ರಾಜ್ಯದಲ್ಲಿ ಇದೇ 19ರಿಂದ ‘ಜನ ಸ್ವರಾಜ್’ ಯಾತ್ರೆ: ಎನ್. ರವಿಕುಮಾರ್

ಬೆಂಗಳೂರು: ‘ರಾಜ್ಯದಾದ್ಯಂತ ಇದೇ 19ರಿಂದ 21ರವರೆಗೆ ಬಿ.ಎಸ್. ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್, ಕೆ.ಎಸ್. ಈಶ್ವರಪ್ಪ ಮತ್ತು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಮೊದಲ ಹಂತದ ‘ಜನ ಸ್ವರಾಜ್’ ಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್‌ನ 25 ಸ್ಥಾನಗಳಿಗೆ ಜನವರಿಯಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚು ಸೀಟ್ ಗೆಲ್ಲಬೇಕಿದೆ. ಹೀಗಾಗಿ, ಪ್ರತಿ ಜಿಲ್ಲೆಗಳಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ‘ ಎಂದರು.
‘ಕಳೆದ ಬಾರಿ ಈ ಸ್ಥಾನಗಳ ಪೈಕಿ 7 ಸೀಟ್‌ಗಳನ್ನು ಬಿಜೆಪಿ ಗೆದ್ದಿತ್ತು. ಈ ಬಾರಿ ಹೆಚ್ಚು ಸೀಟ್ ಗೆಲ್ಲಲು ಕಾರ್ಯತಂತ್ರ ರೂಪಿಸಲಾಗುತ್ತಿದೆ’ಎಂದರು.
‘ಚುನಾವಣೆಯಲ್ಲಿ ಯಾರೆಲ್ಲ ಅಭ್ಯರ್ಥಿಗಳಿದ್ದಾರೆ ಎನ್ನುವುದನ್ನು ಪಕ್ಷದ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಿ, ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಲಾಗುವುದು. ರಾಷ್ಟ್ರೀಯ ನಾಯಕರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದ್ದಾರೆ‘ ಎಂದರು.
ಪಕ್ಷದ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ, ‘ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಪರಿಶಿಷ್ಟರಿಗೆ ಅನ್ಯಾಯ, ಅವಮಾನ ಆಗಿದೆ. ರಾಹುಲ್ ಗಾಂಧಿ ಬಂದಿದ್ದ ಸಂದರ್ಭದಲ್ಲಿ ಎಚ್. ಆಂಜನೇಯ ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಅವಮಾನ ಮಾಡಿದ್ದರು’ ಎಂದರು.
‘ಈಗ ಬಿಟ್ ಕಾಯಿನ್ ವಿಚಾರ ಎಳೆದು ತಂದು ಪರಿಶಿಷ್ಟರ ಬಗ್ಗೆ ಮಾತನಾಡಿದ್ದನ್ನು ಮರೆಮಾಚುತ್ತಿದ್ದಾರೆ. ತನಿಖೆ ಬಳಿಕ ಬಿಟ್ ಕಾಯಿನ್ ಪ್ರಕರಣದ ಹಿಂದಿನ ಸತ್ಯ ಹೊರಬರಲಿ. ರಾಮಲಿಂಗಾರೆಡ್ಡಿ ಗೃಹ ಸಚಿವರಾಗಿದ್ದವರು. ಬಿಟ್ ಕಾಯಿನ್ ಪ್ರಕರಣದಲ್ಲಿ ಇರುವ ಪ್ರಭಾವಿಗಳು ಯಾರು ಎಂದು ಅವರಿಗೆ ಗೊತ್ತಿದ್ದರೆ ಹೆಸರು ಬಹಿರಂಗಪಡಿಸಲಿ. ಪ್ರಭಾವಿಯ ಮಗನ ಹೆಸರನ್ನೂ ಹೇಳಲಿ’ ಎಂದು ಸವಾಲು ಹಾಕಿದರು.
‘ಪಕ್ಷ ಸೇರಲು ಬಯಸಿ ಅರ್ಜಿ ಹಾಕಿದವರ ಬಗ್ಗೆ ಪ್ರಮುಖರ ಸಭೆಯಲ್ಲಿ ಚರ್ಚಿಸುತ್ತೇವೆ. ಟಿಕೆಟ್ ನೀಡುವ ತೀರ್ಮಾನವನ್ನು ಹೈಕಮಾಂಡ್ ಮಾಡಲಿದೆ. ಮೈಸೂರಿನಲ್ಲಿ ಸಂದೇಶ ನಾಗರಾಜ್ ಬಿಜೆಪಿಯಿಂದ ಟಿಕೆಟ್ ಬಯಸಿ ಅರ್ಜಿ ಹಾಕಿದ್ದಾರೆ. ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಸಿ.ಆರ್. ಮನೋಹರ್ ಕೂಡ ಪಕ್ಷಕ್ಕೆ ಬರುವ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದರು.
‘ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪೈಪೋಟಿ ಇದೆ. ಶಿವಕುಮಾರ್ ಅವರ ಬೆಳವಣಿಯನ್ನು ಸಿದ್ದರಾಮಯ್ಯ ಅವರಿಗೆ ಸಹಿಸಲು ಆಗುತ್ತಿಲ್ಲ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ ಮರುದಿನ ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುವಂಥ ಸುದ್ದಿ ಇಟ್ಟುಕೊಂಡು ಸುದ್ದಿಗೋಷ್ಠಿ ಮಾಡುತ್ತಾರೆ. ಕೋವಿಡ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ದೂರುವ ಸಿದ್ದರಾಮಯ್ಯ, ಸದನದಲ್ಲಿ ಒಂದು ದಿನವೂ ದಾಖಲೆ ಇಟ್ಟುಕೊಂಡು ಆರೋಪಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಡಿವಿಎಸ್ ಬದಲು ಈಶ್ವರಪ್ಪಗೆ ನೇತೃತ್ವ: ರಾಜ್ಯ ಬಿಜೆಪಿ ನಾಯಕರ ಪ್ರವಾಸದ ಪಟ್ಟಿಯಿಂದ ಡಿ.ವಿ. ಸದಾನಂದ ಗೌಡರ ಬದಲು ಕೆ.ಎಸ್. ಈಶ್ವರಪ್ಪ ಅವರಿಗೆ ಸ್ಥಾನ ನೀಡಲಾಗಿದೆ.
ನಾಲ್ವರ ನೇತೃತ್ವದ ಪ್ರವಾಸದ ಪಟ್ಟಿಯಲ್ಲಿ ಈ ಹಿಂದೆ ಡಿ.ವಿ. ಸದಾನಂದಗೌಡ ಅವರ ಹೆಸರು ಇತ್ತು. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸದಾನಂದಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವಾಸಕ್ಕೆ ತಯಾರಿ ನಡೆದಿತ್ತು. ಆದರೆ, ಇದೀಗ ಸದಾನಂದಗೌಡ ಅವರನ್ನು ಕೈಬಿಡಲಾಗಿದೆ. ಈ ವಿಷಯ ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.