರಿ ಬಂಧಿಸಿದ್ದಾಗ ಮಾದಕವಸ್ತು ಪರೀಕ್ಷೆ ನಡೆಸಲಾಗಿದೆಯೆ? ಮಾದಕವಸ್ತು ಸೇವನೆಯ ವ್ಯಸನಿ ಎಂದು ದೃಢಪಟ್ಟ ಬಳಿಕ ಸೂಕ್ತ ಚಿಕಿತ್ಸೆ ನೀಡಲಾಗಿದೆಯೆ ಎಂಬುದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ನನಗೆ ನೋಟಿಸ್‌ ಕೊಟ್ಟರೆ ಏನಾಗುತ್ತದೆ?’

‘ಶ್ರೀಕೃಷ್ಣನನ್ನು ಬಳಸಿಕೊಂಡು ಜನ್‌ಧನ್‌ ಖಾತೆಗಳ ಸರ್ವರ್‌ಗೂ ಕನ್ನಹಾಕಿ ₹ 6,000 ಕೋಟಿ ದೋಚಲಾಗಿದೆ ಎಂಬ ಸುದ್ದಿ ಕುರಿತು ನಾನು ಮಾತನಾಡಿದ್ದೇನೆ. ಅದಕ್ಕಾಗಿ ಜಾರಿ ನಿರ್ದೇಶನಾಲಯದವರು ನನಗೆ ನೋಟಿಸ್‌ ಕೊಟ್ಟರೆ ಏನಾಗುತ್ತದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಕುಮಾರಸ್ವಾಮಿ ಅವರಿಗೆ ಇ.ಡಿ ಅಧಿಕಾರಿಗಳು ನೋಟಿಸ್‌ ನೀಡಿ, ಮಾಹಿತಿ ಪಡೆಯಬೇಕು’ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಎರಡು ಬಾರಿ ಸಂಸದರಾದವರು ಜವಾಬ್ದಾರಿಯಿಂದ ಮಾತನಾಡಬೇಕು. ನನಗೆ ನೋಟಿಸ್‌ ಕೊಟ್ಟು ಏನು ಮಾಡುತ್ತಾರೆ’ ಎಂದರು.

ದೇಶದಲ್ಲಿ ನಡೆದಿರುವ ದೊಡ್ಡ ಹಗರಣಗಳು ಏನಾದವು? ಯಾವುದಾದರೂ ಹಗರಣದ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಾರಾ? ಸಣ್ಣವರಿಗಷ್ಟೇ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

‘ಆರೋಪಗಳಿಗೆಲ್ಲ ಉತ್ತರಿಸಲಾಗದು’

‘ಕಂದಾಯ ಸಚಿವ ಆರ್‌. ಅಶೋಕ ಅವರ ಬೇನಾಮಿ ವ್ಯಕ್ತಿಯಾಗಿರುವ ಲೋಕನಾಥ್‌ ಅಲಿಯಾಸ್‌ ಲೋಕಿ ಎಂಬುವವರು ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಹಗರಣದಲ್ಲಿದ್ದಾರೆ’ ಎಂದು ಸಚಿನ್‌ ಮಾಮನಿ ಎಂಬುವವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಲು ಅಶೋಕ ನಿರಾಕರಿಸದರು.

ಈ ಕುರಿತ ಪ್ರಶ್ನೆಗೆ, ‘ಕಾಂಗ್ರೆಸ್‌ನವರು ಸೇರಿದಂತೆ ದಿನಕ್ಕೊಬ್ಬರು ಏನೇನೋ ಹೇಳುತ್ತಾರೆ. ಎಲ್ಲದಕ್ಕೂ ಉತ್ತರ ನೀಡುವುದಕ್ಕಾಗುತ್ತದೆಯೆ’ ಎಂದು ಮರು ಪ್ರಶ್ನೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT