ಭಾನುವಾರ, ಜೂನ್ 26, 2022
26 °C

ಕಾಂಗ್ರೆಸ್‌ ಪಕ್ಷದಿಂದ ದಲಿತ ನಾಯಕರಿಗೆ ಅನ್ಯಾಯ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಲಿತ ಮುಖ್ಯಮಂತ್ರಿ ಎಂಬ ಪದ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರ ಕನಸಿಗೆ ಭಂಗ ತರುತ್ತಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ. 

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಕಾಂಗ್ರೆಸ್‌ ಪಕ್ಷ ಪದೇ ಪದೇ ದಲಿತ ನಾಯಕರಿಗೆ ಅನ್ಯಾಯ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷರಾದವರು ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗುವುದು ಅಲಿಖಿತ ನಿಯಮವಾಗಿತ್ತು. 2013 ರಲ್ಲಿ ದಲಿತ ಸಮುದಾಯದ ಪ್ರಬಲ ನಾಯಕ ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗ ಕುತಂತ್ರವೇ ನಡೆದು ಹೋಯಿತು’ ಎಂದು ಟೀಕಿಸಿದೆ. 

‘ಪರಮೇಶ್ವರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದರಿತ ಸಿದ್ದರಾಮಯ್ಯ, ಕುತಂತ್ರದಿಂದ ದಲಿತ ನಾಯಕನನ್ನು ಸೋಲಿಸಿದರು. ಕಾಂಗ್ರೆಸ್‌ ಪಕ್ಷದಲ್ಲಿ ಈಗ ದಲಿತ ಸಿಎಂ ವಾದ ಮತ್ತೆ ಮುನ್ನೆಲೆಗೆ ಬಂದಿದೆ. 2013 ರ ಇತಿಹಾಸ 2023 ರಲ್ಲೂ ಮರುಕಳಿಸುವ ಸೂಚನೆ ಲಭಿಸಿದೆ, ಪರಮೇಶ್ವರ್‌ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ’ ಎಂದು ಬಿಜೆಪಿ ಟ್ವೀಟಿಸಿದೆ. 

‘ದಲಿತ ನಾಯಕ ಪರಮೇಶ್ವರ್‌ ಅವರನ್ನು 2013 ರಲ್ಲಿ ಸೋಲಿಸಲು ಸಿದ್ದರಾಮಯ್ಯ ಒಬ್ಬರೇ ಶ್ರಮಿಸಿದ್ದರು. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೂ ಕೈ ಜೋಡಿಸುತ್ತಿದ್ದಾರೆ. ಇವರಿಬ್ಬರೂ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ದಲಿತರ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟೊಂದು ಅಸಹನೆ ಏಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ. 

‘ದಲಿತರ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯ ಅವರೇ, ಪರಮೇಶ್ವರ್‌, ಖರ್ಗೆ ಅವರಂತಹ ದಲಿತ ನಾಯಕರಿಗೆ ನೀವು ಅವಕಾಶ ವಂಚಿಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ. ಪದೇ ಪದೇ ದಲಿತ ಸಮುದಾಯದ ನಂಬಿಕೆಗೆ ದ್ರೋಹ ಬಗೆಯುವ ನಿಮ್ಮನ್ನು ರಾಜ್ಯದ ದಲಿತ ಸಮುದಾಯವೆಂದಿಗೂ ಕ್ಷಮಿಸದು’ ಎಂದು ವಾಗ್ದಾಳಿ ನಡೆಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು