ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಿಂದ ದಿಲ್ಲಿವರೆಗೆ ‘ನಂದಿನಿ’ ಘಮ

ಹೆಚ್ಚಿದ ಹಾಲು ಉತ್ಪಾದನೆಗೆ ಪರಿಹಾರ: ಕೆಎಂಎಫ್‌ ಹೊಸ ಪ್ರಯತ್ನ
Last Updated 20 ಅಕ್ಟೋಬರ್ 2021, 20:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಲುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌)ಹಳ್ಳಿ ಮಟ್ಟದಿಂದ ರಾಜಧಾನಿ ದೆಹಲಿಯವರೆಗೆ ತಲುಪಿಸುವ ವಿಶೇಷ ಯೋಜನೆ ರೂಪಿಸಿದೆ.

‘ಸಮಗ್ರ ವ್ಯಾಪಾರ ಅಭಿವೃದ್ಧಿ ಯೋಜನೆ’ ಅಡಿಯಲ್ಲಿ ದೇಶದ ಪ್ರತಿಯೊಂದು ಹಳ್ಳಿ, ತಾಲ್ಲೂಕು, ಜಿಲ್ಲೆ ಮತ್ತು ರಾಜಧಾನಿಗಳಿಗೆ ಕೆಎಂಎಫ್‌ ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿರುವುದಾಗಿ ಕೆಎಂಎಫ್‌ ಮೂಲಗಳು ತಿಳಿಸಿವೆ.

ಕೋವಿಡ್‌–19 ಬಳಿಕ ಉದ್ಯೋಗ ಕಳೆದುಕೊಂಡ ಹಲವರು ಹೈನುಗಾರಿಕೆಯನ್ನು ಕೈಗೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇದು ಕೂಡಾ ಹಾಲಿನ ಉತ್ಪಾದನೆ ಹೆಚ್ಚಾಗಲು ಕಾರಣವಾಗಿದೆ.
ಹೆಚ್ಚುವರಿಯಾಗಿ ಉತ್ಪಾದನೆ ಆಗುತ್ತಿರುವ ಹಾಲು ಮತ್ತು ಇತರ ಉತ್ಪನ್ನಗಳ ವಿಲೇವಾರಿ ಈಗ ಸವಾಲಾಗಿ ಪರಿಣಮಿಸಿದೆ.

ಕೆಎಂಎಫ್‌ ಸದ್ಯ 140 ಉತ್ಪನ್ನಗಳನ್ನು ತಯಾರಿಸುತ್ತಿದೆ. ಈ ಯೋಜನೆಯ ಭಾಗವಾಗಿ ಗ್ರಾಮೀಣ ಪ್ರದೇಶ
ದಲ್ಲಿ ಹಾಲಿನ ಪಾರ್ಲರ್‌ಗಳನ್ನು ಸ್ಥಾಪಿಸಲಾಗುವುದು. ಅಲ್ಲಿ ಕನಿಷ್ಠ 20 ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ರಾಜ್ಯದಲ್ಲಿ ಪ್ರತಿ ದಿನ 84 ಲಕ್ಷ ಕೆ.ಜಿಗೂ ಹೆಚ್ಚು ಹಾಲು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ
68 ಲಕ್ಷ ಕೆ.ಜಿ. ಬೆಣ್ಣೆ, ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗು
ತ್ತಿದೆ. ಸುಮಾರು 10 ಲಕ್ಷ ಕೆ.ಜಿ.ಗೂ ಹೆಚ್ಚು ಹಾಲನ್ನು ಪುಡಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಹಾಲಿನ ಪುಡಿ ತಯಾರಿಸುವುದು ಮತ್ತು ವಿತರಿಸುವುದು ಕೆಎಂಎಫ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜತೆಗೆ, ಆರ್ಥಿಕವಾಗಿಯೂ ಹೊರೆಯಾಗಿದೆ. ಅಂಗನವಾಡಿ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲೂ ವಿತರಿಸಿದರೂ ಸಂಪೂರ್ಣವಾಗಿ ಹಾಲಿನ ಪುಡಿ ಖರ್ಚಾಗದೇ ಉಳಿಯುತ್ತಿದೆ ಎಂದು ತಿಳಿಸಿದ್ದಾರೆ.

‘ಹಾಲಿನ ಪುಡಿಯನ್ನು 9 ತಿಂಗಳ ಅವಧಿಯವರೆಗೆ ಸುರಕ್ಷಿತವಾಗಿಡಬಹುದು. ಸದ್ಯ ಕೆಎಂಎಫ್‌ನಲ್ಲಿ ಐದು ತಿಂಗಳ ಹಳೆಯ 20 ಸಾವಿರ ಟನ್‌ ಹಾಲಿನ ಪುಡಿ ಸಂಗ್ರಹದಲ್ಲಿದೆ. ತೆಲಂಗಾಣ, ಒಡಿಶಾ ಮತ್ತು ಬಿಹಾರಕ್ಕೆ ಸಹ ಬೇಡಿಕೆಗೆ ತಕ್ಕಂತೆ ಹಾಲಿನ ಪುಡಿ ಕಳುಹಿಸಲಾಗುತ್ತಿದೆ. ಆದರೆ, ಹಾಲಿನ ಪುಡಿಗೆ ನಿರೀಕ್ಷೆಗೆ ತಕ್ಕಂತೆ ದರ ದೊರೆಯುತ್ತಿಲ್ಲ’ ಎಂದು ಅಧಿಕಾರಿಗಳು ವಿವರಿಸಿದರು.

‘ಹಾಲಿನ ಉತ್ಪಾದನೆ ತಕ್ಕ ಹಾಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ.
ರೈತರಿಗೆ ಕೊಬ್ಬಿನಾಂಶ ಆಧಾರದ ಮೇಲೆ ದರ ನಿಗದಿಪಡಿಸಲಾಗುತ್ತದೆ. 3.5 ರಷ್ಟು ಕೊಬ್ಬಿನಾಂಶ ಇದ್ದ ಪ್ರತಿ ಲೀಟರ್‌ ಹಾಲಿಗೆ ₹24.05 ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT