ಭಾನುವಾರ, ಮೇ 9, 2021
20 °C

ಉಪಚುನಾವಣೆ ಶಾಂತಿಯುತ, ನೀರಸ: ಮಸ್ಕಿಯಲ್ಲಿ ಗರಿಷ್ಠ, ಬೆಳಗಾವಿಯಲ್ಲಿ ಕನಿಷ್ಠ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಭೀತಿ, ಬಿರುಬಿಸಿಲ ನಡುವೆ ಶನಿವಾರ ಬೆಳಗಾವಿ ಲೋಕಸಭೆ ಕ್ಷೇತ್ರ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಮತದಾನ ಶಾಂತಿಯುತವಾಗಿತ್ತು.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಹಿತಿಗಳ ಪ್ರಕಾರ, ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಗರಿಷ್ಠ
ಅಂದರೆ ಶೇ 70.48ರಷ್ಟು ಮತದಾನವಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕನಿಷ್ಠ ಶೇ 54.73 ಮತದಾನವಾಗಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಶೇ 61.49 ರಷ್ಟು ಮತದಾನವಾಗಿದೆ ಎಂದು ಹೇಳಿಕೆ ತಿಳಿಸಿದೆ.

ಬೆಳಗಾವಿ ಕ್ಷೇತ್ರದ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾನ ನೀರಸವಾಗಿತ್ತು. ಪ್ರತಿ ವರ್ಷ ನೆರೆ ಹಾವಳಿಗೆ ತುತ್ತಾಗುತ್ತಿರುವ ರಾಮದುರ್ಗ ತಾಲ್ಲೂಕಿನ ಚಿಕ್ಕತಡಸಿ ಮತ್ತು ಹಿರೇತಡಸಿ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದ ಸರ್ಕಾರದ ಧೋರಣೆ ವಿರೋಧಿಸಿ ಉಭಯ ಗ್ರಾಮಗಳ ಮತದಾರರು ಚುನಾವಣೆ ಬಹಿಷ್ಕರಿಸಿದರು. ಅಧಿಕಾರಿಗಳು ನಡೆಸಿದ ಮನವೊಲಿಕೆ ಯತ್ನವು ವಿಫಲವಾಯಿತು.

ಉಳಿದಂತೆ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಉತ್ತಮ ಮತದಾನವಾದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಸಿಲು ಹೆಚ್ಚಿದ್ದ ಕಾರಣ ಈ ಎರಡೂ ಕ್ಷೇತ್ರಗಳಲ್ಲಿ ಸಂಜೆ 4ರ ನಂತರವೇ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. 

ಮಸ್ಕಿ ಕ್ಷೇತ್ರದಲ್ಲಿ ಬೆಳಿಗ್ಗೆ 6.30ಕ್ಕೆ ಅಣಕು ಮತದಾನದ ವೇಳೆ ಐದು ಕಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತು. ತಕ್ಷಣ ಯಂತ್ರಗಳನ್ನು ಬದಲಾಯಿಸಲಾಯಿತು.ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು