ಗುರುವಾರ , ಮಾರ್ಚ್ 30, 2023
24 °C
ಬೆಂಗಳೂರು ಗ್ರಾಮಾಂತರ ಗರಿಷ್ಠ ಶೇ 39.66; ಚಿತ್ರದುರ್ಗ ಕನಿಷ್ಠ ಶೇ 2.25

ಶಾಸಕರ ‘ನಿಧಿ’ ಬಳಕೆಯಲ್ಲಿ ಹಿಂದೆ: ಸಿಎಂ ಅತೃಪ್ತಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕರ ನಿಧಿ) ನಿಗದಿಪಡಿಸಿದ ವಾರ್ಷಿಕ ₹ 2 ಕೋಟಿ ಅನುದಾನ ಪಡೆದುಕೊಳ್ಳಲು ಪ್ರತಿ ವಿಧಾನಮಂಡಲ ಅಧಿವೇಶನಗಳಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತುವ ಶಾಸಕರು, ಹೀಗೆ ಮಂಜೂರಾದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವ ವಿಷಯದಲ್ಲಿ ಭಾರಿ ಹಿಂದುಳಿದಿದ್ದಾರೆ.

ಇದೀಗ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರಿಗೆ ಪತ್ರ ಬರೆದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಜುಲೈ 2021ರವರೆಗೆ ಸರಾಸರಿ ಶೇ 17.21ರಷ್ಟು ಮಾತ್ರ ಆರ್ಥಿಕ ಪ್ರಗತಿ ಆಗಿರುವುದನ್ನು ನಾನು ಗಮನಿಸಿದ್ದೇನೆ. ಜಿಲ್ಲಾವಾರು ವಿವರವನ್ನೂ ನೀಡಿದ್ದೇನೆ. ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಯಲ್ಲಿ ಪ್ರಸ್ತುತ ಒಟ್ಟು ₹938.15 ಕೋಟಿ ಅನುದಾನ ಲಭ್ಯವಿದೆ’ ಎಂದು ಸೆ. 6ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ಅತೀ ಹೆಚ್ಚು ಪ್ರಗತಿ ಬೆಂಗಳೂರು ಗ್ರಾಮಾಂತರ, ಅತೀ ಕಡಿಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಆಗಿದೆ. ಪ್ರತಿಯೊಬ್ಬ ಶಾಸಕರ ಖಾತೆಯಲ್ಲಿ ಲಭ್ಯ ಇರುವ ಅನುದಾನ ಮತ್ತು ಖರ್ಚು ಆಗಿರುವ ಮೊತ್ತದ ಮಾಹಿತಿಯನ್ನೂ ಈ ಪತ್ರದ ಜೊತೆಗೆ ನಿಮಗೆ ನೀಡಿದ್ದೇನೆ. ಈ ಪೈಕಿ, ಧಾರವಾಡದ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಅವರ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ 63.03 ಪ್ರಗತಿ ಆಗಿದೆ. ಆದರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಕ್ಷೇತ್ರಗಳಲ್ಲಿನ ಪ್ರಗತಿ ಶೂನ್ಯ’ ಎಂದೂ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ.

‘ಈ ಯೋಜನೆಯಡಿ ಪ್ರಸಕ್ತ ವರ್ಷದ (2021–22) ಎರಡು ಕಂತು (ಒಟ್ಟು ತಲಾ ₹1 ಕೋಟಿ) ಅನುದಾನವನ್ನು ಎಲ್ಲ ಶಾಸಕರ ಖಾತೆಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಯೋಜನೆಯ ಮಾರ್ಗಸೂಚಿ ಅನ್ವಯ, ಪ್ರತಿ ವರ್ಷ ಜೂನ್‌ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ತಲಾ ₹ 2 ಕೋಟಿವರೆಗಿನ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಪ್ರಸ್ತಾವಿತ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದರೂ ಸುಮಾರು ವರ್ಷಗಳಿಂದ ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಳಿಸದೇ ಇರುವ ಪರಿಸ್ಥಿತಿ ಕಂಡುಬಂದಿದೆ’ ಎಂದೂ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಅನುದಾನ ಕಡಿತ– ಹೊರಟ್ಟಿ ಸಭೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಬಿಡುಗಡೆ ಆಗಿರುವ ಅನುದಾನ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಬಳಕೆಯಾಗದೇ ಉಳಿದಿದ್ದರೂ, 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಅನುದಾನ ಕಡಿತ
ಮಾಡಲಾಗಿದೆ ಎಂದು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಇತ್ತೀ ಚೆಗೆ ಸಭೆ ಸೇರಿ ಪರಿಷತ್‌ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು!

ಹೀಗಾಗಿ, ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅಡ್ಡಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲು ತಮ್ಮ ಅಧ್ಯಕ್ಷತೆಯಲ್ಲಿ ವಿವಿಧ ಪಕ್ಷಗಳ ಐವರು ಸದಸ್ಯರನ್ನು (ಕೆ.ಸಿ. ಕೊಂಡಯ್ಯ, ಎಸ್. ರವಿ, ತೇಜಸ್ವಿನಿ ಗೌಡ, ನಿರಾಣಿ ಹಣಮಂತ ರುದ್ರಪ್ಪ, ಅಪ್ಪಾಜಿಗೌಡ) ಒಳಗೊಂಡ ಸಮಿತಿಯನ್ನು ಹೊರಟ್ಟಿ ರಚಿಸಿದ್ದರು.

ಸಮಿತಿಯ ಸಭೆಯಲ್ಲಿ ಭಾಗವಹಿ ಸಿದ್ದ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಅಧಿಕಾರಿಗಳು, ‘20018–19 ರಲ್ಲಿ ₹ 127.69 ಕೋಟಿ, 2019– 20 ರಲ್ಲಿ ₹ 303.91 ಕೋಟಿ ಬಿಡುಗಡೆಗೆ ಬಾಕಿ ಇದೆ. ಕಳೆದ ಸಾಲಿನಲ್ಲಿ (2020–21) ಪ್ರತಿ ಕ್ಷೇತ್ರಕ್ಕೆ ತಲಾ ₹ 1 ಕೋಟಿ ಮಾತ್ರ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದ್ದರೂ ಪ್ರತಿ ಕ್ಷೇತ್ರಕ್ಕೆ ತಲಾ ₹ 2 ಕೋಟಿ ಬಿಡುಗಡೆ ಮಾಡಲಾಗಿದೆ. ಹೀಗೆ ಹೆಚ್ಚುವರಿಯಾಗಿ ಬಿಡುಗಡೆ ಮಾಡಿರುವ ಒಟ್ಟು ₹ 300 ಕೋಟಿಯನ್ನು, 2019–20ನೇ ಸಾಲಿನಲ್ಲಿ ಬಿಡುಗಡೆ ಮಾಡಲು ಬಾಕಿ ಇದ್ದ ₹ 300 ಕೋಟಿಗೆ ಹೊಂದಾ ಣಿಕೆ ಮಾಡಿಕೊಳ್ಳಬೇಕು. ಅಲ್ಲದೆ, ಜಿಲ್ಲಾ ಧಿಕಾರಿಗಳ ಖಾತೆಯಲ್ಲಿ ಪ್ರಸಕ್ತ ಲಭ್ಯವಿ ರುವ ಅನುದಾನ ಪೂರ್ಣವಾಗಿ ವೆಚ್ಚ ವಾದ ಬಳಿಕ ಪ್ರಸ್ತಾವನೆ ಸಲ್ಲಿಸಿದರೆ 2018–19ನೇ ಸಾಲಿನಲ್ಲಿ ಬಿಡುಗಡೆಗೆ ಬಾಕಿ ಇದ್ದ ₹ 127.69 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ’ ಎಂದು ತಿಳಿಸಿದ್ದರು.

* ಡಿ.ಸಿಗಳ ಖಾತೆಯಲ್ಲಿ ₹ 938.15 ಕೋಟಿ ಬಾಕಿ

* 2021ರ ಜುಲೈವರೆಗೆ ಸರಾಸರಿ ವೆಚ್ಚ ಕೇವಲ ಶೇ 17.21

* ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಕ್ಷೇತ್ರದಲ್ಲಿ ಶೂನ್ಯ ಪ್ರಗತಿ

***

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬಿಡುಗಡೆ ಆಗಿರುವ ಅನುದಾನದ ಕುಂಠಿತ ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಜಿಲ್ಲಾಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಉತ್ತಮ ಪ್ರಗತಿ ಸಾಧಿಸಬೇಕು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ (ಶಾಸಕರಿಗೆ ಬರೆದ ಪತ್ರದಲ್ಲಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು