ಮಂಗಳವಾರ, ಮಾರ್ಚ್ 21, 2023
30 °C
ವಾರದಲ್ಲಿ ಒಂದು ದಿನ ಜಿಲ್ಲೆಯಲ್ಲಿ ಮೊಕ್ಕಾಂಗೆ ಸೂಚನೆ

ಸಂಪುಟ ವಿಸ್ತರಣೆ ಶೀಘ್ರ: ಸಚಿವರ ಸಭೆಯಲ್ಲಿ ಸಿಎಂ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಧಿವೇಶನಕ್ಕೆ ಮುನ್ನವೇ ದೆಹಲಿಗೆ ಹೋಗಿ ವರಿಷ್ಠರ ಸಲಹೆ ಪಡೆದು ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಬೇಗನೇ ಪೂರ್ಣಗೊಳಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಚಿವರ ಸಭೆಯಲ್ಲಿ ತಿಳಿಸಿದ್ದಾರೆ.

‘ಸಂಪುಟ ವಿಸ್ತರಣೆ ವಿಚಾರವಾಗಿ ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಆ ಬಗ್ಗೆ ಯಾವುದೇ ಸಂಶಯ ಬೇಡ. ಆದರೆ, ಎಲ್ಲ ಸಚಿವರು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಇದ್ದು, ಜನರ ಅಹವಾಲುಗಳು ಕೇಳಬೇಕು. ಅರ್ಧ ದಿನ ಪಕ್ಷದ ಕಚೇರಿಯಲ್ಲಿ ಕುಳಿತು ಕಾರ್ಯಕರ್ತರ ಮನವಿಗಳನ್ನೂ ಸ್ವೀಕರಿಸಬೇಕು’ ಎಂದು ಅವರು ಸೂಚಿಸಿದರು.

ಸರ್ಕಾರಕ್ಕೆ ಒಂದು ವರ್ಷ ತುಂಬಿದ ಬಳಿಕ ಮೊದಲ ಬಾರಿಗೆ ಸಚಿವರ ಸಭೆ ಕರೆದು, ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಎರಡನೇ ಕಂತಿನಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ 13 ಸಚಿವರ ಅನುಭವಗಳನ್ನು ಯಡಿಯೂರಪ್ಪ ಅವರುಇದೇ ಸಂದರ್ಭದಲ್ಲಿ ವಿಚಾರಿಸಿದರು.

ದೂರು ಬರಬಾರದು: ಪಕ್ಷದ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಸಣ್ಣಪುಟ್ಟ ಕೆಲಸಗಳಿಗೆ ಬೆಂಗಳೂರಿಗೆ ಬರುವಂತಾಗಬಾರದು. ಜಿಲ್ಲಾ ಕೇಂದ್ರಗಳಲ್ಲೇ ಅವರ ಅಹವಾಲುಗಳನ್ನು ಕೇಳಿ, ಅಲ್ಲೇ ಪರಿಹಾರ ನೀಡಬೇಕು. ಮುಂದಿನ ವಾರದಿಂದಲೇ ಈ ಕೆಲಸ ಆರಂಭಿಸಿ ಎಂದು ಯಡಿಯೂರಪ್ಪ ಸೂಚಿಸಿದರು.

‘ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಬದಲಾವಣೆ ಮಾಡುವ ಅಥವಾ ಇತರ ಯಾವುದೇ ಕೆಲಸಗಳನ್ನು ಮಾಡಿಸುವ ಸಂದರ್ಭದಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಬಿಜೆಪಿಯ ಎಲ್ಲ ಶಾಸಕರ ಅಭಿಪ್ರಾಯಗಳನ್ನು ಕೇಳಿ, ಸಹಮತದಿಂದ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲರೂ ಒಟ್ಟಾಗಿ ನನ್ನ ಬಳಿ ಬಂದರೆ, ಯಾವುದೇ ಕೆಲಸ ಇದ್ದರೂ ಮಾಡಿಕೊಡುತ್ತೇನೆ’ ಎಂದೂ ಹೇಳಿದರು.

ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಸಚಿವರಾದ ಶಶಿಕಲಾ ಜೊಲ್ಲೆ, ಕೆ.ಎಸ್‌. ಈಶ್ವರಪ್ಪ, ಶಿವರಾಮ್‌ ಹೆಬ್ಬಾರ್‌, ಚಾಮರಾಜನಗರ ಪ್ರವಾಸದಲ್ಲಿರುವ ಎಸ್‌.ಸುರೇಶ್‌ಕುಮಾರ್‌ ಸಭೆಗೆ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು