ಭಾನುವಾರ, ಜೂನ್ 26, 2022
29 °C
ಸ್ಥಿತಿ ಜಟಿಲ

ಮುಷ್ಕರ ನಿಷೇಧ: ಸಂಧಾನ ಸಭೆಯೂ ವಿಫಲ, ಮತ್ತಷ್ಟು ನೌಕರರ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರವನ್ನು ನಿಷೇಧಿಸಿ ಕಾರ್ಮಿಕ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಮುಷ್ಕರ ನಿರತ ನೌಕರರು ಪಟ್ಟನ್ನು ಬಿಗಿಗೊಳಿಸಿದ್ದು, ಇದರಿಂದಾಗಿ ಕಗ್ಗಂಟು ಮುಂದುವರಿದಿದೆ.

ಮುಷ್ಕರದಿಂದಾಗಿ ಮೂರನೇ ದಿನವೂ ರಾಜ್ಯದಾದ್ಯಂತ ಬಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ನಾಲ್ಕು ಸಾರಿಗೆ ನಿಗಮ ಗಳಿಂದ ಒಟ್ಟು 1,000ಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಡೆಸಿವೆ. ಖಾಸಗಿ ಬಸ್‌ಗಳೂ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದಿವೆ. ಆದರೂ, ಬೆಂಗಳೂರು ನಗರ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಯಾಣಿಕರ ಪರದಾಟ ಹೆಚ್ಚುತ್ತಲೇ ಇದೆ.

ಮುಖಂಡರ ವಿರುದ್ಧ ಕ್ರಮಕ್ಕೆ ಸಿದ್ಧತೆ: ಸಾರಿಗೆ ನೌಕರರ ಕೂಟ ನೀಡಿದ್ದ ನೋಟಿಸ್‌ ಆಧಾರದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ವಿಫಲವಾಗಿದೆ.

ಸಂಧಾನ ಪ್ರಕ್ರಿಯೆ ಬಾಕಿ ಇರುವಾಗಲೇ ಮುಷ್ಕರ ಆರಂಭಿಸಿರುವುದು ಮತ್ತು ಆರನೇ ವೇತನ ಆಯೋಗದ ಶಿಫಾರಸಿನಂತೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡುವ ಭರವಸೆ ನೀಡಿರುವುದಕ್ಕೆ ದಾಖಲೆಗಳನ್ನು ಸಂಘಟನೆ ಸಲ್ಲಿಸಿಲ್ಲ ಎಂಬ ಕಾರಣ ನೀಡಿರುವ ಕಾರ್ಮಿಕ ಆಯುಕ್ತರು, ಸಂಧಾನ ವಿಫಲವಾಗಿದೆ ಎಂದು ಪ್ರಕಟಿಸಿದ್ದಾರೆ.

ಸಂಧಾನ ವಿಫಲವಾದ ಬೆನ್ನಲ್ಲೇ ಆದೇಶವೊಂದನ್ನು ಹೊರಡಿಸಿರುವ ಕಾರ್ಮಿಕ ಇಲಾಖೆ, ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರವನ್ನು ನಿಷೇಧಿಸಿದೆ. ಪ್ರಕರಣವನ್ನು ಔದ್ಯಮಿಕ ನ್ಯಾಯಾಧೀಕರಣಕ್ಕೆ ವರ್ಗಾಯಿಸುವ ಆದೇಶವನ್ನೂ ಹೊರಡಿಸಿದೆ.

ಟ್ರೈನಿ ಸಿಬ್ಬಂದಿಯ ವಜಾ, ಕಾಯಂ ನೌಕರರಿಗೆ ನೋಟಿಸ್‌ ಜಾರಿಯಂತಹ ಕ್ರಮಗಳನ್ನು ಕೈಗೊಂಡಿದ್ದ ಸಾರಿಗೆ ಇಲಾಖೆ, ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳ ಮುಖಂಡರು ಹಾಗೂ ಮುಷ್ಕರ ಬೆಂಬಲಿಸಿರುವ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವ ತೀರ್ಮಾನಕ್ಕೆ ಬಂದಿದೆ. ಅದಕ್ಕೆ ಪೂರಕವಾಗಿ ಕಾರ್ಮಿಕ ಇಲಾಖೆಯು ಮುಷ್ಕರವನ್ನು ನಿಷೇಧಿಸಿದೆ. ಈ ಆದೇಶವನ್ನು ಬಳಸಿಕೊಂಡು ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಮತ್ತಷ್ಟು ಮಂದಿ ವಜಾ: ಮುಷ್ಕರ ಬೆಂಬಲಿಸಿ ಕರ್ತವ್ಯಕ್ಕೆ ಗೈರಾಗಿರುವ ಟ್ರೈನಿ ಮತ್ತು ತರಬೇತಿ ಅವಧಿಯಲ್ಲಿರುವ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ. ಬಿಎಂಟಿಸಿ ತಲಾ 60 ಟ್ರೈನಿ ಮತ್ತು ತರಬೇತಿ ನಿರತ ಸಿಬ್ಬಂದಿಯನ್ನು ಶುಕ್ರವಾರ ವಜಾಗೊಳಿಸಿದೆ. ಕೆಎಸ್‌ಆರ್‌ಟಿಸಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲೂ ಹಲವು ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಕಾಯಂ ನೌಕರರಿಗೆ ನೋಟಿಸ್‌ ಜಾರಿಗೊಳಿಸುವ ಪ್ರಕ್ರಿಯೆಯೂ ಮುಂದುವರಿದಿದೆ. ನೌಕರರ ಕೆಲಸದ ಸ್ಥಳ, ಮನೆಗಳಿಗೆ ತೆರಳಿ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಮಹಜರು ಕೂಡ ಮಾಡಲಾಗುತ್ತಿದೆ. ಕೆಲವು ನೌಕರರು ನೋಟಿಸ್‌ ಪಡೆಯುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಜಾಹೀರಾತಿನ ಮೂಲಕ ನೋಟಿಸ್‌ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪರ್ಯಾಯ ಕ್ರಮಗಳತ್ತ ಚಿತ್ತ: ಎರಡು ವರ್ಷಗಳಿಂದ ಈಚೆಗೆ ನಿವೃತ್ತರಾದ ನೌಕರರ ಸೇವೆ ಬಳಕೆಗೆ ಗುರುವಾರ ತೀರ್ಮಾನ ಕೈಗೊಂಡಿದ್ದ ಸಾರಿಗೆ ಇಲಾಖೆ, ಶುಕ್ರವಾರ ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ. ಚಾಲಕ ಮತ್ತು ನಿರ್ವಾಹಕರ ನೇಮಕಾತಿ ಪ್ರಕ್ರಿಯೆಗಳಲ್ಲಿ ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ‘ವೆಯ್ಟಿಂಗ್‌ ಲಿಸ್ಟ್‌’ನಲ್ಲಿದ್ದ ಅಭ್ಯರ್ಥಿಗಳನ್ನು ದಿನದ ವೇತನದ ಆಧಾರದಲ್ಲಿ ಬಳಸಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.

‘ದಿನವೊಂದಕ್ಕೆ ₹ 600ರ ವೇತನದ ಆಧಾರದಲ್ಲಿ ಇಂತಹ ಅಭ್ಯರ್ಥಿಗಳ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವೆಯ್ಟಿಂಗ್‌ ಲಿಸ್ಟ್‌ನಲ್ಲಿದ್ದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ನಿವೃತ್ತರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದರು.

ಇನ್ನೊಂದೆಡೆ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಿಸುವುದಕ್ಕೂ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2020ರ ಫೆಬ್ರುವರಿ 1ಕ್ಕೆ ಸಿಂಧುತ್ವ ಮುಕ್ತಾಯಗೊಂಡಿರುವ ‌ವಿವಿಧ ವಾಹನಗಳ ದಾಖಲಾತಿಗಳ ಸಿಂಧುತ್ವದ ಅವಧಿಯನ್ನು 2021ರ ಜೂನ್‌ 30ರವರೆಗೂ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಹಟ ಬಿಟ್ಟು ಕೆಲಸಕ್ಕೆ ಬನ್ನಿ: ಬಿಎಸ್‌ವೈ
‘ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆರನೇ ವೇತನ‌ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ ಎಂದು ಹೇಳಿದ ಮೇಲೂ ಹಟ ಹಿಡಿಯುವುದು ಸರಿಯಲ್ಲ’ ಎಂದು ಹೇಳುವ ಮೂಲಕ ಮುಷ್ಕರನಿರತರ ಜತೆ ಸಂಧಾನದ ಬಾಗಿಲು ಮುಚ್ಚಿದೆ ಎಂಬುದನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಾರಿಗೆ ಇಲಾಖೆ ಇರುವುದು ಜನರ ಸೇವೆಗೋಸ್ಕರ. ಕೋವಿಡ್ ಕಾರಣದಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀವೇ ಯೋಚನೆ ಮಾಡಿ. ಹಟ ಬಿಟ್ಟು ಬನ್ನಿ' ಎಂದು ಮನವಿ ಮಾಡಿದರು.

‘ಅನೇಕ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ. ಸಾವಿರಾರು ನೌಕರರು ಬರಲು ಸಿದ್ಧರಿದ್ದಾರೆ. ಆದರೆ, ಅವರು ಬರದಂತೆ ಬೆದರಿಕೆ ಹಾಕುತ್ತಿದ್ದಾರೆ. ಹೆದರಿಸಿ ಅವರು ಬಸ್ ಓಡಿಸದಂತೆ ತಡೆಯುತ್ತಿದ್ದಾರೆ. ಬರುವವರಿಗೆ ಪೊಲೀಸ್ ಭದ್ರತೆ ಕೊಡುತ್ತೇವೆ. ಧೈರ್ಯವಾಗಿ ಬಸ್ ಓಡಿಸಿ’ ಎಂದೂ ವಿನಂತಿಸಿದರು.

ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ: ಸವದಿ
ಬೆಂಗಳೂರು:
ಸರ್ಕಾರದ ಕರೆಗೆ ಓಗೊಟ್ಟು ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದ್ದಾರೆ.

‘ವೇತನ ಹೆಚ್ಚಳದ ಪ್ರಸ್ತಾವವನ್ನು ಒಪ್ಪಿಕೊಂಡು ಕೆಲಸಕ್ಕೆ ಹಾಜರಾಗಲು ಬಹುತೇಕ ನೌಕರರು ಸಿದ್ಧರಿದ್ದಾರೆ. ಆದರೆ, ಮುಷ್ಕರವನ್ನೇ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದವರು ಅಡ್ಡಿಪಡಿಸುತ್ತಿದ್ದಾರೆ. ಇಂತಹ ಕಾನೂನು ವಿರೋಧಿ ದುಷ್ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು