ಶನಿವಾರ, ಅಕ್ಟೋಬರ್ 1, 2022
20 °C

ಬೀದರ್ ಬಳಿ ಭೀಕರ ಅಪಘಾತ: ಗಾಣಗಾಪುರಕ್ಕೆ ಹೊರಟಿದ್ದ ಹೈದರಾಬಾದ್‌ನ ಐವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ‌ಹೈದರಾಬಾದ್– ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೀದರ್‌ ತಾಲ್ಲೂಕಿನ ಭಂಗೂರ ಚೆಕ್‌ಪೋಸ್ಟ್‌ ಸಮೀಪ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೈದರಾಬಾದ್‌ನಿಂದ ಗಾಣಗಾಪುರಕ್ಕೆ ಹೊರಟಿದ್ದ ಎರಟಿಗಾ ಕಾರು ಮುಂದೆ ಹೋಗುತ್ತಿದ್ದ ಕಂಟೆನರ್‌ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.

ಹೈದರಾಬಾದ್‌ನಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿರುವ ಬೇಗಂ ಪೇಟದ ನಿವಾಸಿ ಗಿರಿಧರ(45), ಪತ್ನಿ ಅನಿತಾ (36), ಮಯಾಂಕ(2), ಹೆಂಡತಿಯ ತಂಗಿ ಮಗಳು ಪ್ರಿಯಾಂಕಾ(15) ಹಾಗೂ ಕಾರು ಚಾಲಕ ಗಿರಿಧರನ ಗೆಳೆಯ ದಿನೇಶ(35) ಮೃತಪಟ್ಟಿದ್ದಾರೆ.
ಇವರಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾದರೆ, ಮಯಾಂಕ ಮನ್ನಾ ಎಖ್ಖೆಳ್ಳಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಗಿರಿಧರ ಪುತ್ರ 12 ವರ್ಷದ ಹರ್ಷವರ್ಧನ್‌ಗೆ ಯಾವುದೇ ಗಾಯಗಳಾಗಿಲ್ಲ. ಸಂಬಂಧಿಗಳಾದ ರಜಿತಾ, ಸರಿತಾ, ಶಾಲಿನಿ ಹಾಗೂ ಸರಳಾ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ಕಳಿಸಲಾಗಿದೆ. ಶವಗಳನ್ನು ಮನ್ನಾ ಎಖ್ಖೆಳ್ಳಿಯಿಂದ ಹೈದರಾಬಾದ್‌ಗೆ ಸಾಗಿಸಲಾಗಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್, ಡಿವೈಎಸ್‌ಪಿ ಸತೀಶ, ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್‌ಐ ಕಲ್ಲಪ್ಪ ಮುಗಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದಿಂದಾಗಿ ಕೆಲ ಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಕ್ರೇನ್‌ ಸಹಾಯದಿಂದ ನಜ್ಜುಗುಜ್ಜಾದ ಕಾರನ್ನು ಎತ್ತಿ ರಸ್ತೆ ಪಕ್ಕಕ್ಕೆ ಇಡಲಾಯಿತು.

ಮನ್ನಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು