ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಎರಡೇ ಸಮುದಾಯದ ಪ್ರಾಬಲ್ಯ!

ಪರಿಷತ್‌: ಒಕ್ಕಲಿಗ, ಲಿಂಗಾಯತರ ಸಂಖ್ಯೆ ಇನ್ನಷ್ಟು ಹೆಚ್ಚಳ?
Last Updated 5 ಡಿಸೆಂಬರ್ 2021, 20:06 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಾಲಿ ಇರುವ 74 ಸದಸ್ಯ ಬಲದಲ್ಲಿ ಶೇಕಡ 54 ರಷ್ಟು (40 ಮಂದಿ) ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಸೇರಿದವರು. ಈಗ 25 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಶೇ 60.86 ರಷ್ಟು ಪಾಲು ಈ ಎರಡು ಸಮುದಾಯಗಳಿಗೇ ಸಿಕ್ಕಿದೆ.

ವಿಧಾನ ಪರಿಷತ್‌ನಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಒಕ್ಕಲಿಗರು ಮತ್ತು ಲಿಂಗಾಯತರೇ ಪ್ರಾಬಲ್ಯ ಹೊಂದಿದ್ದಾರೆ. ಈಗ ತೆರವಾಗುತ್ತಿರುವ 25 ಸ್ಥಾನಗಳಲ್ಲಿ ಈ ಎರಡು ಸಮುದಾಯಗಳ ತಲಾ ಏಳು ಸದಸ್ಯರಿದ್ದಾರೆ. ಆದರೆ, ಹೆಚ್ಚು ಕ್ಷೇತ್ರಗಳಲ್ಲಿ ಈ ಸಮುದಾಯಗಳ ಅಭ್ಯರ್ಥಿಗಳೇ ಕಣದಲ್ಲಿದ್ದಾರೆ. ಚುನಾವಣೆಯ ಬಳಿಕ ಈ ಪ್ರಾತಿನಿಧ್ಯ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಗೋಚರಿಸುತ್ತಿದೆ.

ವಿಧಾನ ಪರಿಷತ್‌ನಲ್ಲಿ ಮೀಸಲಾತಿ ಇಲ್ಲದಿರುವುದು ಎರಡೇ ವರ್ಗಗಳ ಪ್ರಾಬಲ್ಯಕ್ಕೆ ಕಾರಣವಾಗುತ್ತಿದೆ ಎಂಬ ಮಾತು ಈ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಯ ಮುನ್ನೆಲೆಗೆ ಬಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯೂ ವ್ಯಕ್ತವಾಗುತ್ತಿದೆ.

25 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 20 ಕ್ಷೇತ್ರಗಳಿಗೆ ಹಾಗೂ ಜೆಡಿಎಸ್‌ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿವೆ. ಜೆಡಿಎಸ್‌ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಒಕ್ಕಲಿಗ ರನ್ನೇ ಕಣಕ್ಕಿಳಿಸಿದೆ.

ಹಾಲಿ ಸದಸ್ಯರ ಪೈಕಿ 22 ಮಂದಿ (ಶೇ 29.72) ಒಕ್ಕಲಿಗರು ಮತ್ತು 18 ಮಂದಿ ಲಿಂಗಾಯತರು (ಶೇ 24.32) ಇದ್ದಾರೆ. ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ 19 ಮಂದಿ (ಶೇ 25.67) ಇದ್ದು, ಅವರಲ್ಲಿ ಏಳು ಮಂದಿ ಕುರುಬರು. ಈಡಿಗ–ಬಿಲ್ಲವ ಸಮುದಾಯದ ಮೂವರು ಸದಸ್ಯರಿದ್ದರೆ, ಉಳಿದಂತೆ ಸಣ್ಣ ಸಮುದಾಯಗಳ ಒಂಬತ್ತು ಮಂದಿ ಇದ್ದಾರೆ.

ಪರಿಶಿಷ್ಟ ಜಾತಿಯ ನಾಲ್ವರು, ಮೂವರು ಮುಸ್ಲಿಮರು, ಬಂಟ ಮತ್ತು ಕೊಡವ ಸಮುದಾಯಗಳ ತಲಾ ಇಬ್ಬರು, ಪರಿಶಿಷ್ಟ ಪಂಗಡ, ಬ್ರಾಹ್ಮಣ, ಗೌಡ ಸಾರಸ್ವತ ಬ್ರಾಹ್ಮಣ ಮತ್ತು ಜೈನ ಸಮುದಾಯದ ತಲಾ ಒಬ್ಬರು ವಿಧಾನ ಪರಿಷತ್‌ನಲ್ಲಿದ್ದಾರೆ.

ಎಲ್ಲ ಪಕ್ಷಗಳಲ್ಲೂ ಪ್ರಾಬಲ್ಯ: ಈ ಚುನಾವಣೆಯಲ್ಲಿ ಮೂರೂ ಪಕ್ಷಗಳಿಂದ 15 ಮಂದಿ ಒಕ್ಕಲಿಗರು (ಶೇ 32.60), 13 ಮಂದಿ ಲಿಂಗಾಯತರು (ಶೇ 28.26) ಸ್ಪರ್ಧೆಯಲ್ಲಿದ್ದಾರೆ. ಹಿಂದುಳಿದ ವರ್ಗಗಳ ಒಂಬತ್ತು ಮಂದಿ, ಪರಿಶಿಷ್ಟ ಪಂಗಡಗಳ ಇಬ್ಬರು ಹಾಗೂ ಇಬ್ಬರು ಮುಸ್ಲಿಮರಿಗೆ ಅವಕಾಶ ದೊರಕಿದೆ. ಉಳಿದಂತೆ ಸಾಮಾನ್ಯ ವರ್ಗದಲ್ಲಿರುವ ರೆಡ್ಡಿ, ಬಂಟ ಮತ್ತು ವೈಶ್ಯ ಸಮುದಾಯಗಳ ತಲಾ ಒಬ್ಬರನ್ನು ಕಣಕ್ಕಿಳಿಸಲಾಗಿದೆ.

ದಕ್ಷಿಣ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳಿಂದಲೂ ಒಕ್ಕಲಿಗ ಅಭ್ಯರ್ಥಿಗಳೇ ಕಣದಲ್ಲಿದ್ದಾರೆ. ಅದೇ ರೀತಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ಕ್ಷೇತ್ರಗ ಳಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳೇ ಚುನಾವಣಾ ಕಣದಲ್ಲಿ ದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಇತರ ಸಮುದಾಯಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

‘ಅನುಭವ ಮತ್ತು ಅರ್ಹತೆಯ ಮೇಲೆ ವಿಧಾನ ಪರಿಷತ್‌ಗೆ ಸದಸ್ಯರನ್ನು ಆಯ್ಕೆ ಮಾಡಬೇಕೆಂಬ ಕಾರಣದಿಂದ ಸಂವಿಧಾನ ರೂಪಿಸುವಾಗ ಮೀಸಲಾತಿ ಕಲ್ಪಿಸಿರಲಿಲ್ಲ. ಈಗ ಪರಿಷತ್‌ ಸದಸ್ಯರ ಆಯ್ಕೆಯ ಮಾನದಂಡಗಳೇ ಬದಲಾಗಿವೆ. ವಿಧಾನ ಪರಿಷತ್‌ ಚುನಾವಣೆಯಲ್ಲೂ ಹಣ ಮತ್ತು ಜಾತಿ ಲೆಕ್ಕಾಚಾರವೇ ಮುನ್ನೆಲೆಗೆ ಬಂದಿವೆ. ಚಿಂತಕರ ಬದಲಿಗೆ ವೃತ್ತಿಪರ ರಾಜಕಾರಣಿಗಳೇ ವಿಧಾನ ಪರಿಷತ್‌ ಸದಸ್ಯರಾಗು
ತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲವೇ ಜಾತಿಗಳ ಪ್ರಾಬಲ್ಯ ತಪ್ಪಿಸಲು ಉಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು’ ಎನ್ನುತ್ತಾರೆ ಪರಿಷತ್‌ ಸದಸ್ಯರೂ ಆಗಿದ್ದ ಜೆಡಿಎಸ್‌ ಮುಖಂಡ ವೈ.ಎಸ್‌.ವಿ. ದತ್ತ.

‘ಪಕ್ಷಗಳಿಗೂ ಹೊಣೆಗಾರಿಕೆ ಇದೆ’

‘ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶಗಳನ್ನು ಹಂಚಿಕೆ ಮಾಡುವುದು ರಾಜಕೀಯ ಪಕ್ಷಗಳ ಹೊಣೆಗಾರಿಕೆ. ಆದರೆ, ಅರ್ಹತೆ ಇದ್ದರೂ ಕಡೆಗಣಿಸಲಾಗುತ್ತಿದೆ’ ಎಂದು ಪರಿಷತ್‌ನ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಹೇಳುತ್ತಾರೆ.

ವಿಧಾನ ಪರಿಷತ್‌ನಲ್ಲೂ ಎಲ್ಲ ವರ್ಗಗಳಿಗೆ ಮೀಸಲಾತಿ ಒದಗಿಸಬೇಕಿದೆ. ಅದಕ್ಕೆ ಪೂರಕವಾಗಿ ಸಂವಿಧಾನ ತಿದ್ದುಪಡಿಯೂ ಸೇರಿದಂತೆ ಆಗಬೇಕಿರುವ ಕೆಲಸಗಳ ಕುರಿತು ಚರ್ಚೆ ಆಗಲೇಬೇಕಿದೆ. ವಿಧಾನ ಪರಿಷತ್‌ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಕ್ರಿಯೆಯೂ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT