ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪರಿಷ್ಕರಣೆ: ಬೊಮ್ಮಾಯಿ ಸಲಹೆ

ಪ್ರವಾಹ, ಭೂಕುಸಿತ: ಹೆಚ್ಚಿನ ಪರಿಹಾರ ನೀಡಲು ಶಿಫಾರಸು ಮಾಡಿ
Last Updated 4 ಸೆಪ್ಟೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಲ್ಕು ವರ್ಷದಿಂದ ಪ್ರವಾಹ, ಭೂಕುಸಿತ ಎದುರಿಸುತ್ತಿದ್ದೇವೆ. ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಪರಿಹಾರ ಮಾರ್ಗಸೂಚಿ ಬದಲಿಸಿ ರಾಜ್ಯಕ್ಕೆ ಹೆಚ್ಚುವರಿ ಪರಿಹಾರ ನೀಡಲು ಶಿಫಾರಸು ಮಾಡಬೇಕು’ ಎಂದು ಪ್ರವಾಹ ಅಧ್ಯಯನಕ್ಕೆ ಬಂದ ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಮುಖ್ಯಮಂತ್ರಿ ಅವರನ್ನು ಕೇಂದ್ರ ಗೃಹ ಸಚಿವಾಲಯದ ಸುಶೀಲ್ ಪಾಲ್ ನೇತೃತ್ವದ ತಂಡ ಶನಿವಾರ ಭೇಟಿ ಮಾಡಿ ರಾಜ್ಯದಲ್ಲಿ ಅತಿವೃಷ್ಟಿ ಯಿಂದ ಉಂಟಾಗಿರುವ ಹಾನಿ ಕುರಿತು ಚರ್ಚೆ ನಡೆಸಿತು.

‘ಪ್ರವಾಹ ಸಂತಸ್ತರಿಗೆ ರಕ್ಷಣೆ ಮತ್ತು ತುರ್ತು ಪರಿಹಾರವನ್ನು ಸರ್ಕಾರ ನೀಡಿದೆ. ಆದರೆ, ಜನರ ಪುನರ್ವಸತಿಗೆ ಹೆಚ್ಚಿನ ನೆರವಿನ ಅಗತ್ಯವಿದೆ. ಉತ್ತರ ಕನ್ನಡ ಜಿಲ್ಲೆಯ ಹಾನಿ ಪರಿಶೀಲಿಸಿ ₹ 100 ಕೋಟಿ ತಕ್ಷಣ ಬಿಡುಗಡೆ ಮಾಡಿದ್ದು, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಿಗೆ ₹ 500 ಕೋಟಿ ಒದಗಿಸಲಾಗಿದೆ’ ಎಂದು ಬೊಮ್ಮಾಯಿ ಹೇಳಿದರು.

‘ವಾಸ್ತವಾಂಶಗಳನ್ನು ಕೇಂದ್ರ ತಂಡದ ಮುಂದಿಡಲಾಗಿದೆ. ಈಗ ಕ್ಷಣ ಕ್ಷಣದ ಮಾಹಿತಿ ಕೇಂದ್ರಕ್ಕೂ ಲಭ್ಯವಿದೆ. ನಾಲ್ಕು ವರ್ಷಗಳಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪ್ರತಿವರ್ಷ ಕುಟುಂಬಗಳ ಸ್ಥಳಾಂತರ, ಮನೆ ಕಳೆದುಕೊಳ್ಳುವ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ’ ಎಂದು ಹೇಳಿದರು.

‘15 ವರ್ಷಗಳಲ್ಲಿ ರಸ್ತೆ, ವಿದ್ಯುತ್ ಮತ್ತಿತರ ಸಾರ್ವಜನಿಕ ಸೌಲಭ್ಯಗಳಿಗೆ ಭಾರಿ ಹೂಡಿಕೆ ಮಾಡಲಾಗಿದೆ. ಅವುಗಳನ್ನು ಮರು ಸ್ಥಾಪಿಸುವುದು ಸವಾಲಿನ ಕೆಲಸ. ಪ್ರವಾಹದಿಂದ ಬೆಳೆ ನಷ್ಟವಾಗಿ ರೈತರು ತೊಂದರೆ ಅನುಭವಿಸಿದ್ದಾರೆ. ಆದ್ದರಿಂದ, ರಾಜ್ಯಕ್ಕೆ ಗರಿಷ್ಠ ಪ್ರಮಾಣದ ನೆರವು ನೀಡಬೇಕು’ ಎಂದು ಮನವಿ ಮಾಡಿದರು.

ಸುಶೀಲ್ ಪಾಲ್ ಮಾತನಾಡಿ, ‘ರಾಜ್ಯ ಸರ್ಕಾರ ವಸ್ತುನಿಷ್ಠ ವರದಿ ಸಲ್ಲಿಸಿದೆ’ ಎಂದರು.

‘ತುರ್ತು ಬೆಳೆ ಪರಿಹಾರ ₹ 38.65 ಕೋಟಿ’
‘ರಾಜ್ಯದ 15 ಜಿಲ್ಲೆಗಳ 86 ತಾಲ್ಲೂಕುಗಳನ್ನು ಪ್ರವಾಹಪೀಡಿತ ಎಂದು‌ ಘೋಷಿಸಿದ್ದು, ₹ 5,690 ಕೋಟಿ ನಷ್ಟ ಅಂದಾಜಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಸುಮಾರು ₹ 765.84 ಕೋಟಿ ನಷ್ಟ ಆಗಿದೆ’ ಎಂದು ಕಂದಾಯ‌ ಸಚಿವ ಆರ್‌. ಅಶೋಕ ಹೇಳಿದರು.

ವಿಪತ್ತು ಪರಿಹಾರ ಘಟಕದ ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬೆಳೆ ಪರಿಹಾರ ನೀಡಲು 13 ಜಿಲ್ಲೆಗಳ 45,586 ಫಲಾನುಭವಿಗಳನ್ನು ಗುರುತಿಸಿದ್ದು, ₹ 38.65 ಕೋಟಿಗೆ ಅನುಮೋದನೆ ನೀಡಲಾಗಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT