ಶುಕ್ರವಾರ, ಅಕ್ಟೋಬರ್ 22, 2021
29 °C
ಯುಪಿಎಸ್‌ಸಿ ತೀರ್ಮಾನ ಎತ್ತಿಹಿಡಿದ ಸಿಎಟಿ

ಐಎಎಸ್‌ ಬಡ್ತಿ: ಸಿ.ಎಂ ಪಿಎಸ್ ರಾಜಪ್ಪ ಹೆಸರು ತಿರಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಎಸ್‌ಯೇತರ ವೃಂದದ ಅಧಿಕಾರಿಗಳಿಗೆ 2016ರ ಬ್ಯಾಚ್‌ನ ಐಎಎಸ್‌ಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಎಚ್‌.ಆರ್‌. ರಾಜಪ್ಪ ಹೆಸರನ್ನು ತಿರಸ್ಕರಿಸಿರುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಿರ್ಧಾರವನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಎತ್ತಿಹಿಡಿದಿದೆ.

2016ರ ಸಾಲಿನಲ್ಲಿ ಕೆಎಎಸ್‌ಯೇತರ ವೃಂದದವರಿಗಾಗಿ ಖಾಲಿ ಇದ್ದ ಮೂರು ಐಎಎಸ್‌ ಅಧಿಕಾರಿಗಳ ಹುದ್ದೆಯನ್ನು ಭರ್ತಿ ಮಾಡಲು 2017ರಲ್ಲಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಬಡ್ತಿಗೆ ಅರ್ಹರಾದ ಅಧಿಕಾರಿಗಳ ಪಟ್ಟಿ ಸಲ್ಲಿಸಲು 2017ರ ಜೂನ್‌ 30 ಕೊನೆಯ ದಿನವಾಗಿತ್ತು. ರಾಜಪ್ಪ ಹೆಸರನ್ನು ಎರಡೂವರೆ ವರ್ಷಗಳ ಬಳಿಕ ಪಟ್ಟಿಗೆ ಸೇರಿಸಿ, ಶಿಫಾರಸು ಮಾಡಿರುವ ಕ್ರಮ ಸಮರ್ಥನೀಯವಲ್ಲ ಎಂದು ನ್ಯಾಯಮಂಡಳಿ ಹೇಳಿದೆ.

‘ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಗೌರವ್‌ ಗುಪ್ತ ಸರಿಯಾಗಿ ಯೋಚಿಸದೆ ಎರಡೂವರೆ ವರ್ಷಗಳ ಬಳಿಕ ರಾಜಪ್ಪ ಹೆಸರನ್ನು ಶಿಫಾರಸು ಮಾಡಿದ್ದಾರೆ. ಮೂರು ಹುದ್ದೆಗಳಿಗೆ ಬಡ್ತಿ ನೀಡಲು 15 ಅಧಿಕಾರಿಗಳ ಹೆಸರನ್ನು ಮಾತ್ರ ಶಿಫಾರಸು ಮಾಡಬೇಕಿತ್ತು. 15 ಮಂದಿಯ ಪಟ್ಟಿ ಇದ್ದಾಗಲೂ 16ನೇ ಹೆಸರಾಗಿ ರಾಜಪ್ಪ ಹೆಸರನ್ನು ಶಿಫಾರಸು ಮಾಡಿದ್ದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಸಿಎಟಿಯ ಚಂಡೀಗಢ ಪೀಠದ ಸುರೇಶ್‌ ಕುಮಾರ್‌ ಮೋಂಗಾ ಮತ್ತು ದೆಹಲಿ ಪ್ರಧಾನ ಪೀಠದ ಮೊಹಮ್ಮದ್‌ ಜಮ್‌ಶೆಡ್‌ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅಕ್ಟೋಬರ್‌ 4ರಂದು ನೀಡಿರುವ ಆದೇಶದಲ್ಲಿ ಹೇಳಿದೆ.

ಆರಂಭದಿಂದಲೂ ಹಲವು ಬಾರಿ ಪಟ್ಟಿಯನ್ನು ಪರಿಷ್ಕರಿಸಲಾಗಿತ್ತು. ನ್ಯಾಯಾಲಯಗಳ ಆದೇಶದಿಂದ ಡಾ.ಎ. ಲೋಕೇಶ್‌ ಮತ್ತು ಡಾ.ವೈ. ಮಂಜುನಾಥ್‌ ಹೆಸರನ್ನು ಪರಿಶೀಲನಾ ಪಟ್ಟಿಗೆ ಸೇರಿಸಲಾಗಿತ್ತು. ನಂತರ ಶಿಸ್ತುಕ್ರಮ ಎದುರಿಸುತ್ತಿರುವ ಕಾರಣಕ್ಕಾಗಿ ಕೆ.ಆರ್‌. ರುದ್ರಪ್ಪ ಹೆಸರನ್ನು ಕೈಬಿಡಲಾಗಿತ್ತು. ಅವರ ಬದಲಿಗೆ ಪ್ರಧಾನ ಎಂಜಿನಿಯರ್‌ ಬಿ.ಜಿ ಗುರುಪಾದಸ್ವಾಮಿ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆ ಬಳಿಕ ರಾಜಪ್ಪ ಹೆಸರನ್ನು ಶಿಫಾರಸು ಮಾಡಲಾಗಿತ್ತು.

‘2019ರ ಸೆಪ್ಟೆಂಬರ್‌ 14ರಂದು ಗುರುಪಾದಸ್ವಾಮಿ ಹೆಸರನ್ನು ಸೇರಿಸಿ 15 ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಕಳುಹಿಸಲಾಗಿತ್ತು. ಅದೇ ದಿನ ಮತ್ತೊಂದು ಪತ್ರದ ಮೂಲಕ ರಾಜಪ್ಪ ಹೆಸರನ್ನೂ ಶಿಫಾರಸು ಮಾಡಲಾಗಿದೆ. ಅದಕ್ಕೂ ಮೊದಲು ಸೇರಿಸಿದ್ದ ಗುರುಪಾದಸ್ವಾಮಿ ಹೆಸರನ್ನು ಹಿಂಪಡೆಯುವ ಪ್ರಕ್ರಿಯೆಯೂ ನಡೆದಿಲ್ಲ. ತರಾತುರಿಯಲ್ಲಿ ರಾಜಪ್ಪ ಹೆಸರನ್ನು ಶಿಫಾರಸು ಮಾಡಿರುವುದು ಸಂಶಯಾಸ್ಪದ ರೀತಿಯಲ್ಲಿದೆ’ ಎಂದು ಪೀಠ ಹೇಳಿದೆ.

2020ರ ಜೂನ್‌ 22ರಂದು ಸಭೆ ನಡೆಸಿದ್ದ ಯುಪಿಎಸ್‌ಸಿ ಆಯ್ಕೆ ಸಮಿತಿ, ರಾಜಪ್ಪ ಹೆಸರನ್ನು ಪರಿಶೀಲನಾ ಪಟ್ಟಿಯಿಂದ ಕೈಬಿಟ್ಟಿತ್ತು. ಆಯೋಗದ ನಿರ್ಧಾರವನ್ನು ಎತ್ತಿಹಿಡಿದಿರುವ ಮಂಡಳಿ, ‘ಆಯ್ಕೆ ಪ್ರಕ್ರಿಯೆಯಲ್ಲಿ ಶಿಫಾರಸು ಕಳಿಸಲು ನಿಗದಿತ ದಿನಾಂಕದ ಗಡುವು ನೀಡಲಾಗಿತ್ತು. ಅರ್ಹತೆಯನ್ನು ಗುರುತಿಸುವುದಕ್ಕಾಗಿ ಗಡುವು ಇತ್ತು. ಅದನ್ನು ಮೀರಿ ಅರ್ಜಿದಾರರ ಹೆಸರು ಕಳುಹಿಸಲಾಗಿತ್ತು. ಆಯೋಗದ ನಿರ್ಧಾರದಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ’ ಎಂದು ಆದೇಶದಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು