ಬುಧವಾರ, ಜೂನ್ 16, 2021
21 °C

ಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗದ ಕಾಂಗ್ರೆಸ್: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್-‌19 ಪರಿಸ್ಥಿತಿಯ ನಿರ್ವಹಣೆ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದೇಶದ ಹೆಸರು ಕೆಡಿಸಲು ಕಾಂಗ್ರೆಸ್‌ ಪಕ್ಷವು ಟೂಲ್‌ಕಿಟ್‌ ಮೂಲಕ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ʼಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲʼ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

ಸಿ.ಟಿ. ರವಿ ಅವರ ಫೇಸ್‌ಬುಕ್‌ ಬರಹ

ʼಮನೆಗೆ ಮಗನೂ ಆಗಲಿಲ್ಲ ಸ್ಮಶಾನಕ್ಕೆ ಹೆಣವೂ ಆಗಲಿಲ್ಲʼ ಎನ್ನುವಂತಹ ಒಂದು ರಾಜಕೀಯ ಪಕ್ಷ ನಮ್ಮ ದೇಶದಲ್ಲಿ ಇದ್ದರೆ ಅದು Indian National Congress . ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಮೂಲೆಗುಂಪು ಮಾಡಿದ್ದರೂ ಅವರಿಗಿನ್ನು ಬುದ್ಧಿ ಬಂದಿಲ್ಲ. ಕಾಂಗ್ರೆಸ್ ಭಾರತ ದೇಶಕ್ಕೆ, ದೇಶದ ಜನರಿಗೆ ದೇಶ ವಿದೇಶದಲ್ಲಿ ಅಪಪ್ರಚಾರ ಮಾಡಲು ತಯಾರಿಸಿದ ಟೂಲ್‌ಕಿಟ್ ಇಲ್ಲಿದೆ ನೋಡಿ. ತನ್ನ ಸ್ವ ಸಾಮರ್ಥ್ಯದಿಂದ ಏನನ್ನೂ ಮಾಡಲಾಗದ ಈ ಪಕ್ಷ ದೇಶ ವಿದೇಶಗಳಲ್ಲಿ ಹೆಚ್ಚುತ್ತಿರುವ ಭಾರತದ ಲೋಕಪ್ರಿಯತೆ ಹಾಗೂ ಶಕ್ತಿಯನ್ನು ಕುಂದಿಸುವ ನಿಟ್ಟಿನಲ್ಲಿ ಮತ್ತು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆಗೆ ಕುಂದು ತರಲು ಹೇಗೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕು.

ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಮೋದಿಜಿಯವರ ನೇತೃತ್ವದ ಸರಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ, ದೇಶದಾದ್ಯಂತ ದಂಗೆ ಎಬ್ಬಿಸುವ ಉದ್ದೇಶದಿಂದ ಮಾಡಿದ ಈ ಟೂಲ್ ಕಿಟ್ ದೇಶದ ಅಮಾಯಕ ಜನರ ಪ್ರಾಣದ ಜೋತೆ ಚೆಲ್ಲಾಟ ಆಡಿದೆ. ಈ ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆ ಮಾಡುವಲ್ಲಿ ಸರ್ಕಾರದ ಜೊತೆ ಇರಬೇಕಾದ ವಿರೋಧ ಪಕ್ಷ, ತನ್ನ ಕುಕೃತ್ಯಗಳ ಮುಖೇನ ಜನರ ಜೀವಗಳಿಗೆ ಯಮನಾಗಿದ್ದು ದೌರ್ಭಾಗ್ಯವೇ ಹೊರತು ಬೇರೆ ಏನಲ್ಲ.

ಇದನ್ನೂ ಓದಿ: 

ಲಸಿಕೆ ನಾವೇ ಕೊಡುತ್ತೇವೆ ಎಂಬ ಕಾಂಗ್ರೇಸ್ ರಾಜ್ಯಾಧ್ಯಕ್ಷನ ಹೇಳಿಕೆ, ಅತ್ತೆಯ ಹಣವನ್ನು ಅಳಿಯ ದಾನ ಮಾಡಿದ ಅನ್ನುವ ಹಾಗೆ ಸರಕಾರದ ನೂರು ಕೋಟಿ ಹಣವನ್ನು ಸರಕಾರಕ್ಕೆ ಕೊಡುತ್ತೇವೆ ಎಂಬ ಸಿದ್ದರಾಮಯ್ಯ ಅವರ ಹಗಲು ನಾಟಕ, ಬೆಡ್ ಗಳನ್ನು ಬ್ಲಾಕ್ ಮಾಡಿ ತಮ್ಮ ಕಾಲು ಹಿಡಿದವರಿಗೆ ನೀಡುವ ಯೋಜನೆಗಳು, ದೆಹಲಿಯಲ್ಲಿ ಶ್ರೀನಿವಾಸನೆಂಬ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಕ್ಸಿಜನ್ ಸಿಲಿಂಡರ್ ಹಿಡಿದು ಸುತ್ತಾಡಿದ್ದು, ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷನ ನೇತ್ರತ್ವದಲ್ಲಿ ಸ್ಟಿರಾಯ್ದ್ ಮಾತ್ರೆಗಳನ್ನು ಕೊರೊನ ಕಿಟ್ ಎಂದು ಹಂಚಿದ್ದು, ವಿಧಾನ ಸೌಧದ ಮುಂದೆ ನಲಪಾಡ್ಡ್ ಎಂಬ ಯೂತ್ ಕಾಂಗ್ರೇಸ್ ನಾಯಕನೊಬ್ಬ ಆಂಬ್ಯುಲೆನ್ಸ್ ಸ್ಟಂಟ್ ಮಾಡಿದ್ದು ಇವೆಲ್ಲವೂ ಈ ಟೂಲ್ ಕಿಟ್ ಎಂಬ ಮಹಾ ನಾಟಕದ ಭಾಗವೇ ಹೊರತಾಗಿ ಬೇರೆ ಏನೂ ಅಲ್ಲ.

ಮಧ್ಯಪ್ರಾಚ್ಯದಲ್ಲೊಂದು ಇಸ್ರೇಲ್ ಎನ್ನುವ ಪುಟ್ಟ ರಾಷ್ಟ್ರವಿದೆ, ಆ ರಾಷ್ಟ್ರದ ವಿರೋಧ ಪಕ್ಷ ತನ್ನ ರಾಷ್ಟ್ರಕ್ಕಾಗಿ, ತನ್ನ ರಾಷ್ಟ್ರದ ಮಾನ, ಸಮ್ಮಾನದ ರಕ್ಷಣೆಗಾಗಿ ಸರಕಾರದ ಜೊತೆ ನಿಂತು ಕೆಲಸ ಮಾಡುವುದನ್ನು ನೋಡಿದಾಗ ಈ ಮೇಲೆ ಹೇಳಿದ ಮಾತು ನಿಜ ಎನ್ನಿಸುತ್ತದೆ.
ಕಾಂಗ್ರೆಸ್ ಪಕ್ಷ ʼಮನೆಗೆ ಮಗನೂ ಆಗಲಿಲ್ಲ, ಸ್ಮಶಾನಕ್ಕೆ ಹೆಣವೂ ಆಗಲಿಲ್ಲʼ.

ಇದನ್ನೂ ಓದಿ: 

***

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಅವರು, ಕಾಂಗ್ರೆಸ್‌ ಪಕ್ಷವು ದೇಶದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಕೊರೊನಾವೈರಸ್‌ನ ಹೊಸ ರೂಪಾಂತರವನ್ನು ʼಮೋದಿ ತಳಿʼ ಎನ್ನುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದೂ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಇದು ಸುಳ್ಳು. ಪಾತ್ರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು