ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ವಂಚನೆ ಪ್ರಕರಣ: ರೋಷನ್‌ ಬೇಗ್‌ ಮನೆಯಲ್ಲಿ ಸಿಬಿಐ ಶೋಧ

ಐಎಂಎ ಜತೆಗಿನ ನಂಟು ಪತ್ತೆಗೆ ದಾಖಲೆಗಳ ಪರಿಶೀಲನೆ
Last Updated 23 ನವೆಂಬರ್ 2020, 19:46 IST
ಅಕ್ಷರ ಗಾತ್ರ

ಬೆಂಗಳೂರು: ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಐ ಮಾನಿಟರಿ ಅಡ್ವೈಸರಿ ಕಂಪನಿ (ಐಎಂಎ) ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಆರ್‌. ರೋಷನ್‌ ಬೇಗ್‌ ಮನೆ ಮೇಲೆ ಸೋಮವಾರ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು, ದಾಖಲೆಗಳಿಗಾಗಿ ಶೋಧ ನಡೆಸಿದರು.

ಕೋಲ್ಸ್‌ ಪಾರ್ಕ್‌ನಲ್ಲಿರುವ ರೋಷನ್‌ ಬೇಗ್‌ ಮನೆಯ ಮೇಲೆ ಸೋಮವಾರ ಬೆಳಿಗ್ಗೆಯೇ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು, ಸಂಜೆಯವರೆಗೂ ಶೋಧ ನಡೆಸಿದರು. ಹಣಕಾಸು ವಹಿವಾಟು, ಐಎಂಎ ಜತೆಗಿನ ನಂಟು, ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳಿಗಾಗಿ ಮನೆಯನ್ನು ಜಾಲಾಡಿದರು.

ಐಎಂಎ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಅಹಮ್ಮದ್ ಖಾನ್‌ನಿಂದ ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ರೋಷನ್‌ ಬೇಗ್‌ರನ್ನು ಭಾನುವಾರ ಬೆಳಿಗ್ಗೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಹೆಚ್ಚಿನ ತನಿಖೆಗಾಗಿ ಮನೆಯಲ್ಲಿ ಶೋಧ ನಡೆಸುವ ಅಗತ್ಯವಿದೆ ಎಂಬ ಕಾರಣ ನೀಡಿದ್ದ ಸಿಬಿಐ ಅಧಿಕಾರಿಗಳು, ಭಾನುವಾರವೇ ಶೋಧನಾ ವಾರೆಂಟ್‌ ಪಡೆದಿದ್ದರು. ಬೆಳಿಗ್ಗೆ ಮನೆಗೆ ತೆರಳಿದ ಅಧಿಕಾರಿಗಳ ತಂಡ ಬೇಗ್‌ ಪತ್ನಿಗೆ ವಾರೆಂಟ್‌ ನೀಡಿ ಮನೆಯಲ್ಲಿ ಶೋಧ ನಡೆಸಿತು ಎಂಬ ಮಾಹಿತಿ ಲಭ್ಯವಾಗಿದೆ.

ಮನ್ಸೂರ್‌ ಖಾನ್‌ ಮತ್ತೆ ವಶಕ್ಕೆ: ಮನ್ಸೂರ್‌ ಅಹಮ್ಮದ್‌ ಖಾನ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕೆಂಬ ಸಿಬಿಐ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿರುವ ವಿಶೇಷ ನ್ಯಾಯಾಲಯ, ನಾಲ್ಕು ದಿನಗಳ ಕಾಲ ವಶಕ್ಕೆ ನೀಡಿದೆ.

ರೋಷನ್‌ ಬೇಗ್‌ ವಿಚಾರಣೆ ವೇಳೆ ಲಭಿಸಿರುವ ಮಾಹಿತಿ ಆಧರಿಸಿ ಮತ್ತೆ ಆತನನ್ನು ವಿಚಾರಣೆ ನಡೆಸಲು ಸಿಬಿಐ ನಿರ್ಧರಿಸಿದೆ. ಸೋಮವಾರ ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆದಿದ್ದಾರೆ. ನ.27ರವರೆಗೂ ಮನ್ಸೂರ್‌ನನ್ನು ಸಿಬಿಐ ವಿಚಾರಣೆ ನಡೆಸಲಿದೆ.

ಬಿಡಿಎ ಕುಮಾರ್‌ ಬಂಧನ: ಮನ್ಸೂರ್‌ ಅಹಮ್ಮದ್‌ ಖಾನ್‌ನಿಂದ ₹ 5 ಕೋಟಿಗೂ ಹೆಚ್ಚು ಹಣ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯಲ್ಲಿದ್ದು, ಸದ್ಯ ಅಮಾನತಿನಲ್ಲಿರುವ ಪಿ.ಡಿ. ಕುಮಾರ್‌ ಅಲಿಯಾಸ್‌ ಬಿಡಿಎ ಕುಮಾರ್‌ ಅವರನ್ನೂ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

ಐಎಂಎ ನಂಟಿನ ದಾಖಲೆ ಬಹಿರಂಗ:
ಐಎಂಎ ಕಂಪನಿಯ ಅವ್ಯವಹಾರ ಕುರಿತು ತನಿಖೆ ಆರಂಭಿಸಿದ್ದ ರಾಜ್ಯದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕಂಪನಿ ಜತೆ ರೋಷನ್‌ ಬೇಗ್‌ ನಂಟು ಹೊಂದಿರುವುದನ್ನು ಪತ್ತೆ ಮಾಡಿತ್ತು. ಬೇಗ್‌ ಒಡೆತನದ ‘ಸಿಯಾಸತ್‌’ ದಿನಪತ್ರಿಕೆ ಕಚೇರಿಯನ್ನು ಐಎಂಎಗೆ ಬಿಟ್ಟುಕೊಟ್ಟಿದ್ದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ರೋಷನ್‌ ಬೇಗ್‌ ಮತ್ತು ಐಎಂಎ ನಡುವಣ ನಂಟಿನ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಐಎಂಎ ಪ್ರಕರಣದ ಸಕ್ಷಮ ಪ್ರಾಧಿಕಾರಿಯಾಗಿರುವ ಐಎಎಸ್‌ ಅಧಿಕಾರಿ ಡಾ.ಹರ್ಷ ಗುಪ್ತ ಅವರು ನವೆಂಬರ್‌ 19ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಸಿಯಾಸತ್‌ ದಿನಪತ್ರಿಕೆ ಕಚೇರಿಯನ್ನೇ ಐಎಂಎ ಒಡೆತನದ ಮಲ್‌ಬೆರಿ ಗ್ರೀನ್ಸ್ ಸೂಪರ್‌ ಮಾರ್ಕೆಟ್‌ಗೆ ಬಳಸಿಕೊಳ್ಳಲಾಗಿತ್ತು. ಬಾಡಿಗೆ ಮುಂಗಡವನ್ನು ಹಿಂದಿರುಗಿಸುವಂತೆ ಕಟ್ಟಡದ ಮಾಲೀಕನಿಗೆ ನೋಟಿಸ್‌ ನೀಡಲಾಗಿತ್ತು. ರೋಷನ್‌ ಬೇಗ್‌ ಒಡೆತನದ ಡಾನಿಷ್‌ ಪಬ್ಲಿಕೇಷನ್ಸ್‌ ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡು ಐಎಂಎಗೆ ನೀಡಿತ್ತು ಎಂಬ ಮಾಹಿತಿಯನ್ನು ಅವರು ನೀಡಿದ್ದರು’ ಎಂದು ಪತ್ರದಲ್ಲಿ ತಿಳಿಸಿದ್ದರು.

ಆರಂಭದಲ್ಲಿ ಬೇಗ್‌ ಕಟ್ಟಡ ಬಾಡಿಗೆಗೆ ಪಡೆದು ಐಎಂಎಗೆ ನೀಡಿದ್ದನ್ನು ನಿರಾಕರಿಸಿದ್ದರು. ಎರಡನೇ ಬಾರಿ ನೀಡಿದ್ದ ನೋಟಿಸ್‌ಗೆ ಉತ್ತರಿಸುವಾಗ ಒಪ್ಪಿಕೊಂಡಿದ್ದರು ಎಂದು ಹರ್ಷ ಗುಪ್ತ ಉಲ್ಲೇಖಿಸಿದ್ದರು. ಸಿಬಿಐ ಮೂಲಕ ಹೆಚ್ಚಿನ ಮಾಹಿತಿ ಪಡೆಯುವಂತೆ ಕಂದಾಯ ಇಲಾಖೆಯನ್ನು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT