ಬುಧವಾರ, ಆಗಸ್ಟ್ 17, 2022
27 °C

ಸುಪಾರಿ ಪಡೆದು ಬಾಲಕನ ಅಪಹರಣ: ಮುಖ್ಯ ಆರೋಪಿಗಾಗಿ ತೀವ್ರ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಉಜಿರೆಯ ಎಂಟು ವರ್ಷದ ಬಾಲಕನ ಅಪಹರಣ ಮಾಡಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದು, ಇದಕ್ಕಾಗಿ ಆರೋಪಿಗಳಿಗೆ ಕೃತ್ಯವೆಸಗಲು ಸುಪಾರಿ ನೀಡಿದ್ದ ಪ್ರಮುಖ ಆರೋಪಿಯ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದ ರಂಜಿತ್, ಹನುಮಂತ್, ಮೈಸೂರಿನ ಗಂಗಾಧರ, ಬೆಂಗಳೂರಿನ ಕಮಲ್ ಪ್ರಮುಖ ಆರೋಪಿಗಳು. ಮಂಜುನಾಥನ ನೆರವಿನಿಂದ ಕೋಲಾರದ ಮಹೇಶ್‌ನ ಮನೆಯಲ್ಲಿ ಮಗುವನ್ನು ಇಟ್ಟಿದ್ದರು ಎಂದರು.

ಬಂಧಿತ ಆರೋಪಿಗಳ ಪೈಕಿ ನಾಲ್ಕು ಜನರಿಗೆ ಹೊರಗಿನ ವ್ಯಕ್ತಿಯೊಬ್ಬ ₹7 ಲಕ್ಷ ಸುಪಾರಿ ಕೊಟ್ಟಿದ್ದ. ಆತ ಈ ಕುಟುಂಬಕ್ಕೆ ಪರಿಚಯಸ್ಥ ಎಂಬ ಬಗ್ಗೆ ಮಾಹಿತಿ ಗೊತ್ತಾಗಿದೆ. ಆತನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸುಪಾರಿ ನೀಡಿದ ವ್ಯಕ್ತಿ ಸಿಕ್ಕ ಬಳಿಕ ಅಪಹರಣದ ಉದ್ದೇಶ ತಿಳಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ: 

ಹೊರಗಿನ ವ್ಯಕ್ತಿಗಳು ಈ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರ ಆಧಾರದಲ್ಲೂ ತನಿಖೆ ಆರಂಭಿಸಲಾಗಿತ್ತು. ನಾಲ್ಕು ತಂಡಗಳನ್ನು ರಚಿಸಿ, ಹಾಸನ, ಬೆಂಗಳೂರು, ಮೂಡಿಗೆರೆ ಮತ್ತು ಮಧುಗಿರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಪೈಕಿ ಮಧುಗಿರಿಯಲ್ಲಿ ಒಂದಿಷ್ಟು ಮಾಹಿತಿ ಲಭ್ಯವಾಗಿತ್ತು ಎಂದು ತಿಳಿಸಿದರು.

ಬಾಲಕನ ತಂದೆ 3–4 ವರ್ಷಗಳ ಹಿಂದೆ ಬಿಟ್ ಕಾಯಿನ್‌ನಲ್ಲಿ ಹೂಡಿಕೆ ಮಾಡಿದ್ದರು. ಅದನ್ನ ಸ್ವತಃ ಅವರೇ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಅದರ ಮೌಲ್ಯ ಕುಸಿದಾಗ ಬಿಟ್ ಕಾಯಿನ್ ಮಾರಾಟ ಮಾಡಿರುವುದಾಗಿ ಹೇಳಿದ್ದಾರೆ ಎಂದು ಎಸ್ಪಿ ಲಕ್ಷ್ಮಿಪ್ರಸಾದ ತಿಳಿಸಿದರು.

ಬಂಧಿತ ನಾಲ್ವರು ಮತ್ತು ನೆರವು ನೀಡಿದ ಇಬ್ಬರಿಗೆ ಉಜಿರೆಯ ಕುಟುಂಬದ ಪರಿಚಯವಿಲ್ಲ. ಆದರೆ ಇವರಿಗೆ ಸುಪಾರಿ ಕೊಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ. ಅಪಹರಣಕಾರರು ಇದೇ 7ರಿಂದ ನಿರಂತರವಾಗಿ ಕುಟುಂಬದ ಚಲನವಲನ ಗಮನಿಸುತ್ತಿದ್ದರು. ಬಾಲಕನನ್ನು ಅಪಹರಿಸಿದ ಬಳಿಕ ಸುಳ್ಯ, ಮಡಿಕೇರಿ, ಮಂಡ್ಯ ಮೂಲಕ ಕೋಲಾರಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು