ಬುಧವಾರ, ಅಕ್ಟೋಬರ್ 28, 2020
28 °C

ನಿರ್ಮಲಾ ಸೀತಾರಾಮನ್ ಭೇಟಿಯಾದ ಸಿ.ಟಿ.ರವಿ: ವಿಶೇಷ ಪ್ಯಾಕೇಜ್ ಘೋಷಣೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

CT ravi meets Nirmala Sitharaman

ನವದೆಹಲಿ: ಸತತ ಬರಗಾಲ, ಭಾರಿ ಪ್ರವಾಹ ಹಾಗೂ ರೋಗಗಳಿಂದ ತತ್ತರಿಸಿ ಹೋಗಿರುವ ಚಿಕ್ಕಮಗಳೂರು ಜಿಲ್ಲೆಯ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು  ಮತ್ತು ರೈತರು ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರ ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸಚಿವ ಸಿ.ಟಿ.ರವಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಜಿಲ್ಲೆಯ ಕಾಫಿ ಬೆಳೆಗಾರರು ಮತ್ತು ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದ ಸಚಿವ ರವಿ ಅವರು, ಕೂಡಲೇ ವಿಶೇಷ ಪ್ಯಾಕೇಜ್ ಘೋಷಿಸಿ  ಹಿತ ಕಾಪಾಡುವಂತೆ ಮನವಿ ಮಾಡಿದರು.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು ಸತತ ಎರಡು ವರ್ಷದಿಂದ ಪ್ರವಾಹ ಉಂಟಾಗಿ ಕಂಗಾಲಾಗಿದ್ದಾರೆ. ಬೆಳೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಇದರಿಂದ ಸಾವಿರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಈ ಹಿಂದೆ 2015-16, 2016-17, 2017-18ರಲ್ಲಿ ಉಂಟಾದ ಬರಗಾಲ ಹಾಗೂ 2019-20ರಲ್ಲಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿ ಬೆಳೆದು ನಿಂತಿದ್ದ ಕಾಫಿ, ಅಡಿಕೆ, ಮೆಣಸು, ಏಲಕ್ಕಿ, ಬಾಳೆ, ಭತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಸಿ.ಟಿ.ರವಿ ವಿವರಿಸಿದರು.

ಇದರ ಜತೆಗೆ ಈ ಬಾರಿ ರಾಜ್ಯದಲ್ಲಿ ಕೋವಿಡ್-19 ಸೋಂಕು ಬಂದ ಪರಿಣಾಮ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಒಂದಾದ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇರುವುದರಿಂದ ಸರ್ಕಾರ ನೆರವಿಗೆ ಧಾವಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ, ಅಲ್ಪಾವಧಿ ಬೆಳೆ ಸಾಲ ವಿತರಣೆ, ಕೃಷಿ ಬೆಳೆ ಸಾಲದ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಳ ಮಾಡುವುದು, ಪ್ರಸಕ್ತ ವರ್ಷ ರೈತರಿಗೆ ನೀಡುವ ಸಾಲಕ್ಕೆ ಬಡ್ಡಿ ವಿಧಿಸದಿರುವುದು, ಕಾಫಿ ಮಂಡಳಿಗೆ ಬಾಕಿ ಇರುವ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡುವುದು, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಮತ್ತಿತರ ವಸ್ತುಗಳಿಗೆ ಜಿಎಸ್‍ಟಿಯಿಂದ ವಿನಾಯ್ತಿ ಹಾಗೂ ರಸಗೊಬ್ಬರಗಳಿಗೆ ಸಹಾಯಧನವನ್ನು ಘೋಷಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಶೇಷವಾಗಿ ಸಣ್ಣ ಕಾಫಿ ಬೆಳೆಗಾರರಿಗೆ ಆದಾಯ ತೆರಿಗೆ ನಿಯಮ 1961ರ ನಿಯಮ 7 ಬಿ(1) ರದ್ದುಗೊಳಿಸುವುದು ಸೇರಿದಂತೆ ಹಲವು ರೀತಿಯ ರಿಯಾಯ್ತಿಗಳನ್ನು ನೀಡಬೇಕೆಂದು ಸಿ.ಟಿ.ರವಿ ಕೇಳಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 15 ಸಾವಿರ ಕಾಫಿ ಬೆಳೆಗಾರರಿದ್ದು, ಶೇ.90ರಷ್ಟು ಮಂದಿ ನಾಲ್ಕು ಹೆಕ್ಟೇರಿಗಿಂತ ಕಡಿಮೆ ಭೂಮಿ ಹೊಂದಿದವರಾಗಿದ್ದಾರೆ. ಪ್ರತಿ ವರ್ಷ ಸುಮಾರು ಒಂದು ಸಾವಿರ ಕೋಟಿಗೂ ಅಧಿಕ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಹೀಗಾಗಿ ಅವರ ಹಿತ ಕಾಪಾಡಬೇಕೆಂದು ಅವರು ಆಗ್ರಹಿಸಿದರು.

ಸಕಾರಾತ್ಮಕ ಸ್ಪಂದನೆ: ಸುಮಾರು 30ನಿಮಿಷಕ್ಕೂ ಹೆಚ್ಚು ಕಾಲ ಸಚಿವ ಸಿ.ಟಿ.ರವಿ ಅವರ ಮನವಿಯನ್ನು ಸಹನೆಯಿಂದ ಆಲಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಆಶ್ವಾಸನೆ ನೀಡಿದರು.

ಮುಂದಿನ ವಾರ ಕಾಫಿ ಬೆಳೆಗಾರರ ಪ್ರತಿನಿಧಿಗಳ ಜತೆ ವೆಬಿನಾರ್ (ವಿಡಿಯೊ ಕಾನ್ಫರೆನ್ಸ್) ನಡೆಸಲಾಗುವುದು. ನಂತರ ಅಧಿಕಾರಿಗಳ ಜತೆ ಚರ್ಚಿಸಿ ವಿಶೇಷ ಪ್ಯಾಕೇಜ್ ಇಲ್ಲವೇ ಆರ್ಥಿಕ ನೆರವು ಬಿಡುಗಡೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾಫಿ ಬೆಳೆಗಾರರ ಸಂಕಷ್ಟ ತಮಗೆ ಮನವರಿಕೆಯಾಗಿದ್ದು, ಯಾರೊಬ್ಬರೂ ದೃತಿಗೆಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ನಿರ್ಮಲಾಸೀತಾರಾಮನ್ ಹೇಳಿದ್ದಾರೆ.

ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು