ಶುಕ್ರವಾರ, ಡಿಸೆಂಬರ್ 2, 2022
23 °C
ಶೇ 40 ಕಮಿಷನ್‌: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ತಿರುಗಿಬಿದ್ದ ಸಚಿವರ ದಂಡು

ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರೇ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗುತ್ತಿಗೆದಾರರ ಸಂಘ ಮಾಡಿರುವ ಶೇ 40 ರಷ್ಟು ಕಮಿಷನ್‌ ಆರೋಪದ ವಿರುದ್ಧ ಒಗ್ಗಟ್ಟಿನಿಂದ ತಿರುಗಿಬಿದ್ದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸದಸ್ಯರು, ‘ತನಿಖಾ ಸಂಸ್ಥೆಗೆ ದೂರು ನೀಡಲಿ’ ಎಂದು ಸವಾಲು ಹಾಕಿದ್ದಾರೆ. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ ಬಳಿಕ ಮಾತನಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ‘ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಭ್ರಷ್ಟರು’ ಎಂದು ಆರೋಪಿಸಿದ್ದರು. ಆ ಆರೋಪಕ್ಕೆ ಧ್ವನಿಗೂಡಿಸಿದ್ದ ಸಿದ್ದರಾಮಯ್ಯ, ‘ಯಾವುದೇ ಭ್ರಷ್ಟಾಚಾರ ಮಾಡಿಲ್ಲವೆಂದರೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಸಮಸ್ಯೆಯೇನು’ ಎಂದು ಪ್ರಶ್ನಿಸಿದ್ದರು.

ಗುರುವಾರ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ‘ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರೇ? ಈ ಹಿಂದೆ ಭ್ರಷ್ಟಾಚಾರ ಆಗಿತ್ತು ಎಂದೂ ಅವರು ಹೇಳುತ್ತಾರೆ. ಹಾಗಾದರೆ ಇಷ್ಟು ದಿನ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಇದ್ರಾ’ ಎಂದು ಕಿಡಿಕಾರಿದರು.

‘ಕೆಂಪಣ್ಣ ಒಂದು ವರ್ಷದಿಂದ ಆರೋಪ ಮಾಡುತ್ತಲೇ ಬಂದಿದ್ದರೂ ನಿಖರವಾಗಿ ಯಾವೊಬ್ಬ ಸಚಿವರ ಮೇಲೂ ಆರೋಪ‌ ಮಾಡಿರಲಿಲ್ಲ. ಈಗ ಮುನಿರತ್ನ ವಿರುದ್ಧ ಆರೋಪ‌ ಮಾಡಿದ್ದಾರೆ. ಈ ಆರೋಪ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳಿಲ್ಲದ ರಾಜಕೀಯ ಪ್ರೇರಿತ ಬೇಜವಾಬ್ದಾರಿ ಹೇಳಿಕೆ’ ಎಂದರು.

ಹುಚ್ಚಾಸ್ಪತ್ರೆಗೆ ಸೇರಿಸಬೇಕು: ‘ಕೆಂಪಣ್ಣ ಅವರನ್ನು ಹುಚ್ಚಾಸ್ಪತ್ರೆಗೆ
ಸೇರಿಸಿ ಚಿಕಿತ್ಸೆ ಕೊಡಿಸುವುದು ಒಳ್ಳೆಯದು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಗರಂ ಆದರು.

‘ಅವರ ಆರೋಪ ಕಾಂಗ್ರೆಸ್ ಪ್ರಾಯೋಜಿತ ಎನ್ನುವುದು ಸ್ಪಷ್ಟ. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಹೇಳುವ ಅವರು ದೂರು ಕೊಡಬೇಕಲ್ಲವೇ. ದಾಖಲೆ ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಎಲ್ಲವೂ ಸದ್ಯದಲ್ಲೇ ಹೊರಬರಲಿದೆ: ‌‘ಸರ್ಕಾರದ ಮೇಲೆ ಶೇ 40 ರಷ್ಟು ಕಮಿಷನ್ ಆರೋಪದ ಹಿಂದೆ ನಿರ್ದೇಶಕರು, ನಿರ್ಮಾಪಕರು, ಸೂತ್ರಧಾರಿಗಳು ಯಾರ‍್ಯಾರು ಇದ್ದಾರೋ ಎಲ್ಲವೂ ಸದ್ಯದಲ್ಲೇ ಹೊರಬರಲಿದೆ. ಬಿಬಿಎಂಪಿ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರಕ್ಕೆ ಕಪ್ಪುಚುಕ್ಕೆ ತರಬೇಕೆಂಬ ದುರದ್ದೇಶದಿಂದ ಕೆಂಪಣ್ಣ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

‘ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್ ಪಡೆದಿದ್ದರೆ ಅಥವಾ ಸಚಿವರು, ಶಾಸಕರು ಇಂತಿಷ್ಟೇ ಕಮಿಷನ್ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರೆ ಮುಖ್ಯಮಂತ್ರಿ ಇಲ್ಲವೇ ತನಿಖಾ ಸಂಸ್ಥೆಗೆ ದೂರು ಕೊಡಲಿ. ಅದನ್ನು ಬಿಟ್ಟು ವಿರೋಧ ಪಕ್ಷದ ನಾಯಕರ ಮನೆಯಲ್ಲಿ ಸಭೆ ನಡೆಸಿ, ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡುವುದು ಎಷ್ಟು ಸರಿ’ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು