ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುತ್ತಿವೆ: ಬಿ.ಎಸ್‌. ಯಡಿಯೂರಪ್ಪ

ರೈತ ಸಂಘಟನೆಗಳ ಜತೆ ಮುಕ್ತ ಚರ್ಚೆಗೆ ಸಿದ್ಧ
Last Updated 29 ಸೆಪ್ಟೆಂಬರ್ 2020, 7:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಸಂಬಂಧಿ ಮಸೂದೆಗಳಿಗೆ ತಂದಿರುವ ತಿದ್ದುಪಡಿಗಳಲ್ಲಿ ಎಳ್ಳಷ್ಟೂ ರೈತವಿರೋಧಿ ಅಂಶಗಳಿಲ್ಲ. ವಿರೋಧ ಪಕ್ಷಗಳು ರಾಜಕೀಯ ದುರುದ್ದೇಶದಿಂದ ರೈತರನ್ನು ದಿಕ್ಕು ತಪ್ಪಿಸುತ್ತಿವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ (ಎಪಿಎಂಸಿ) ಕಾಯ್ದೆ ಮತ್ತು ಭೂಸುಧಾರಣಾ ಕಾಯ್ದೆಗಳ ತಿದ್ದುಪಡಿಗಳು ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಪೂರಕವಾಗಿವೆ. ಹಿಂದೆ ಇದೇ ತಿದ್ದುಪಡಿ ಪ್ರಸ್ತಾವಗಳನ್ನು ಸಿದ್ಧಪಡಿಸಿದ್ದ ಕಾಂಗ್ರೆಸ್‌ ನಾಯಕರೇ ಈಗ ವಿರೋಧಿಸಿ, ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ’ ಎಂದು ಹೇಳಿದರು.

‘ಎಪಿಎಂಸಿ ಕಾಯ್ದೆಯ ತಿದ್ದುಪಡಿಯಿಂದ ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರುವ ಸ್ವಾತಂತ್ರ್ಯ ಪಡೆದಿದ್ದಾರೆ. ದಲ್ಲಾಳಿಗಳ ಹಿಡಿತದಿಂದ ಕೃಷಿಕರು ಬಿಡುಗಡೆಯಾಗುತ್ತಾರೆ. ಹಿಂದೆ ಕಾಂಗ್ರೆಸ್ ಪಕ್ಷವೇ ಈ ತಿದ್ದುಪಡಿ ತರಲು ಹೊರಟಿತ್ತು. ರಿಲಯನ್ಸ್‌ನಂತಹ ಕಂಪನಿಗಳಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕೊಟ್ಟವರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲಿ’ ಎಂದು ಸವಾಲು ಹಾಕಿದರು.

ಕೃಷಿ ಹೆಚ್ಚಲಿದೆ: ‘ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ಕೂಡ ರೈತರ ಪರವಾಗಿಯೇ ಇದೆ. ರಾಜ್ಯದಲ್ಲಿ 18 ಲಕ್ಷ ಎಕರೆ ಕೃಷಿ ಜಮೀನು ಸಾಗುವಳಿ ಆಗದೇ ಪಾಳು ಬೀಳುತ್ತಿದೆ. ಈಗ ತಂದಿರುವ ತಿದ್ದುಪಡಿ ಯಾರು ಬೇಕಾದರೂ ಕೃಷಿ ಜಮೀನು ಖರೀದಿಸಲು ಅವಕಾಶ ಒದಗಿಸಲಿದೆ.‌ ಇದರಿಂದಾಗಿ ಕೃಷಿ ಹೆಚ್ಚಲಿದೆ’ ಎಂದು ಯಡಿಯೂರಪ್ಪ ಹೇಳಿದರು.

‘ನೀರಾವರಿ ಜಮೀನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು, ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಏನು ಹೇಳುತ್ತಿದ್ದಾರೆ‌ ಎಂಬುದು ಜನರಿಗೆ ಗೊತ್ತಿದೆ. ಅವರ ಪಕ್ಷವೇ ಈ ತಿದ್ದುಪಡಿಗಳ ಪ್ರಸ್ತಾವ ಸಿದ್ಧಪಡಿಸಿತ್ತು ಎಂಬುದನ್ನು ಕಂದಾಯ ಸಚಿವ ಆರ್. ಅಶೋಕ ಅವರು ವಿಧಾನಮಂಡಲದಲ್ಲಿ ದಾಖಲೆಸಹಿತ ನಿರೂಪಿಸಿದ್ದಾರೆ. ಈಗ ಕಾಂಗ್ರೆಸ್‌ ನಾಯಕರು ಸುಳ್ಳು ಹೇಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಚರ್ಚೆಗೆ ಸಿದ್ಧ: ‘ಎರಡೂ ಕಾಯ್ದೆಗಳ ವಿಷಯದಲ್ಲಿ ರೈತ ಸಂಘಟನೆಗಳ ಜತೆ ಮುಕ್ತ ಚರ್ಚೆಗೆ ಸಿದ್ಧ. ರೈತರ ಅನುಕೂಲದ ದೃಷ್ಟಿಯಿಂದ ತಿದ್ದುಪಡಿ ಅಗತ್ಯವಿದ್ದರೆ ಅದನ್ನೂ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT