ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ರಾಜ್ಯ ಭೇಟಿ: ಸಿ.ಎಂ ಬದಲಾವಣೆ ಸದ್ದು!

ಪದಾಧಿಕಾರಿಗಳ ಸಭೆ ಮಧ್ಯಾಹ್ನ
Last Updated 2 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಒಂದು ದಿನದ ರಾಜ್ಯ ಭೇಟಿಯ ಸಂದರ್ಭದಲ್ಲೇ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಮಾಡಲಾಗುತ್ತದೆ ಎಂಬ ಸದ್ದು ಜೋರಾಗಿದೆ.

ಬಿಜೆಪಿ ವಲಯದಲ್ಲಿ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾಗುತ್ತಾರೆ ಎಂಬ ಸುದ್ದಿ ಎರಡು ದಿನಗಳಿಂದ ಹರಿದಾಡುತ್ತಿದ್ದು, ಸೋಮವಾರ ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಬಂದು ಬಿಟ್ಟಿತ್ತು. ‘ಒಂದು ವರ್ಷದೊಳಗೆ ವಿಧಾನಸಭೆ ಚುನಾವಣೆ ಎದುರಿಸಬೇಕಾಗಿರುವ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಇಂತಹದೊಂದು ಪುಕಾರನ್ನು ಸುಖಾಸುಮ್ಮನೇ ಹಬ್ಬಿಸಲಾಗುತ್ತಿದೆ’ ಎಂದು‍ಪಕ್ಷದ ಮೂಲಗಳು ಪ್ರಬಲವಾಗಿ ಪ್ರತಿಪಾದಿಸುತ್ತವೆ.

ಅಮಿತ್ ಶಾ ಅವರು ಮಂಗಳವಾರ ಕೆಲವು ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ಪಕ್ಷದ ಪದಾಧಿಕಾರಿಗಳನ್ನೂ ಭೇಟಿಯಾಗಲಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು, ಮೈಸೂರಿನಲ್ಲಿ ಮಾತನಾಡುವಾಗ, ‘ಪದೇ ಪದೇ ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ’ ಎಂದು ಹೇಳಿದ್ದು ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗೆ ಪುಷ್ಟಿ ಕೊಟ್ಟಿದೆ. ಆದರೆ, ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ನಿವಾಸದಲ್ಲಿ ಏರ್ಪಡಿಸಿರುವ ಭೋಜನಕೂಟದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಆ ಭೋಜನಕೂಟಕ್ಕೆ ಶಾಸಕರು ಮತ್ತು ಸಂಸದರಿಗೂ
ಆಹ್ವಾನ ನೀಡಲಾಗಿದೆ. ‘ತಾಜ್‌ ವೆಸ್ಟ್‌ಎಂಡ್‌’ ಹೊಟೇಲ್‌ನಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿರುವ ಶಾ,ಚುನಾವಣೆಗೆ ಸಜ್ಜುಗೊಳಿಸಲು ಸರ್ಕಾರ ಮತ್ತು ಪಕ್ಷಕ್ಕೆ ಕೆಲವು ಸಲಹೆ– ಸೂಚನೆಗಳನ್ನು ನೀಡಲಿದ್ದಾರೆ.

‘ಮುಂಬರುವ ದಿನಗಳಲ್ಲಿ ಸರ್ಕಾರದಲ್ಲಿ ಕೆಲ ಬದಲಾವಣೆಯಾಗಲಿದ್ದು, ಮೂರು ಬಗೆಯ ಆಯ್ಕೆಗಳು ವರಿಷ್ಠರ ಮುಂದಿವೆ. ಮೊದಲ ಆಯ್ಕೆ; ಮುಖ್ಯಮಂತ್ರಿ ಮತ್ತು ಕೆಲವು ಹಿರಿಯ ಸಚಿವರ ಬದಲಾವಣೆ, ಎರಡನೇ ಆಯ್ಕೆ ಮುಖ್ಯಮಂತ್ರಿ ಮುಂದುವರಿಸಿ ಶೇ 50 ರಷ್ಟು ಸಚಿವರ ಬದಲಾವಣೆ, ಮೂರನೇ ಆಯ್ಕೆ ಗುಜರಾತ್‌ ಮಾದರಿಯಲ್ಲಿ ಸಂಪೂರ್ಣ ಬದಲಾವಣೆ. ಆಯ್ಕೆ ಯಾವುದೆಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಕಳೆದ ಸಭೆಯಲ್ಲಿ ನೀಡಿದ್ದ ಗುರಿಯನ್ನು ಎಷ್ಟರ ಮಟ್ಟಿಗೆ ಸಾಧಿಸಲಾಗಿದೆ ಎಂಬ ಮಾಹಿತಿಯನ್ನು ಶಾ ಪಡೆಯಲಿದ್ದಾರೆ. ಕರ್ನಾಟಕದ ಚುನಾವಣೆ ಬಗ್ಗೆ ಅವರು ಈಗಾಗಲೇ ತಮ್ಮದೇ ಆದ ರೀತಿಯಲ್ಲಿ ಕೆಲಸ ಆರಂಭಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆ ಇಲ್ಲ: ಬಿಎಸ್‌ವೈ

ಶಿಕಾರಿಪುರ: ನನ್ನ ಪ್ರಕಾರ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಬಸವರಾಜ ಬೊಮ್ಮಾಯಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಸಂತೋಷ್ ಜೀ ಅವರ ಹೇಳಿಕೆ ಬಗ್ಗೆ ಚರ್ಚಿಸುವುದಿಲ್ಲ. ಆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ’ ಎಂದರು.

ಹೊಸಪೇಟೆಯಲ್ಲಿ ಮಾತನಾಡಿದಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ‘ನಮ್ಮ ಪಕ್ಷ ವಿಭಿನ್ನವಾದುದು; ಅದು ನಿಂತ ನೀರಲ್ಲ ಎಂಬ ದೃಷ್ಟಿಕೋನದಿಂದ ಬಿ.ಎಲ್‌. ಸಂತೋಷ್‌ ಅವರು ಪಕ್ಷದಲ್ಲಿನ ಬದಲಾವಣೆ ಕುರಿತು ಮಾತುಗಳನ್ನಾಡಿದ್ದಾರೆ. ರಾಜ್ಯದಲ್ಲಿ ಸದ್ಯ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT