‘ಕ್ಲೇಮ್ ಕಮಿಷನರ್’ | ಹೈಕೋರ್ಟ್‌ಗೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು: ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಉಂಟಾಗಿರುವ ಹಾನಿಯನ್ನು ಗಲಭೆಕೋರರಿಂದ ವಸೂಲಿ ಮಾಡಲು ‘ಕ್ಲೇಮ್ ಕಮಿಷನರ್’ ನೇಮಿಸುವಂತೆ ಹೈಕೋರ್ಟ್‌ಗೆ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಕೂಡಾ ಸಭೆಯಲ್ಲಿದ್ದರು.
ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಕ್ರಮಗಳ ಕುರಿತು ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು. ಗಲಭೆಕೋರರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಮತ್ತು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯೂ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ.
ವಿಶೇಷ ತನಿಖಾ ತಂಡ: ಪ್ರಕರಣದ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ತ್ವರಿತ ಹಾಗೂ ಪರಿಣಾಮಕಾರಿ ವಿಚಾರಣೆಗೆ ಅನುಕೂಲವಾಗುವಂತೆ ಮೂವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ.
ಆರೋಪಿಗಳಿಗೆ ಉಗ್ರ ಸಂಘಟನೆಗಳ ಸಂಪರ್ಕ ಇದೆಯೇ ಎಂಬ ಬಗ್ಗೆ ಪರಿಶೀಲನೆಗೆ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದ ತಂಡದಿಂದ ತನಿಖೆ ನಡೆಯಲಿದೆ. ಗೋಲಿಬಾರ್ ಪ್ರಕರಣದ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿಯೇ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.
‘ಆರೋಪಿಗೆ ಅಲ್ ಹಿಂದ್ ಉಗ್ರ ಸಂಘಟನೆ ನಂಟು’
ಡಿ.ಜೆ.ಹಳ್ಳಿ ಗಲಭೆ ಸಂಬಂಧ ಜೆಡಿಎಸ್ ಮುಖಂಡ ವಾಜೀದ್ ಹಾಗೂ ಸಮೀವುದ್ದೀನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಮೀವುದ್ದೀನ್‌ಗೆ ‘ಅಲ್ ಹಿಂದ್’ ಉಗ್ರ ಸಂಘಟನೆ ನಂಟು ಇರುವುದು ತನಿಖೆಯಿಂದ ಗೊತ್ತಾಗಿದೆ.
‘ಗಲಭೆ ಸಂಚಿನಲ್ಲಿ ಪುಲಿಕೇಶಿನಗರದ ನಿವಾಸಿ ಸಮೀವುದ್ದೀನ್ (37) ಸಹ ಭಾಗಿಯಾಗಿದ್ದ. ಎಸ್‌ಡಿಪಿಐಯ ಮುಜಾಮ್ಮಿಲ್ ಪಾಷಾ ಜೊತೆ ಸೇರಿ ಆತ ಗಲಭೆ ಸೃಷ್ಟಿಸಿದ್ದ. ‘ಅಲ್ ಹಿಂದ್’ ಸಂಘಟನೆ ಜೊತೆ ಒಡನಾಟ ಹೊಂದಿರುವ ಸಮೀವುದ್ದೀನ್, ಬಿಜೆಪಿ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದ. ಆತನನ್ನು ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಸುದ್ದಗುಂಟೆಪಾಳ್ಯ ಹಾಗೂ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಶಂಕಿತ ಉಗ್ರರ ನೆಲೆ ಪತ್ತೆಯಾಗಿತ್ತು. ಅವರ ಜೊತೆಯಲ್ಲೂ ಸಮೀವುದ್ದೀನ್ ಒಡನಾಟ ಹೊಂದಿರುವ ಅನುಮಾನವಿದೆ’ ಎಂದೂ ಅಧಿಕಾರಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.