ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕೆ ಹೇಡಿಯಲ್ಲ, ಧೈರ್ಯವಂತೆ; ಲಕ್ಷ್ಮಿ ಸಾವಿನ ಬಗ್ಗೆ ಸಂಬಂಧಿಕರ ಅನುಮಾನ

ಹುಟ್ಟೂರಿನಲ್ಲಿ ಮಡುಗಟ್ಟಿದ ಮೌನ
Last Updated 17 ಡಿಸೆಂಬರ್ 2020, 21:40 IST
ಅಕ್ಷರ ಗಾತ್ರ

ಮಾಲೂರು (ಕೋಲಾರ): ‘ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಗಂಡು ಮಗನಂತೆ ಧೈರ್ಯವಂತೆ. ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಮನೆಯಲ್ಲೆ ಮಾಡಿಕೊಳ್ಳುತ್ತಿದ್ದಳು. ಸ್ನೇಹಿತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವೇನಿತ್ತು’ ಎಂದು ಸಿಐಡಿ ಡಿವೈಎಸ್‌ಪಿ ಲಕ್ಷ್ಮಿ ಸಾವಿನ ಬಗ್ಗೆ ಅವರ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಿ ಹುಟ್ಟೂರಾದ ಮಾಲೂರು ತಾಲ್ಲೂಕಿನ ತುರುವಾಲಟ್ಟಿ ಗ್ರಾಮದಲ್ಲಿ ಕುಟುಂಬದ ಸದಸ್ಯರು ಆಡಿದ ಮಾತುಗಳಿವು.

ಲಕ್ಷ್ಮಿ ಅವರ ಸ್ವಗ್ರಾಮ ತುರುವಾಲಟ್ಟಿಯಲ್ಲಿ ಮೌನ ಮಡುಗಟ್ಟಿದೆ. ಮನೆಯಲ್ಲಿ ನೆರೆದಿರುವ ಸಂಬಂಧಿಕರು, ಆಪ್ತರು, ಕುಟುಂಬದ ಸ್ನೇಹಿತರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.

‘ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಮನೆಯಲ್ಲೆ ಮಾಡಿಕೊಳ್ಳುತ್ತಿದ್ದಳು.ಆಕೆಗೆ ಯಾರೊ ಏನೋ ಮಾಡಿದ್ದಾರೆ’ ಎಂದು ಲಕ್ಷ್ಮಿ ಅವರ ದೊಡ್ಡಮ್ಮ ತುರುವಾಲಟ್ಟಿ ಗ್ರಾಮದ ನಾರಾಯಣಮ್ಮ ಹೇಳಿದರು.

‘ಆಕೆ ಸ್ನೇಹಿತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಅನುಮಾನವಿದೆ. ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಆಕೆಗೆ ಸ್ವಲ್ಪ ಕೋಪ ಜಾಸ್ತಿಯಾಗಿತ್ತು. ಆದರೆ, ಹೀಗೆ ಮಾಡಿಕೊಳ್ಳುವಂತ ಮಗಳಲ್ಲ’ ಎಂದು ಕಣ್ಣೀರು ಹಾಕಿದರು.

‘ಭಾನುವಾರ ಊರಿಗೆ ಬರುವುದಾಗಿ ಹೇಳಿದ್ದಳು. ಆದ್ರೆ ಅಷ್ಟರಲ್ಲಿ ಹೀಗಾಗಿದೆ. ಮಕ್ಕಳು ಇಲ್ಲ ಎಂದು ಕೊರಗುವ ಮಗಳಲ್ಲ ಆಕೆ. ಇನ್ನೂ ಇಲಾಖೆಯ ಬಡ್ತಿ ವಿಚಾರ ಗೊತ್ತಿಲ್ಲ’ ಎಂದರು.

‘ನನಗೆ ಏನೂ ಗೊತ್ತಿಲ್ಲ. ನನ್ನ ತಮ್ಮ (ಲಕ್ಷ್ಮಿ ಅಪ್ಪ ವೆಂಕಟೇಶ್‌) ಫೋನ್ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾತ್ರಿ ತಿಳಿಸಿದ’ ಎಂದು ಲಕ್ಷ್ಮಿದೊಡ್ಡಪ್ಪ ನಾರಾಯಣಪ್ಪ ಮೌನಕ್ಕೆ ಜಾರಿದರು.

‘ಆಕೆ ಬೆಳೆದಿದ್ದು ಓದಿದ್ದು, ಬೆಂಗಳೂರು ಮತ್ತು ಚಿಕ್ಕಮಗಳೂರಲ್ಲಿ. ಸಮಯ ಸಿಕ್ಕಾಗ ಮನೆಗೆ ಊಟಕ್ಕೆ ಬರುತ್ತೇನೆ ಎಂದಿದ್ದಳು’ ಎಂದು ಕಣ್ಣೀರಾದರು.

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಡಿವೈಎಸ್ ಪಿ ಲಕ್ಷ್ಮಿ ಅವರ ಅಂತ್ಯಕ್ರಿಯೆ ಮಾಲೂರು ತಾಲ್ಲೂಕಿನ ಸ್ವಗ್ರಾಮ ತುರುವಾಲಟ್ಟಿಯಲ್ಲಿ ಗುರುವಾರ ರಾತ್ರಿ ಸರ್ಕಾರಿ ಗೌರವದೊಂದಿಗೆ ನಡೆಯಿತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಲಕ್ಷ್ಮಿ ಅವರ ತಂದೆ ವೆಂಕಟೇಶ್‌ ಅವರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT