ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿನೋಟಿಫೈ ಪ್ರಕರಣ: ಬಿಎಸ್‌ವೈಗೆ ತನಿಖೆಯ ‘ಕಂಟಕ’

ಮೇಲ್ನೋಟಕ್ಕೆ ಅಪರಾಧಿಕ ಸಾಕ್ಷ್ಯ
Last Updated 3 ಜುಲೈ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಐ.ಟಿ ಕಾರಿಡಾರ್‌ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ 8 ಎಕರೆ 10 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ವರದಿ ತಿರಸ್ಕರಿಸಿರುವ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮರು ತನಿಖೆ ನಡೆಸುವಂತೆ ಆದೇಶಿಸಿದೆ.

ಯಡಿಯೂರಪ್ಪ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸುವಂತೆ ಶಿಫಾರಸು ಮಾಡಿ ಲೋಕಾಯುಕ್ತ ಪೊಲೀಸರು ಜನವರಿ 18ರಂದು ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯ ಶನಿವಾರ ತಿರಸ್ಕರಿಸಿದ್ದು, ಮರು ತನಿಖೆ ನಡೆಸಿ ಆಗಸ್ಟ್‌ 21ರೊಳಗೆ ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿದೆ.

2006–07ರಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಡಿಯೂರಪ್ಪ ಅವರು ಕಾನೂನಿಗೆ ವಿರುದ್ಧವಾಗಿ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳ 8 ಎಕರೆ 10 ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದರು ಎಂದು ಆರೋಪಿಸಿ ನಗರದ ವಾಸುದೇವ ರೆಡ್ಡಿ ಎಂಬುವವರು 2013ರಲ್ಲಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದ ಆದೇಶದಂತೆ 2015ರ ಫೆಬ್ರುವರಿ 21ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ದಾಖಲಿಸಿ ತನಿಖೆ ಆರಂಭಿಸಿದ್ದರು.

ದೀರ್ಘ ಕಾಲ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಪ್ರಕರಣ ರದ್ದು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅದನ್ನು ತಿರಸ್ಕರಿಸಿ 2020ರ ಡಿಸೆಂಬರ್‌ 22ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್‌, ‘ಅರ್ಜಿದಾರರು ಸಂಜ್ಞೇಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ಸಾಕ್ಷ್ಯಗಳು ಮೇಲ್ನೋಟದಲ್ಲೇ ಕಾಣಿಸುತ್ತಿರುವುದರಿಂದ ಪ್ರಕರಣ ರದ್ದು ಮಾಡಲಾಗದು’ ಎಂದು ಹೇಳಿತ್ತು. ಪ್ರಕರಣದ ತನಿಖೆಯನ್ನು ವಿಳಂಬ ಮಾಡಿರುವುದಕ್ಕಾಗಿ ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.

10,000 ಪುಟಗಳ ವರದಿ:2021ರ ಜನವರಿ 18ರಂದು ಭಾರಿ ಪ್ರಮಾಣದ ದಾಖಲೆಗಳೊಂದಿಗೆ 10,000 ಪುಟಗಳ ‘ಬಿ’ ವರದಿ ಸಲ್ಲಿಸಿದ್ದ ಲೋಕಾಯುಕ್ತ ಡಿವೈಎಸ್‌ಪಿ ಎಂ.ಜಿ. ಶಂಕರನಾರಾಯಣ, ಯಡಿಯೂರಪ್ಪ ವಿರುದ್ಧದ ಪ್ರಕರಣವನ್ನುಮುಕ್ತಾಯಗೊಳಿಸುವಂತೆ ಶಿಫಾರಸು ಮಾಡಿದ್ದರು.

ದೂರುದಾರರ ಪರ ವಾದ ಮಂಡಿಸಿದ್ದ ಸುಪ್ರೀಂಕೋರ್ಟ್‌ ವಕೀಲ ಕೆ.ವಿ. ಧನಂಜಯ್‌, ‘ಬಿ’ ವರದಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು. ತನಿಖಾ ತಂಡದ ವರದಿಯನ್ನು ತಿರಸ್ಕರಿಸಿ, ಯಡಿಯೂರಪ್ಪ ಮತ್ತು ಇತರ ಆರೋಪಿಗಳ ವಿರುದ್ಧ ವಿಚಾರಣೆ ಆರಂಭಿಸುವಂತೆ ಕೋರಿದ್ದರು. ಈ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಶ್ರೀಧರ್‌ ಗೋಪಾಲಕೃಷ್ಣ ಭಟ್‌, ‘ಬಿ’ ವರದಿಯನ್ನು ತಿರಸ್ಕರಿಸಿದರು.

‘ದೂರಿನಲ್ಲಿರುವ ಆರೋಪಗಳ ಕುರಿತು ಮರುತನಿಖೆ ನಡೆಸಿ ಅಂತಿಮ ವರದಿ ಅಥವಾ ಹೆಚ್ಚುವರಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್‌ ಘಟಕದ ಡಿವೈಎಸ್‌ಪಿಗೆ ನಿರ್ದೇಶನ ನೀಡಲಾಗಿದೆ. ಈ ದೂರನ್ನು ರದ್ದುಗೊಳಿಸುವಂತೆ ಕೋರಿದ್ದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ, ತನಿಖೆಯ ವಿಳಂಬದ ಕುರಿತು ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ತನಿಖೆ ನಡೆಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ದೂರಿನಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿತ್ತು. ಅವರ ವಿರುದ್ಧದ ವಿಚಾರಣೆಯನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಆ ಆದೇಶದ ಆಧಾರದಲ್ಲೇ ತನಿಖಾಧಿಕಾರಿ ‘ಬಿ’ ವರದಿ ಸಲ್ಲಿಸಿದ್ದರು.

‘ತನಿಖಾಧಿಕಾರಿ ಪ್ರಕರಣದ ಪ್ರಾಥಮಿಕ ಅಂಶಗಳ ಬಗ್ಗೆಯೇ ತನಿಖೆ ನಡೆಸಿಲ್ಲ. ಈ ಪ್ರಕರಣಕ್ಕೆ ಸಂಬಂಧಪಡದ ವಿಚಾರಗಳ ಆಧಾರದಲ್ಲಿ ನಿರ್ಧಾರಕ್ಕೆ ಬರಲಾಗಿದೆ. ಆರೋಪಿಯು ಅಧಿಕಾರ ದುರ್ಬಳಕೆ ಮಾಡಿದ್ದಾರೆಯೆ? ಡಿನೋಟಿಫಿಕೇಷನ್‌ ಮಾಡಲು ಯಾವುದಾದರೂ ಲಾಭ ಪಡೆದಿದ್ದಾರೆಯೆ? ಈ ತೀರ್ಮಾನವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಕೈಗೊಂಡಿದ್ದರೆ ಎಂಬ ಪ್ರಶ್ನೆಗಳಿಗೆ ವರದಿಯಲ್ಲಿ ಉತ್ತರವೇ ಇಲ್ಲ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT