ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನೀಡಿದರೆ ಅಭಿನಂದನೆ, ಇಲ್ಲವಾದರೆ ಪಾಠ ಕಲಿಸುತ್ತೇವೆ: ಸ್ವಾಮೀಜಿ ಎಚ್ಚರಿಕೆ

ಸಚಿವರು-ಶಾಸಕರ ಸಭೆ
Last Updated 6 ಸೆಪ್ಟೆಂಬರ್ 2020, 9:54 IST
ಅಕ್ಷರ ಗಾತ್ರ

ಹರಿಹರ: ‘ಬಿಜೆಪಿ ಅಧಿಕಾರಿಕ್ಕೆ ಬಂದಿದ್ದೇ ಶ್ರೀರಾಮನ ಹೆಸರಲ್ಲಿ. ಶ್ರೀರಾಮನ ರಾಮಾಯಣದ ಕರ್ತೃ ವಾಲ್ಮೀಕಿ. ಹಾಗಾಗಿ ವಾಲ್ಮೀಕಿ ಸಮಾಜದ ಯಾವುದೇ ಬೇಡಿಕೆಯನ್ನು ಈಗಿನ ಬಿಜೆಪಿ ಸರ್ಕಾರ ತಿರಸ್ಕರಿಸದು. ಸೆ.21ಕ್ಕೆ ಈ ಬಗ್ಗೆ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದಿಸದರೆ ಅಭಿನಂದನೆ ಸಲ್ಲಿಸುತ್ತೇವೆ. ಮೀನಾಮೇಷ ಮಾಡಿದರೆ ಪಾಠ ಕಲಿಸುತ್ತೇವೆ’ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ವಾಲ್ಮಿಕಿ ಸಮುದಾಯದ ಸಚಿವರು, ಶಾಸಕರ ಜತೆಗೆ ಮೀಸಲಾತಿಯ ಬಗ್ಗೆ ಭಾನುವಾರ ರಾಜನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಹೋರಾಟ ಮಾಡಿಕೊಂಡು ಬಂದಿದ್ದರೂ ಮೀಸಲಾತಿ ಹೆಚ್ಚಿಸಿಲ್ಲ. ಆದರೆ ಯಾವುದೇ ಹೋರಾಟ ಮಾಡಿದವರಿಗೆ ಶೇ 10 ಮೀಸಲಾತಿ ನೀಡಲಾಗಿದೆ. ರಾಜಕಾರಣಿಗಳು ನಮ್ಮನ್ನು ನಿಷ್ಠುರ ಮಾಡಬಾರದು. ಪಕ್ಷಭೇದ ಮರೆತು ಗಟ್ಟಿ ನಿರ್ಧಾರಕ್ಕೆ ಬದ್ಧರಾಗಬೇಕು. ಮೀಸಲು ಘೋಷಣೆ ಆಗದಿದ್ದರೆ ಹೋರಾಟ ಯಾವ ಸ್ವರೂಪ ಪಡೆಯುತ್ತದೆಯೋ ಗೊತ್ತಿಲ್ಲ ಎಂದು ಹೇಳಿದರು.

ಸ್ವಾಮೀಜಿ ತಿಳಿಸಿದರೆ ಎಸ್‌ಟಿ ಮೀಸಲು ಕ್ಷೇತ್ರದಿಂದ ಗೆದ್ದರಿರುವ ಎಲ್ಲ ಶಾಸಕರು ರಾಜೀನಾಮೆ ನೀಡಲು ಸಿದ್ಧ ಎಂದು ಸಭೆಯಲ್ಲಿದ್ದ ಶಾಸಕರು ತಿಳಿಸಿದರು.

ಇದಕ್ಕೆ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ‘ರಾಜೀನಾಮೆ ನೀಡುವುದು ಪರಿಹಾರವಲ್ಲ. ಅಧಿಕಾರದಲ್ಲಿದ್ದೇ, ಹೋರಾಟ ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ’ ಎಂದು ತಿಳಿಸಿದರು.

‘ಶ್ರೀರಾಮುಲು ಸರ್ಕಾರದಲ್ಲಿದ್ದಾರೆ. ಅವರ ನೇತೃತ್ವದಲ್ಲೇ ಹೋರಾಟ ಮಾಡೋಣ. ಹಲವು ವರ್ಷಗಳಿಂದ ಮೀಸಲು ಹೆಚ್ಚಳಕ್ಕೆ ಹೋರಾಟ ನಡೆಸಿದ್ದೇವೆ. ಆದ್ರೆ, ಸರ್ಕಾರ ಮೇಲ್ವರ್ಗದವರಿಗೆ ಶೇ. 10ರಷ್ಟು ಮೀಸಲು ಎಲ್ಲಿಂದ ನೀಡಿದೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜೀನಾಮೆ ನೀಡುವುದರಿಂದ ಪ್ರಯೋಜನವಿಲ್ಲ ಎಂಬ ಸತೀಶ್‌ ಜಾರಕಿಹೊಳೆ ಮಾತಿನಲ್ಲಿ ಸತ್ಯಾಂಶವಿದೆ. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ್ರೆ, 24 ಗಂಟೆಯಲ್ಲಿ ಶೇ, 7.5ರಷ್ಟು ಮೀಸಲು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ’ ಎಂದು ಸಚಿವ ಶ್ರೀರಾಮುಲು ತಿಳಿಸಿದರು.

‘ರಾಜನಹಳ್ಳಿಯಿಂದ ರಾಜಧಾನಿವರೆಗೆ ಶ್ರೀಗಳು ಪಾದಯಾತ್ರೆ ನಡೆಸಿದರು. ಅಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿತ್ತು. ಸತೀಶ್‌ ಜಾರಕಿಹೊಳಿ ಅವರು ಸಚಿವರಾಗಿದ್ದರು’ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಎಲ್ಲರೂ ಒಗ್ಗಟ್ಟಾಗಿದ್ದರೆ ಇನ್ನಷ್ಟು ಶಕ್ತಿ ಹೆಚ್ಚುತ್ತದೆ.ನ್ಯಾ.ನಾಗಮೋಹನದಾಸ್‌ ವರದಿಯಲ್ಲಿ ಶೇ. 5ರಷ್ಟು ಮೀಸಲಿಗೆ ಶಿಫಾರಸ್ಸು ಮಾಡಿದ್ದಾರೆ. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ವಾಲ್ಮೀಕಿ ಸಮುದಾಯಕ್ಕೆ ಶೇ 7.5 ಮೀಸಲು ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

‘ನ್ಯಾ.ನಾಗಮೋಹನದಾಸ್‌ ವರದಿಯಲ್ಲಿ ಏನಿದೆ ಎಂಬದು ಗೊತ್ತಿಲ್ಲ. ಅದರಲ್ಲಿ ಶೇ. 5 ಮೀಸಲಾತಿ ಶಿಫಾರಸ್ಸು ಮಾಡಿದ್ದಾರೆ ಎಂಬ ತಪ್ಪು ಸಂದೇಶ ನೀಡಬೇಡಿ’ ಎಂದು ಸುರಪುರದ ಶಾಸಕ ರಾಜುಗೌಡವಿರೋಧ ವ್ಯಕ್ತಪಡಿಸಿದರು.

‘ಸತೀಶ್‌ ಜಾರಕಿಹೊಳೆ, ಶ್ರೀರಾಮುಲು ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡೋಣ. ಅಧಿವೇಶನಕ್ಕೂ ಮುನ್ನ ಸಿಎಂ ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ಅಧಿವೇಶನದಲ್ಲಿ ಇದು ಚರ್ಚೆಯಾಗಲಿ. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಹೋರಾಟ’ ಎಂದು ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.

ಶಾಸಕರಾದ ಎಸ್‌.ವಿ. ರಾಮಚಂದ್ರಪ್ಪ, ಗಣೇಶ್‌, ಇ. ತುಕಾರಾಂ, ರಘುಮೂರ್ತಿ, ಅನಿಲ್‌ ಚಿಕ್ಕಮಾದು, ಪ್ರತಾಪ್‌ಗೌಡ, ಸಂಸದ ದೇವೇಂದ್ರಪ್ಪ, ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT