ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ವರದಿಯಂತೆ ವೇತನ ಸಾಧ್ಯವೇ ಇಲ್ಲ: ಸರ್ಕಾರ

‘ಶೇ. 8ರಷ್ಟು ವೇತನ ಹೆಚ್ಚಳಕ್ಕೆ ನಿರ್ಧಾರ, ಮತ್ತೆ ಸಂಧಾನ ಇಲ್ಲ; ಮುಷ್ಕರ ಮಾಡಿದರೆ ಕಠಿಣ ಕ್ರಮ’
Last Updated 6 ಏಪ್ರಿಲ್ 2021, 11:56 IST
ಅಕ್ಷರ ಗಾತ್ರ

ಬೆಂಗಳೂರು: ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ಜೊತೆ ನಡೆದ ಸಭೆಯ ಬಳಿಕ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ‘ಸಾರಿಗೆ ನೌಕರರ ವೇತನವನ್ನು ಶೇ 8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇದೆ. ಹೀಗಾಗಿ, ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೋಮವಾರವೇ ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕಿದರೆ ತಕ್ಷಣ ಹೆಚ್ಚಳಕ್ಕೆ ಆದೇಶ ಹೊರಡಿಸಲಾಗುವುದು’ ಎಂದರು.

‘ಆರನೇ ವೇತನ ಆಯೋಗದ ವರದಿಯಂತೆ ವೇತನ ಹೆಚ್ಚಿಸಲು ಆಗ್ರಹಿಸಿ ನಾಳೆಯಿಂದ (ಏ. 7) ಮುಷ್ಕರನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಕೋವಿಡ್‌ ಪರಿಸ್ಥಿತಿ ಕಾರಣಕ್ಕೆ ಮುಷ್ಕರ ನಡೆಸದಂತೆನೌಕರರಲ್ಲಿ ಮನವಿ ಮಾಡುತ್ತಿದ್ದೇವೆ’ ಎಂದರು.

‘ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಸಾರಿಗೆ ನೌಕರರ ಜೊತೆ ಯಾವುದೇ ಸಂಧಾನ ಸಭೆ ನಡೆಸುವ ಪ್ರಶ್ನೆಯೇ ಇಲ್ಲ. ನಾವೇನು ಮಾಡಬೇಕೆಂದುಈಗಾಗಲೇ ತೀರ್ಮಾನಿಸಿದ್ದೇವೆ. ಚುನಾವಣಾ ಆಯೋಗಕ್ಕೂ ಪತ್ರ ಬರೆದು ಆಗಿದೆ. ನೌಕರರು ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್‌ ಕಾಯ್ದೆ, ಎಸ್ಮಾ ಸೇರಿದಂತೆ ಯಾವುದಾದರೂ ಕಾಯ್ದೆಯಡಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.

‘ಕೋವಿಡ್‌ ಕಾರಣದಿಂದ ಸಾರಿಗೆ ನಿಗಮಗಳಿಗೆ ಪ್ರತಿ ದಿನ ₹ 4 ಕೋಟಿ ನಷ್ಟವಾಗುತ್ತಿದೆ. ಎಲ್ಲ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ.. ಆದರೂ ಸಾರಿಗೆ ನೌಕರರ ವೇತನಕ್ಕೆ ಸರ್ಕಾರ ಯಾವುದೇ ಸಮಸ್ಯೆ ಮಾಡಿಲ್ಲ. ಹೋದ ವರ್ಷ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕೆ ₹ 2,100 ಕೋಟಿ ಬಿಡುಗಡೆ ಮಾಡಲಾಗಿದೆ. ಯಾರಿಗೂ ಸಂಬಳ ಕಡಿತ ಮಾಡಿಲ್ಲ. ಬಿಎಂಟಿಸಿ ನೌಕರರಿಗೆ ಜೂನ್‌ವರೆಗೆ ಸಂಬಳ ಕೊಡಲು ಆದೇಶ ಆಗಿದೆ. ಆದಾಯ ಇಲ್ಲವೆಂದು ಸಂಬಳ ಕಡಿತ ಮಾಡಿಲ್ಲ’ ಎಂದರು.

‘ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಈಗಾಗಲೇ ಜಾರಿ ಮಾಡಿದ್ದೇವೆ. ಆದರೆ, ಸರ್ಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸಿನಂತೆ ಕೊಡುವ ವೇತನ ನೀಡಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರ ಜೊತೆ ಚರ್ಚಿಸಿ, ಸಂಧಾನ ಸಭೆ ಏರ್ಪಡಿಸಿ ಪ್ರತಿ 4 ವರ್ಷಕ್ಕೊಮ್ಮೆ ಸಾರಿಗೆ ನೌಕರರ ವೇತನ ಹೆಚ್ಚಿಸುತ್ತಿದ್ದೇವೆ’ ಎಂದರು.

‘ಮುಷ್ಕರಕ್ಕೆ ಹೋದರೆ ಜನರಿಗೆ ತೊಂದರೆ ಆಗಲಿದೆ. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ತೆಗೆದುಕೊಳ್ಳಲಿದೆ. ಮ್ಯಾಕ್ಸಿ ಕ್ಯಾಬ್‌ಗಳು ಸೇರಿದಂತೆ ಖಾಸಗಿ ವಾಹನಗಳನ್ನು ಓಡಿಸಲು ಅನುಮತಿ ನೀಡುತ್ತೇವೆ. ಅದಕ್ಕೆ ಸಾರಿಗೆ ಆಯುಕ್ತರು ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದರು.

‘ಕೋವಿಡ್‌ ಕಾರಣದಿಂದ ಸಮಸ್ಯೆ ಇದ್ದರೂ ನೌಕರರ ಪರವಾಗಿ ಸರ್ಕಾರ ನಿಂತಿದೆ. ಪ್ರತಿದಿನ 45 ಲಕ್ಷ ಜನರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಕೋವಿಡ್‌ ಕಾರಣದಿಂದ ಆ ಸಂಖ್ಯೆ 20 ಲಕ್ಷಕ್ಕೆ ಇಳಿದಿದೆ. ಈ ಸಂಖ್ಯೆ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ಮುಷ್ಕರ ನಿರತರು ಬಸ್ಸುಗಳಿಗೆ ಹಾನಿ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಅದು ಸಾರ್ವಜನಿಕ ಆಸ್ತಿ’ ಎಂದರು.

‍‘ಮುಂದಿನ ದಿನಗಳಲ್ಲಿ ರಜೆಗಳು ಬರುತ್ತಿವೆ. ಹೀಗಾಗಿ, ರೈಲು ಸೌಲಭ್ಯ ಹೆಚ್ಚಿಸುವಂತೆ ರೈಲ್ವೆ ಇಲಾಖೆಗೂ ಪತ್ರ ಬರೆಯುತ್ತೇವೆ. ಬೆಳಗಾವಿ, ಕಲಬುರ್ಗಿ, ಮೈಸೂರು ಕಡೆಗೆ ಸಂಚರಿಸುವ ರೈಲುಗಳ ಸಂಖ್ಯೆ ಹೆಚ್ಚಿಸಲು ಕೇಳುತ್ತಿದ್ದೇವೆ’ ಎಂದರು.

‘ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಸಾರ್ವಜನಿಕರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಕ್ಯಾಬ್‌ಗಳು ಮತ್ತು ಶಾಲಾ ಬಸ್‌ಗಳಿಗೆ ಪ್ರಯಾಣ ದರ ನಿಗಡಿಪಡಿಸಿ ಓಡಾಡಲು ಅನುಮತಿ ನೀಡುತ್ತೇವೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಸಾರಿಗೆ ಆಯುಕ್ತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT