ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ವಿಶ್ಲೇಷಣೆ: ಖಾತೆ ಬದಲಾವಣೆ ಉರಿ, ಬಿಜೆಪಿಯಲ್ಲಿ ತಿಕ್ಕಾಟಕ್ಕೆ ದಾರಿ

ವಲಸಿಗರ ‘ಅಸಾಮರ್ಥ್ಯ’ ಮುಂದಿಟ್ಟ ಹಿರಿಯರು
Last Updated 13 ಅಕ್ಟೋಬರ್ 2020, 20:36 IST
ಅಕ್ಷರ ಗಾತ್ರ

ಬೆಂಗಳೂರು: ಬಿ. ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಖಾತೆಯನ್ನು ಕಿತ್ತು ಡಾ. ಕೆ. ಸುಧಾಕರ್‌ ಅವರಿಗೆ ಕೊಟ್ಟಿರುವುದು ಬಿಜೆಪಿಯಲ್ಲಿ ವಲಸಿಗ–ಮೂಲನಿವಾಸಿಗಳ ಮಧ್ಯದ ತಿಕ್ಕಾಟಕ್ಕೆ ಮುನ್ನುಡಿ ಬರೆದಂತಾಗಿದೆ.

ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಪುನಾರಚನೆ ಕನಸು ಹೊತ್ತಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ನವದೆಹಲಿಗೆ ತೆರಳಿದ್ದರು. ‘ಪುನಾರಚನೆ ಬೇಡ; ವರಿಷ್ಠರು ಸೂಚಿಸಿದಾಗ ವಿಸ್ತರಣೆ ಮಾತ್ರ ಮಾಡಿ’ ಎಂದು ಹೇಳಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಯಡಿಯೂರಪ್ಪ ಅವರನ್ನು ಬೆಂಗಳೂರಿಗೆ ಸಾಗ ಹಾಕಿದ್ದರು.

ಪುನಾರಚನೆಗೆ ಸಮ್ಮತಿ ಕೊಡದಿದ್ದ ಕಾಲದಲ್ಲಿ ಯಡಿಯೂರಪ್ಪನವರೇ ಶ್ರೀರಾಮುಲು ಖಾತೆಯನ್ನು ಏಕಾಏಕಿ ಬದಲಾವಣೆ ಮಾಡಿರುವುದು ಪಕ್ಷದ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಹಾಗಂತ ಶ್ರೀರಾಮುಲು ಖಾತೆ ನಿರ್ವಹಣೆಯಲ್ಲಿ ಅಸಾಮರ್ಥ್ಯ ತೋರಿರುವುದು ಈಗ ಗೊತ್ತಾಗಿರುವ ಸಂಗತಿಯಲ್ಲ. ಕೋವಿಡ್ ಕರ್ನಾಟಕಕ್ಕೆ ಕಾಲಿಟ್ಟ ಆರಂಭದಲ್ಲಿ ಶ್ರೀರಾಮುಲು–ಡಾ.ಕೆ.ಸುಧಾಕರ್‌ ನಡುವೆ ತಿಕ್ಕಾಟ ಉಂಟಾದಾಗ ಆಯಾ ದಿನದ ವಿವರಗಳನ್ನು ಮಾಧ್ಯಮಗಳಿಗೆ ನೀಡುವ ಜವಾಬ್ದಾರಿಯನ್ನು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ಗೆ ನೀಡಲಾಗಿತ್ತು. ಕೋವಿಡ್‌ ಕುರಿತ ಉಳಿದ ಜವಾಬ್ದಾರಿಯನ್ನು ಡಾ. ಸುಧಾಕರ್‌ಗೆ ನೀಡಲಾಗಿತ್ತು. ಇದಕ್ಕೆ ಶ್ರೀರಾಮುಲು ತಕರಾರು ತೆಗೆದಿದ್ದರಿಂದಾಗಿ ಬೆಂಗಳೂರಿನ ಹೊಣೆಯನ್ನು ಸುಧಾಕರ್‌ಗೂ, ರಾಜ್ಯದ ಜವಾಬ್ದಾರಿಯನ್ನು ಶ್ರೀರಾಮುಲುಗೆ ವಹಿಸಲಾಗಿತ್ತು. ಹಾಗಿದ್ದರೂ ಕೋವಿಡ್‌ ನಿಯಂತ್ರಣಕ್ಕೆ ಸಿಗದೇ ನಾಗಾಲೋಟದಿಂದ ಓಡಿ, ಏಳು ತಿಂಗಳು ಕಳೆಯುವಷ್ಟರಲ್ಲಿ 7 ಲಕ್ಷ ಜನರಿಗೆ ಅಂಟಿಯೇ ಬಿಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಯಡಿಯೂರಪ್ಪ ಭೇಟಿಯಾಗಿದ್ದ ವೇಳೆ, ‘ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಬಗ್ಗೆ, ಅದನ್ನು ನಿಗ್ರಹ ಮಾಡುವ ಬಗ್ಗೆ ಮುತುವರ್ಜಿ ವಹಿಸಬೇಕು’ ಎಂದು ಸೂಚಿಸಿದ್ದರು. ಈ ಬೆಳವಣಿಗೆಯಿಂದಾಗಿ ಶ್ರೀರಾಮುಲು ಖಾತೆ ಬದಲಾವಣೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ಮೂಲ–ವಲಸಿಗ ಭೇದ: ಶ್ರೀರಾಮುಲು ಖಾತೆ ಬದಲಾವಣೆಯು ಮೂಲ–ವಲಸಿಗರಲ್ಲಿ ಭೇದವೆಣಿಸಲಾಗುತ್ತಿದೆ ಎಂಬ ಚರ್ಚೆಯನ್ನೂ ಬಿಜೆಪಿಯಲ್ಲಿ ಹುಟ್ಟುಹಾಕಿದೆ.

ತೋಟಗಾರಿಕೆ ಮತ್ತು ಪೌರಾಡಳಿತ ಸಚಿವ ನಾರಾಯಣಗೌಡ ವಿರುದ್ಧ ಪಕ್ಷದ ಮೂಲನಿವಾಸಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಧಿವೇಶನ ನಡೆಯುವಾಗಲೇ ಕಡೂರು ಶಾಸಕ ಬೆಳ್ಳಿ ಪ್ರಕಾಶ್, ಗೌಡರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಗೌಡರ ರಾಜೀನಾಮೆ ಪಡೆಯದೇ ಇದ್ದರೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಇತ್ತೀಚೆಗೆ ಹೇಳಿದ್ದರು. ನಗರಸಭೆ–ಪುರಸಭೆಗಳ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ಮರುನಿಗದಿ ಮಾಡುವ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿಲ್ಲ. ಕನಿಷ್ಠ ತಮ್ಮ ಜತೆಗೆ ಚರ್ಚಿಸದೇ ತಮ್ಮೆದುರು ಸೋತ ಕಾಂಗ್ರೆಸ್–ಜೆಡಿಎಸ್‌ ನವರಿಗೆ ಅನುಕೂಲ ಮಾಡಿಕೊಡುವಂತೆ ಮೀಸಲಾತಿ ನಿಗದಿ ಮಾಡಲಾಗಿದೆ ಎಂದು ಅನೇಕ ಶಾಸಕರು ಮುಖ್ಯಮಂತ್ರಿಗೆ ದೂರಿತ್ತಿದ್ದಾರೆ. ಬದಲಾವಣೆ ಮಾಡುವುದಾದರೆ ನಾರಾಯಣಗೌಡರ ಖಾತೆಯನ್ನು ಬೇರೆಯವರಿಗೆ ನೀಡಬೇಕಿತ್ತು ಎಂಬುದು ಬಿಜೆಪಿ ಶಾಸಕರ ವಾದ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಜವಳಿ ಸಚಿವ ಶ್ರೀಮಂತ ಪಾಟೀಲ ಅವರಂತೂ ಯಾವ ಸಭೆಗಳನ್ನೂ ನಡೆಸುತ್ತಿಲ್ಲ. ತಮ್ಮ ಕೈಗೂ ಸಿಗುತ್ತಿಲ್ಲ ಎಂಬುದು ಬಿಜೆಪಿ ಶಾಸಕರ ಆರೋಪ. ಈ ಬೆಳವಣಿಗೆಗಳಿಂದಾಗಿ ಹೊರಗಿನಿಂದ ಬಂದವರ ಮೇಲಿರುವ ಮಮಕಾರ ತಮ್ಮ ಪಕ್ಷದವರ ಮೇಲೆ ಇಲ್ಲ ಎಂಬ ಕೂಗು ಪಕ್ಷದಲ್ಲಿ ಬೆಳೆಯಲಾರಂಭಿಸಿದೆ ಎಂದು ಹಿರಿಯ ಶಾಸಕರೊಬ್ಬರು ಹೇಳಿದರು.

ಹಿಂದುಳಿದ ವರ್ಗಗಳ ಇಲಾಖೆ ಸಿ.ಎಂಗೆ: ಶ್ರೀರಾಮುಲು ಅವರಿಂದ ಕಿತ್ತುಕೊಂಡ ಹಿಂದುಳಿದ ವರ್ಗಗಳ ಇಲಾಖೆಯನ್ನು ಯಡಿಯೂರಪ್ಪನವರು ತಮ್ಮ ಬಳಿಯೇ ಇಟ್ಟುಕೊಂಡಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಪರಿಶಿಷ್ಟ ಜಾತಿಯ ಪ್ರಮುಖ ನಾಯಕರೊಬ್ಬರಾದ ಗೋವಿಂದ ಕಾರಜೋಳ ಬಳಿ ಇದ್ದ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಹಿಂದುಳಿದ ವರ್ಗಗಳ ಖಾತೆಯನ್ನು ಶ್ರೀರಾಮುಲು ಬಳಿ ಉಳಿಸಲು ಇಷ್ಟವಿಲ್ಲದೇ ಇದ್ದರೆ, ಕಾರಜೋಳ ಅವರಿಗೆ ನೀಡಬಹುದಿತ್ತು.

ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿ ವರದಿ ಮಂಡನೆಗೆ ಆಗ್ರಹ, ಸದಾಶಿವ ಆಯೋಗದ ವರದಿ ಜಾರಿ, ಒಳಮೀಸಲಾತಿ ಸೃಷ್ಟಿ, ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬ ಸಮುದಾಯ, ಪರಿಶಿಷ್ಟ ಪಂಗಡದ ಮೀಸಲಾತಿ ಶೇ 7.5ಕ್ಕೆ ಹೆಚ್ಚಳ, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2 ಎ ಪಟ್ಟಿಗೆ ಸೇರಿಸಲು ಆಗ್ರಹ. ಇಂತಹ ಅನೇಕ ಜಾತಿ ಸಂಬಂಧಿ ಹೋರಾಟಗಳು ಆರಂಭವಾಗಿವೆ. ಹೀಗಿರುವ ಹೊತ್ತಿನಲ್ಲಿ ಖಾತೆಯನ್ನು ಕಾರಜೋಳ ಅವರಿಗೆ ನೀಡಿದ್ದರೆ ಖಾತೆ ಹಾಗೂ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯವಿತ್ತು ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ಶುರುವಾಗಿವೆ.

ಮುನಿರತ್ನ, ರಾಜೇಶ್ ಗೌಡಗೆ ಟಿಕೆಟ್

ಭಾರಿ ಕುತೂಹಲ ಮೂಡಿಸಿದ್ದ ಆರ್‌.ಆರ್.ನಗರ ಕ್ಷೇತ್ರಕ್ಕೆ ಮುನಿರತ್ನ ಮತ್ತು ಶಿರಾ ಕ್ಷೇತ್ರಕ್ಕೆ ಡಾ. ರಾಜೇಶ್‌ಗೌಡ ಅವರನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿ ಘೋಷಿಸಿದೆ.

ಮುನಿರತ್ನ ಅವರಿಗೆ ಟಿಕೆಟ್‌ ನೀಡಬೇಕು ಎಂದು ಯಡಿಯೂರಪ್ಪ ಶಿಫಾರಸ್ಸು ಮಾಡಿದ್ದರು. ಈ ಹಿಂದೆ ಅಲ್ಲಿ ಪರಾಜಿತರಾಗಿದ್ದ ತುಳಸಿ ಮುನಿರಾಜುಗೌಡ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಸೇರಿಸಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿದ್ದರು.

ಇದರಿಂದ ಮುನಿರತ್ನ ಅವರಲ್ಲದೆ, ಬಿಜೆಪಿಗೆ ಬಂದು ಸಚಿವರಾದ ಹಲವರಲ್ಲೂ ಆತಂಕ ಮೂಡಿಸಿತ್ತು. ಹೀಗಾಗಿ ವಲಸೆ ಬಂದ ಎಲ್ಲ ನಾಯಕರೂ ಮುನಿರತ್ನ ಪರ ಒತ್ತಡ ಹೇರಲಾರಂಭಿಸಿದ್ದರು.

ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಡಾ.ರಾಜೇಶ್‌ ಗೌಡ ಅವರಿಗೆ ಶಿರಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಇವರಿಗೆ ಟಿಕೆಟ್‌ ನೀಡುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮೂಲ ಬಿಜೆಪಿಯವರಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯವೂ
ಇತ್ತು.

ಪಕ್ಷದ ತೀರ್ಮಾನಕ್ಕೆ ಬದ್ಧ: ತುಳಸಿ

‘ಮುನಿರತ್ನ ಅವರಿಗೆ ಟಿಕೆಟ್‌ ನೀಡಿದ ಬಗ್ಗೆ ತಕರಾರು ಇಲ್ಲ. ಈ ಹಿಂದೆ ಅವರ ವಿರುದ್ಧ ನಿರಂತರ ಹೋರಾಟ ನಡೆಸಿದ ತೃಪ್ತಿ ಇದೆ. ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇನೆ’ ಎಂದು ತುಳಸಿ ಮುನಿರಾಜುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ರಾಜಕೀಯದಲ್ಲಿ ಇದ್ದರೆ ಬಿಜೆಪಿಯಲ್ಲೇ ಇರುತ್ತೇನೆ. ಹಿಂದುತ್ವ ಸಿದ್ಧಾಂತವನ್ನು ಈಗಲೂ ಗಟ್ಟಿಯಾಗಿ ನಂಬಿದ್ದೇನೆ’ ಎಂದರು.

ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿ

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತಮಾಜಿ ಸದಸ್ಯ ಕೃಷ್ಣಮೂರ್ತಿ ವಿ. ಕಣಕ್ಕಿಳಿಯಲಿದ್ದಾರೆ. ಕೃಷ್ಣಮೂರ್ತಿ, ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಹೆಸರುಗಳು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದವು. ಪಕ್ಷದ ವರಿಷ್ಠರು ಕೃಷ್ಣಮೂರ್ತಿಗೆ ಟಿಕೆಟ್‌ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT