ಸೋಮವಾರ, ಸೆಪ್ಟೆಂಬರ್ 27, 2021
22 °C

ಕೇಂದ್ರದ ಅನ್ಯಾಯ ಪ್ರಶ್ನಿಸುವ ತಾಕತ್ತು ಬಿಜೆಪಿ ನಾಯಕರಿಗಿದೆಯೇ? ಕಾಂಗ್ರೆಸ್‌ 

ಪ್ರಜಾವಾಣಿ ವೆಬ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕೊಡದಿರುವ ಕುರಿತ ಚರ್ಚೆಗೆ ಬಿಜೆಪಿ ತಯಾರಿದೆಯೇ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. 

ಕೇಂದ್ರ ಪುರಸ್ಕೃತ ಹತ್ತು ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಹಣ ನೀಡಿಲ್ಲ. ರಾಜ್ಯ ಸರ್ಕಾರ ಕೂಡ ಹೊಂದಾಣಿಕೆ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಬಹುತೇಕ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ. ಈ ಬಗ್ಗೆ ‘ಕೈಕೊಟ್ಟ ಕೇಂದ್ರ: ಯೋಜನೆ ಸ್ಥಗಿತ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಜಾವಾಣಿಯ ಗುರುವಾರದ ಸಂಚಿಕೆಯಲ್ಲಿ ಅಗ್ರ ವರದಿ ಪ್ರಕಟಿಸಲಾಗಿತ್ತು. 

ಇದೇ ವರದಿಯನ್ನು ಉಲ್ಲೇಖಿಸಿ ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಟ್ವೀಟ್‌ ಮಾಡಿ ಬಿಜೆಪಿಯ ನಾಯಕರನ್ನು ಟೀಕಿಸಲಾಗಿದೆ. 

‘ವೈಫಲ್ಯಗಳು ಚರ್ಚೆ ಆಗದಂತೆ ತಡೆಯಲು ಬಿಜೆಪಿ ನಾಯಕರು ದಿಕ್ಕುತಪ್ಪಿಸಿ ಆಡಳಿತ ನಡೆಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ಕೊಡದಿರುವ ಚರ್ಚೆಗೆ ಬಿಜೆಪಿ ತಯಾರಿದೆಯೇ? ಮೋದಿ ಮುಖಸ್ತುತಿ ಮಾಡಿದರೆ ರಾಜ್ಯಕ್ಕಾದ ಅನ್ಯಾಯ ಸರಿಹೋಗುವುದೇ? ಈ ಅನ್ಯಾಯ ಪ್ರಶ್ನಿಸುವ ತಾಕತ್ತು ನಿಮ್ಮಲ್ಲಿ ಯಾರಿಗಾದರೂ ಇದೆಯೇ’ ಎಂದು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದೆ.  

ಗ್ರಾಮ ಸಡಕ್‌, ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಆವಾಸ್‌, ಕೃಷಿ ಯಾಂತ್ರಿಕತೆಯ ಮೇಲಿನ ಉಪ ಅಭಿಯಾನ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಸಂವಿಧಾನದ 275(1)ನೇ ವಿಧಿಯಡಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆ ಮತ್ತು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅನುದಾನ ಸಿಕ್ಕಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು