ಶುಕ್ರವಾರ, ಅಕ್ಟೋಬರ್ 22, 2021
29 °C
ಜನದಟ್ಟಣಿಯ ಪ್ರದೇಶಗಳಲ್ಲಿ ಹಳೆಯ ಪುಸ್ತಕಗಳ ದರ್ಶನ

ಅಕ್ಷರ ಅಕ್ಕರೆ ಬೆಳೆಸಲು ‘ಪುಸ್ತಕ ಗೂಡು’

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಈ ಗ್ರಾಮದಲ್ಲಿ ಜನರು ಈಗ ಕೆಲಹೊತ್ತು ಮೊಬೈಲ್ ಫೋನ್‌ ಬದಿಗಿಟ್ಟು ಕೈಯಲ್ಲಿ ಪುಸ್ತಕ ಹಿಡಿಯುತ್ತಾರೆ. ಕುತೂಹಲದಿಂದ ಪುಟಗಳನ್ನು ತಿರುವಿ ಹಾಕುತ್ತಾರೆ. ತಮ್ಮ ಆಸಕ್ತಿಯ ಪುಸ್ತಕಗಳು ಸಿಕ್ಕರೆ ಮನೆಗೆ ಒಯ್ದು, ಮರುದಿನ ಅದೇ ಜಾಗದಲ್ಲಿ ತಂದಿಡುತ್ತಾರೆ.

ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಬೆಳೆಸುವ ಉದ್ದೇಶದ ‘ಪುಸ್ತಕ ವಿನಿಮಯ’ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ‘ಪುಸ್ತಕ ಗ್ರಾಮ’ ಅಭಿಯಾನದ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ‘ಪುಸ್ತಕ ಗೂಡು’ ಇಟ್ಟು ಜನರಲ್ಲಿ ಓದುವ ಅಭಿರುಚಿ ಹುಟ್ಟಿಸಲು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಈ ಯೋಜನೆ ರೂಪಿಸಿದ್ದಾರೆ. ಪೈಲೆಟ್ ಯೋಜನೆಯಾಗಿ ಜಿಲ್ಲೆಯ ಏಳು ತಾಲ್ಲೂಕುಗಳ 17 ಗ್ರಾಮಗಳಲ್ಲಿ ‘ಪುಸ್ತಕ ಗೂಡು’ ರಚನೆಗೊಂಡಿದೆ.

ಏನಿದು ಪುಸ್ತಕ ಗೂಡು: ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಇರುವ ಊರಿನ ಪ್ರಮುಖ ಸ್ಥಳಗಳಲ್ಲಿ ಪುಟ್ಟಗೂಡು ರಚಿಸಿ, ಪುಸ್ತಕಗಳನ್ನು ಇಡಲಾಗುತ್ತದೆ. ನಾಗರಿಕರು ಕುತೂಹಲ ದಿಂದ ಪುಸ್ತಕಗಳನ್ನು ಕೈಗೆತ್ತಿಕೊಂಡು, ಕಣ್ಣು ಹಾಯಿಸುತ್ತಾರೆ.

‘ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯ ರೂಪಿಸಲಾಗಿದೆ. ಕಂಪ್ಯೂ ಟರ್, ಇಂಟರ್‌ನೆಟ್ ಸೌಲಭ್ಯಗಳೂ ಇವೆ. ಇದರ ಮುಂದುವರಿದ ಭಾಗವಾಗಿ ‘ಪುಸ್ತಕ ಗೂಡು’ ಪರಿಕಲ್ಪನೆ ಜಾರಿಗೊಳಿಸಲಾಗಿದೆ’ ಎಂದು ಡಾ. ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪುಸ್ತಕ ಸಂಗ್ರಹ ಹೇಗೆ: ‘ಮಳೆ–ಗಾಳಿಯಿಂದ ಪುಸ್ತಕಗಳಿಗೆ ರಕ್ಷಣೆ ನೀಡಲು ಗೂಡು ರಚಿಸಲಾಗಿದೆ. ಸಾರ್ವಜನಿಕರು ಮನೆಯಲ್ಲಿ ಇರುವ ಹಳೆಯ ಪುಸ್ತಕಗಳನ್ನು ಇಲ್ಲಿ ತಂದಿಡಬಹುದು. ನಿತ್ಯ ಪುಸ್ತಕಗಳನ್ನು ಕಂಡಾಗ ಓದುವ ಪ್ರಜ್ಞೆ ಜಾಗೃತವಾಗುತ್ತದೆ. ಗೂಡಿನಲ್ಲಿ ಸೇರುವ ಪುಸ್ತಕಗಳು ಜನರ ನಡುವೆ ವಿನಿಮಯ ಆಗುತ್ತವೆ. ಆ ಮೂಲಕ ವಿಚಾರ ಹಂಚಿಕೆಯೂ ಆಗುತ್ತದೆ’ ಎಂದು ವಿವರಿಸಿದರು.

‘ಪ್ರಮುಖ ಮೂರು ಸ್ಥಳಗಳಲ್ಲಿ ಗೂಡು ರಚಿಸಿ, ಪ್ರತಿ ಗೂಡಿನಲ್ಲಿ 30–40 ಪುಸ್ತಕಗಳನ್ನು ಇಟ್ಟಿದ್ದೇವೆ. ನಾಲ್ಕಾರು ದಿನಗಳಲ್ಲಿ ಕಾದಂಬರಿ, ಮಕ್ಕಳ ಕತೆ, ಪಾಕಶಾಸ್ತ್ರ, ಪತ್ರಿಕೆಗಳ ವಿಶೇಷಾಂಕ ಸಂಚಿಕೆ ಸೇರಿದಂತೆ 250ಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹವಾಗಿವೆ. ಯುವ ಸಂಘಟನೆಗಳು ಗೂಡಿನ ನಿರ್ವಹಣೆಗೆ ಆಸಕ್ತಿ ತೋರಿವೆ. ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವವರು ಪುಸ್ತಕಗಳನ್ನು ಹಿಡಿದು ಓದುವುದನ್ನು ಗಮನಿಸಿದ್ದೇವೆ’ ಎಂದು ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಪಿಡಿಒ ಅನಿತಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು