ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವ ಸೇರಿ 10 ಜನರ ವಿರುದ್ಧ ಪ್ರಕರಣ: ವಿವಿದೆಡೆ ಹಣ ವಶ, ವಸ್ತು ವಶ

ಮುದ್ದೇಬಿಹಾಳ: ಜೆಸಿಬಿಯಿಂದ ಅಗೆದು ಪರಿಶೀಲನೆ: ₹45.94 ಲಕ್ಷ ಮೌಲ್ಯದ 11 ಸಾವಿರ ಗೋಡೆ ಗಡಿಯಾರ ವಶ
Last Updated 31 ಮಾರ್ಚ್ 2023, 18:46 IST
ಅಕ್ಷರ ಗಾತ್ರ

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಶ್ರೀಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಚುನಾವಣಾಧಿಕಾರಿಗಳು ಎರಡನೇ ಬಾರಿ ದಾಳಿ ನಡೆಸಿ ₹45.94 ಲಕ್ಷ ಮೌಲ್ಯದ ಒಟ್ಟು 11,080 ಗೋಡೆ ಗಡಿಯಾರಗಳನ್ನು ವಶಪಡಿಸಿಕೊಂಡಿದ್ದು, ಮಾಜಿ ಸಚಿವ ಎಸ್‌. ಆರ್.ಪಾಟೀಲ ಸೇರಿದಂತೆ 10 ಜನರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಎಫ್‍ಎಸ್‍ಟಿ 3ನೇ ತಂಡದ ಸದಸ್ಯ ಲೋಕೋಪಯೋಗಿ ಸಹಾಯಕ ಎಂಜಿನಿಯರ್ ರಾಜಶೇಖರ ಚವ್ಹಾಣ ನೀಡಿದ ದೂರಿನ ಮೇರೆಗೆ ಪಿಎಸ್‌ಐ ಆರೀಫ್ ಮುಷಾಪುರಿ ಅವರು,
ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಗೌಡ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ, ನಿರ್ದೇಶಕರಾದ ಡಾ.ಅಜೀತ ಕನಕರಡ್ಡಿ, ಎಚ್.ಎಲ್. ಪಾಟೀಲ, ಬೀಳಗಿ ಬಾಡಗಂಡಿ, ಕಾರ್ಖಾನೆ ಸಿಬ್ಬಂದಿ ಮಾರುತಿ ಗುರವ, ಶ್ರೀನಿವಾಸ ಅರಕೇರಿ, ಚಂದ್ರಶೇಖರ ತಮದಡ್ಡಿ, ಅಧಿಕ ಪಾಟೀಲ ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜೆಸಿಬಿಯಿಂದ ಅಗೆದು ಪರಿಶೀಲನೆ: ‘ಮತದಾರರಿಗೆ ಹಂಚಿಕೆ ಮಾಡಲು ತಂದಿರುವ ಗೃಹೋಪಯೋಗಿ ವಸ್ತುಗಳನ್ನು ಅಲ್ಲಲ್ಲಿ ನೆಲದಲ್ಲಿ, ಬಗ್ಯಾಸಸ್ (ಕಬ್ಬಿನ ಸಿಪ್ಪೆ ನುರಿಸಿದ ನಂತರ ಸೃಷ್ಟಿಯಾಗುವ ಪೌಡರ್)ನಲ್ಲಿ ಮುಚ್ಚಿಡಲಾಗಿದೆ’ ಎನ್ನುವ ಆರೋಪ ಕೇಳಿ ಬಂದ
ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿಜಯಮಹಾಂತೇಶ ಪರಿಶೀಲನೆ ನಡೆಸಿದರು. ಆದರೆ ಈ ಕಾರ್ಯಾಚರಣೆ ವೇಳೆ ಯಾವುದೇ ವಸ್ತುಗಳು ಸಿಗಲಿಲ್ಲ.

ನಿರ್ದೇಶಕರ ಪತ್ರ: ಈ ನಡುವೆ ಬಾಗಲಕೋಟೆ ಜಿಲ್ಲೆ ಬಾಡಗಂಡಿಯ ಬೀಳಗಿ ಸಕ್ಕರೆ ಕಾರ್ಖಾನೆಯ ಪೂರ್ಣಾವಧಿ ನಿರ್ದೇಶಕ ಎಸ್.ಎಸ್.ಪಾಟೀಲ ಅವರುಮಾ.30 ರಂದು ವಿಜಯಪುರ ಜಿಲ್ಲಾಧಿಕಾರಿಗೆ ಪತ್ರವೊಂದನ್ನು ಬರೆದು ಚುನಾವಣೆ ಮುಗಿದ ನಂತರ ಎಲ್ಲವನ್ನೂ ಬೀಳಗಿ ಸಕ್ಕರೆ ಕಾರ್ಖಾನೆಗೆ ಮರಳಿ ಕೊಡಬೇಕು ಎಂದು ಕೋರಿದ್ದಾರೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 5 ಲಕ್ಷ ವಶ: ಹೊಸಪೇಟೆ (ವರದಿ): ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 5.26 ಲಕ್ಷ ನಗದು ಹಣವನ್ನು ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಚೆಕಪೋಸ್ಟ್ ನಲ್ಲಿ ಚುನಾವಣಾ ಸಿಬ್ಬಂದಿ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

₹2 ಲಕ್ಷ ನಗದು , 300 ಶಾಲು ವಶ: (ಗದಗ ವರದಿ): ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹2 ಲಕ್ಷ ಹಣವನ್ನು ಗದಗ ಗ್ರಾಮಾಂತರ ಪೊಲೀಸರು ದುಂದೂರು ಚೆಕ್‌ಪೋಸ್ಟ್‌ನಲ್ಲಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ ತೋರಣಗಲ್‌ಗೆ ತೆರಳುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.

ಗದಗ ನಗರದ ಜೆಟಿ ಎಂಜಿನಿಯರಿಂಗ್‌ ಕಾಲೇಜು ಬಳಿ ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ 300 ಶಾಲುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

₹3.50 ಲಕ್ಷ ನಗದು ವಶ: (ರೋಣ ವರದಿ): ತಾಲ್ಲೂಕಿನ ಹಿರೇಹಾಳ ಚೆಕ್‌ಪೋಸ್ಟ್‌ನಲ್ಲಿ ಕಾರು ಹಾಗೂ ಬೈಕ್‌ ಮೂಲಕ ಸಾಗಿಸುತ್ತಿದ್ದ ದಾಖಲೆ ಇಲ್ಲದ ₹3.50 ಲಕ್ಷ ನಗದನ್ನು ಶುಕ್ರವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. .

₹3.39 ಲಕ್ಷ ವಶ: (ಮುಂಡಗೋಡ ವರದಿ): ಸೂಕ್ತ ದಾಖಲೆ ಇಲ್ಲದೇ ಸ್ಕೂಟಿಯಲ್ಲಿ ವ್ಯಕ್ತಿಯೊಬ್ಬರು ಸಾಗಿಸುತ್ತಿದ್ದ ₹3.39 ಲಕ್ಷ ಹಣವನ್ನು ತಾಲ್ಲೂಕಿನ ಅಗಡಿ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ.

ಸಿದ್ದಾಪುರ ತಾಲ್ಲೂಕಿನ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುವ ವೇಳೆ ದಾಖಲೆ ಇಲ್ಲದೇ ಜೋಗದಿಂದ - ತಾಳಗುಪ್ಪ ದ ಕಡೆಗೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 1.10 ಲಕ್ಷ ನಗದು ಹಣವನ್ನು ಪೊಲೀಸರು
ವಶಪಡಿಸಿಕೊಂಡಿದ್ದಾರೆ.

₹21 ಲಕ್ಷ ನಗದು, 55 ಎಲ್‌ಇಡಿ ಟಿವಿ ವಶ

ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹21 ಲಕ್ಷ ನಗದು ಹಾಗೂ 55 ಎಲ್‌ಇಡಿ ಟಿವಿ, 11 ಸೌಂಡ್ ಸಿಸ್ಟಮ್‌ಗಳನ್ನು ಶುಕ್ರವಾರ
ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಮುಧೋಳದಲ್ಲಿ ₹11 ಲಕ್ಷ, ಜಮಖಂಡಿಯಲ್ಲಿ ₹2.38 ಲಕ್ಷ ಹಾಗೂ ಬೀಳಗಿಯಲ್ಲಿ 7.63 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ನಗರದ ರೈಲ್ವೆ ಗೇಟ್ ಬಳಿ ಹೈದರಾಬಾದ್‌ನಿಂದ ಬಾಗಲಕೋಟೆ ಮಾರ್ಗವಾಗಿ ಹೋಗುತ್ತಿದ್ದ ಕ್ಯಾಂಟರ್‌ನಲ್ಲಿ ಟಿವಿ ಹಾಗೂ ಸೌಂಡ್‌ ಸಿಸ್ಟಮ್‌ಗಳು ಪತ್ತೆಯಾಗಿವೆ. ಸೂಕ್ತ ದಾಖಲೆಗಳನ್ನು ನೀಡದ ಕಾರಣ ಅವುಗಳನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕನ ವಿಚಾರಣೆ ನಡೆಸಲಾಗುತ್ತಿದೆ. ಅಂದಾಜು ₹ 10 ಲಕ್ಷ ಮೌಲ್ಯದ್ದಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದು ನಗರ ಠಾಣೆ ಪೊಲೀಸರು ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.

ದೇವಸ್ಥಾನದ ಹುಂಡಿಗೆ ಹಾಕಲು ಒಯ್ಯುತ್ತಿದ್ದ ₹2 ಲಕ್ಷ ವಶ

ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ): ದೇವಸ್ಥಾನದ ಹುಂಡಿಗೆ ಹಾಕಲು ತೆಗೆದುಕೊಂಡು ಹೊರಟಿದ್ದರು ಎನ್ನಲಾದ ₹ 2 ಲಕ್ಷ ನಗದನ್ನು ಚುನಾವಣಾಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

‘ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ತುಮಕೂರಿನ ಪಾವಗಡದಿಂದ ಬಂದಿದ್ದ ಡಾ. ಶಶಿಕಿರಣ್ ಅವರ ಬಳಿ ದಾಖಲೆ ಇಲ್ಲದ ₹ 2 ಲಕ್ಷ ನಗದು ಪತ್ತೆಯಾಯಿತು. ಧರ್ಮಸ್ಥಳ ಹಾಗೂ ಕಟೀಲು ದೇವಸ್ಥಾನದ
ಹುಂಡಿಗೆ ಹಾಕಲು ಹಣ ತೆಗೆದುಕೊಂಡು
ಹೋಗುತ್ತಿರುವುದಾಗಿ ಅವರು ತಿಳಿಸಿದರು. ಸೂಕ್ತ ದಾಖಲೆ ಇಲ್ಲದ ಕಾರಣ, ಹಣವನ್ನು ವಶಕ್ಕೆ ಪಡೆದು, ವಾಹನವನ್ನು ಬಿಡಲಾಯಿತು’ ಎಂದು ಮೂಲಗಳು ತಿಳಿಸಿವೆ.

₹ 18 ಲಕ್ಷ ವಶ (ನಂಜನಗೂಡು ವರದಿ): ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 18 ಲಕ್ಷವನ್ನು ತಾಲ್ಲೂಕಿನ ತಾಂಡವಪುರ ಚೆಕ್‌ ಪೋಸ್ಟ್‌ ಬಳಿ ಶುಕ್ರವಾರ ಎಸ್‌ಎಸ್‌ಟಿ ತಂಡದ ಅಧಿಕಾರಿ ವಶಕ್ಕೆ ಪಡೆದರು. ಆಂಧ್ರದ ಅಶೋಕ್‌ ಹಣ ಸಾಗಿಸುತ್ತಿದ್ದವರು.

ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದ ₹ 1 ಕೋಟಿ ವಶಕ್ಕೆ

ಕಲಬುರಗಿ: ತಾಲ್ಲೂಕಿನ ಫರಹತಾಬಾದ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಸೂಕ್ತ ದಾಖಲೆ ಇಲ್ಲದ ₹ 1 ಕೋಟಿ ನಗದನ್ನು ಗುರುವಾರ ರಾತ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಫರಹತಾಬಾದ್‌ನಲ್ಲಿ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ರವಿ ಮುಡಬೂಳ ಎಂಬುವರ ಕಾರಿನಲ್ಲಿ ಸಾಗಿಸುತ್ತಿದ್ದ ₹ 1 ಕೋಟಿ ಹಣ ‍ಪತ್ತೆಯಾಯಿತು. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಬಳಿ ಹಣಕ್ಕೆ ಸೂಕ್ತ ದಾಖಲೆಗಳು ಇರಲಿಲ್ಲ. ಕಾರು ಕಲಬುರಗಿಯಿಂದ ಜೇವರ್ಗಿಯತ್ತ ಹೊರಟಿತ್ತು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ತಾಲ್ಲೂಕಿನ ಮುಡಬೂಳ ಚೆಕ್ ಪೋಸ್ಟ್ ಕೇಂದ್ರದ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 101 ಸೀರೆ ಹಾಗೂ ಕಾರನ್ನು ಭೀಮರಾಯನಗುಡಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಪುಟಪಾಕ ತೆಲಂಗಾಣ ಮತ್ತು ಕರ್ನಾಟಕ ಗಡಿ ಚೆಕ್‌ಪೋಸ್ಟ್ ಹತ್ತಿರ ದಾಖಲೆ ಇಲ್ಲದ ₹3.3 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT